ಜೆನೆರಿಕ್ ಮೆಡಿಸಿನ್
ನಮ್ಮ ದೇಶದ ಆರ್ಥಿಕ ಬೆಳೆವಣಿಗೆಯಲ್ಲಿ ವೈದ್ಯಕೀಯ ಕ್ಷೇತ್ರದ ಕೊಡುಗೆ ತುಂಬಾ ಇದೆ. ಆದರೆ ದುಬಾರಿ ವೈದ್ಯಕೀಯ ಖರ್ಚುಗಳ ಕಾರಣದಿಂದ ವರ್ಷಕ್ಕೆ ಸುಮಾರು ಆರು ಕೋಟಿ ಜನ ಬಡತನಕ್ಕೆ ಒಳಗಾಗುತ್ತಿದ್ದಾರೆ. ಸಾಮಾನ್ಯ ಜನರ 70% ಸಂಬಳ ಮಾತ್ರೆ, ಔಷಧಿ ಹಾಗೂ ಇತರೆ ವೈದ್ಯಕೀಯ ಪರಿಶೀಲನೆಗೆ ಖರ್ಚಗುತ್ತಿವೆ ಎಂಬುದು ಆಶ್ಚರ್ಯಕರವಾದ ಸಂಗತಿ.
ಇತ್ತೀಚಿನ ದಿನಗಳಲ್ಲಿ ಔಷಧಿ ಉತ್ಪನ್ನಗಳಲ್ಲಿ ಹಗರಣಗಳು ನಡೆಯುತ್ತಿವೆ. ಔಷಧಿ ಅಂಗಡಿಯವರು ತಾವು ಖರೀದಿಸಿದ ಔಷಧಿಯನ್ನು 4-5 ಪಟ್ಟು ಹೆಚ್ಚಿನ ಮೊತ್ತಕ್ಕೆ ಮಾರುತ್ತಿದ್ದಾರೆ. ಉದಾಹರಣೆಗೆ CEFDIS LB TAB ಎಂಬುದು ಒಂದು ಆಂಟಿಬಯೋಟಿಕ್ ಮಾತ್ರೆಯಾಗಿದ್ದು, ಇದನ್ನು 148 ರುಪಾಯಿಗೆ ಖರೀದಿಸಿ 1300 ರುಪಾಯಿಗೆ ರೋಗಿಗಳಿಗೆ ಮಾರಲಾಗುತ್ತಿದೆ. ತಾವು ಖರೀದಿಸಿದ ಹಾಗೂ ಮಾರಿದ ಮೊತ್ತದಲ್ಲಿ ಭೂಮಿ ಮತ್ತು ಆಕಾಶದಷ್ಟು ಅಂತರವಿದೆ. ನಾವು ಬಳಸುವ ಸಾಮಾನ್ಯ ಔಷಧಿಗಳ ಬೆಲೆಯಲ್ಲಿ ಇಷ್ಟು ಮೋಸವಾದರೆ ಇನ್ನೂ ಕ್ಯಾನ್ಸರ್, ಹೆಚ್. ಐ. ವಿ. ಅಂತಹ ದೊಡ್ಡ ರೋಗಗಳ ಔಷಧಿಗಳ ಬೆಲೆಯಲ್ಲಿ ಇನ್ನೆಷ್ಟು ಮೋಸವಾಗಿರಬಹುದೆಂದು ಒಮ್ಮೆ ಯೋಚಿಸಿ. ನಮ್ಮ ಬಾಲ್ಯದಿನಗಳಲ್ಲಿ ವಾಸ್ಕೋ. ಡಿ. ಗಾಮ ಭಾರತಕ್ಕೆ ಬಂದು 64 ಪಟ್ಟು ಹೆಚ್ಚಿನ ಲಾಭಗಳಿಸಿದ್ದ ( ಲೂಟಿ ಹೊಡೆದಿದ್ದ ) ಎಂದು ಕೇಳಿದ್ದೆವು. ಈಗ ಆ ಕೆಲಸವನ್ನ ಔಷಧಿ ಅಂಗಡಿಗಳು ಮಾಡುತ್ತಿವೆ ಎಂದು ಅನಿಸುತ್ತಿದೆ.
ಒಬ್ಬ ಸಾಮಾನ್ಯ ಮನುಷ್ಯ ಬಟ್ಟೆ ಅಂಗಡಿಯಲ್ಲಿ ಅಥವಾ ಇನ್ಯಾವುದೆ ಅಂಗಡಿಗಳಲ್ಲಿ ನೂರು ಇನ್ನೂರು ರೂಪಾಯಿಗಳನ್ನು ಚೌಕಾಸಿ ಮಾಡುತ್ತಾನೆ ಆದರೆ ಔಷಧಿ ಅಂಗಡಿಯಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ಆತ ಚೌಕಾಸಿ ಮಾಡುವುದಿಲ್ಲ. ಇದನ್ನೆ ಕೆಲ ವಂಚಕರು ದುರುಪಯೋಗ ಪಡೆದು ದೊಡ್ಡ ಮೊತ್ತಕ್ಕೆ ಮಾತ್ರೆ ಹಾಗೂ ಔಷಧಿಗಳನ್ನು ಮಾರುತ್ತಿದ್ದಾರೆ. ರೋಗಿಗಳನ್ನು ವಂಚಿಸುತ್ತಿದ್ದಾರೆ. ಇಂತಹ ವಂಚನೆಗಳು ನಿಲ್ಲಬೇಕಾದಲ್ಲಿ ನಮಗೆ ಜೆನೆರಿಕ್ ಮೆಡಿಸಿನ್ ಗಳ ಅವಶ್ಯಕವಿದೆ.
*ಏನಿದು ಜನರಿಕ್ ಮೆಡಿಸಿನ್?
ಯಾವುದೆ ಫಾರ್ಮಸಿಟಿಕಲ್ ಕಂಪನಿ ಒಂದು ಔಷದಿಯನ್ನು ಕಂಡು ಹಿಡಿದರೆ, ಅದರ ಉತ್ಪಾದನೆಯ 10 ವರ್ಷದ ರೈಟ್ಸ್ ಪಡೆದಿರುತ್ತಾರೆ. ಒಮ್ಮೆ ಪೆಟೆಂಟ್ ರೈಟ್ಸ್ ಮುಗಿದರೆ ಆ ಔಷಧಿಯ ಉತ್ಪಾದನೆಯನ್ನು ಇತರೆ ಫಾರ್ಮಸಿಟಿಕಲ್ ಕಂಪನಿಗಳು ಮಾಡಿ ಮಾರಬಹುದು. ಈ ರೀತಿ ಮಾರುವ ಔಷಧಿಗಳನ್ನು ಜೆನೆರಿಕ್ ಮೆಡಿಸಿನ್ ಎಂದು ಕರೆಯುತ್ತೇವೆ.
ಜೆನೆರಿಕ್ ಮೆಡಿಸಿನ್ ಗಳು ಸಾಧಾರಣ ಜ್ವರದಿಂದ ಹಿಡಿದು ಕ್ಯಾನ್ಸರ್ ವರೆಗಿನ ಎಲ್ಲ ರೋಗಗಳಿಗು ಲಭ್ಯವಿದೆ. ಇವುಗಳು ಬ್ರಾಂಡೆಡ್ ಮೆಡಿಸಿನ್ ಗಳಿಗಿಂತ 30%-70% ಕಡಿಮೆ ಧರದಲ್ಲಿ ದೊರಕುತ್ತವೆ. ಜೆನೆರಿಕ್ ಮೆಡಿಸಿನ್ ಹಾಗೂ ಬ್ರಾಂಡೆಡ್ ಮೆಡಿಸಿನ್ ಗಳ ಕೆಮಿಕಲ್ ಕಂಪೊಸಿಷನ್, ಉಪಯೋಗಗಳು, ಅಡ್ಡ ಪರಿಣಾಮಗಳು ಒಂದೇಯಾಗಿರುತ್ತದೆ.
ಕೆಲ ವೈದ್ಯರು ರೋಗಿಗಳಿಗೆ ಜೆನೆರಿಕ್ ಮೆಡಿಸಿನ್ ಗಳನ್ನು ಉಪಯೋಗಿಸಲು ಸುಚಿಸುವುದಿಲ್ಲ. ಜೆನೆರಿಕ್ ಮೆಡಿಸಿನ್ ಗಳು ನಿಧಾನವಾಗಿ ಪ್ರತಿಕ್ರಿಯಿಸುತ್ತದೆ ಮತ್ತು ರೋಗಿಗಳಿಗೆ ಅಡ್ಡ ಪರಿಣಾಮ ಭೀರುತ್ತದೆ ಎಂದು ಪುಷ್ಟಿಕರಿಸುತ್ತಾರೆ. ಹಲವಾರು ರೋಗಿಗಳಿಗೆ ಬ್ರಾಂಡೆಡ್ ಮೆಡಿಸಿನ್ ಗಳಿಂದಲೂ ಕೂಡ ಅಡ್ಡ ಪರಿಣಾಮ ಭೀರುತ್ತದೆ. ಅವುಗಳನ್ನು ಯಾರು ಪ್ರಶ್ನಿಸುವುದಿಲ್ಲ ಆದರೆ ಜೆನೆರಿಕ್ ಮೆಡಿಸಿನ್ ಗಳಿಗೆ ಬಂದಾಗ ಮಾತ್ರ ಈ ಪ್ರಶ್ನೆ ಏಕೆ ಉದ್ಭವಿಸುತ್ತದೆ ಎಂಬುದು ನನ್ನ ಪ್ರಶ್ನೆ?
ನೈಜ್ಯ ಸತ್ಯವಿಷ್ಟೇ ಔಷಧಿ ಮಾರಾಟಗಾರರಿಗೂ ಮತ್ತು ವೈದ್ಯರ ನಡುವೆ ಇಂತಿಷ್ಟು ಕಮಿಷನ್ ಕೊಡಬೇಕೆಂದು ಮಾತುಕತೆಯಾಗಿರುತ್ತದೆ. ಹಾಗಾಗಿ ವೈದ್ಯರು ರೋಗಿಗಳಿಗೆ ಅದೆ ಔಷಧಿ ಅಂಗಡಿಗೆ ಹೋಗಿರೆಂದು ಸುಚಿಸುತ್ತಾರೆ.
ನಾನು ಯಾವುದೆ ಬ್ರಾಂಡೆಡ್ ಮೆಡಿಸಿನ್ ಗಳ ವಿರೋಧವಾಗಿ ಬರೆಯುತ್ತಿಲ್ಲ. ಬದಲಾಗಿ ದೇಶದ ಪ್ರತಿಯೊಂದು ತಾಲೂಕಿನಲ್ಲಿ ಜೆನೆರಿಕ್ ಮೆಡಿಸಿನ್ ಗಳು ದೊರೆಯಬೇಕೆಂಬ ಆಶಯದಲ್ಲಿ ಬರೆಯುತ್ತಿರುವೆ. ಭಾರತವು ಜೆನೆರಿಕ್ ಮೆಡಿಸಿನ್ ಗಳನ್ನು ವಿದೇಶಕ್ಕೆ ರಫ್ತು ಮಾಡುತ್ತಿದೆ ಆದರೆ ದೇಶದ ಪ್ರತಿ ಭಾಗಗಳಲ್ಲಿ ಜೆನೆರಿಕ್ ಮೆಡಿಸಿನ್ ಗಳನ್ನು ದೊರಕಿಸುವಲ್ಲಿ ವಿಫಲವಾಗಿದೆ. ಒಮ್ಮೆ ಈ ಕೆಲಸ ಸಫಲವಾದರೆ ಮಾತ್ರೆಗಳ ಬೆಲೆ ಕಡಿಮೆಯಾಗಿ ಬಡವರಿಗೆ ಅನುಕೂಲವಾಗುತ್ತದೆ.