ಸಾಂದರ್ಭಿಕ ಚಿತ್ರ
ಶಿವಮೊಗ್ಗ: ಹೊಸನಗರ ತಾಲೂಕಿನಲ್ಲಿ ಅರಣ್ಯ ಕಬಳಿಕೆಯ ಹುನ್ನಾರದ ಆರೋಪ ಕೇಳಿಬಂದಿದೆ. 375 ಎಕರೆ ಖಾತೆ ಕಾನು ಭೂಮಿಯಲ್ಲಿ ಮರ ಕಡಿತಲೆ ಆತಂಕ ಎದುರಾಗಿದ್ದು, ಇಲ್ಲಿ ಬಹುತೇಕ ಪ್ರದೇಶಗಳು ಶರಾವತಿ ಹಿನ್ನೀರು ಪ್ರದೇಶಕ್ಕೆ ಸಮೀಪದಲ್ಲಿವೆ. ಅಲ್ಲದೇ ಜೀವವೈವಿಧ್ಯ ತಾಣಗಳಾಗಿವೆ. ಅರಣ್ಯ ಇಲಾಖೆ ಇಲ್ಲಿನ ಬೆಲೆಬಾಳುವ ಮರಗಳ ಕಡಿತಲೆ ಮಾಡಲು ಖಾಸಗಿ ವ್ಯಕ್ತಿಗಳಿಗೆ ಪರವಾನಗಿ ನೀಡಿದಲ್ಲಿ ಅಮೂಲ್ಯವಾದ ಅರಣ್ಯ ಸಂಪತ್ತು ನಾಶವಾಗಲಿದೆ.
.
ಸಂರಕ್ಷಣಾ ಕಾಯಿದೆ ಜಾರಿಗೂ ಮುನ್ನ ಖಾತೆ ಕಾನು ಎಂದು ಖಾಸಗಿಯವರ ಒಡೆತನಕ್ಕೆ ಒಳಪಟ್ಟಿದ್ದ ಅರಣ್ಯ ಭೂ ಪ್ರದೇಶದ ಪ್ರಕರಣಗಳು ಮತ್ತೊಮ್ಮೆ ಸದ್ದು ಮಾಡಿವೆ. ನ್ಯಾಯಾಲಯದಲ್ಲಿದ್ದ ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿ ಖಾಸಗಿ ವ್ಯಕ್ತಿಗಳಿಗೆ ಮರ ಕಡಿತಲೆಗೆ ಅನುಕೂಲಕರವಾಗಬಹುದಾದ ಆದೇಶ ಹೊರಬಿದ್ದಿದೆ. ಇದರ ಪರಿಣಾಮವಾಗಿ ಹೊಸನಗರ ತಾಲೂಕಿನ ತೋಟದಕೊಪ್ಪ, ಬಸವಾಪುರ, ಮರ್ತೂರು ಗ್ರಾಮಗಳಿಗೆ ಸೇರಿದ ಸುಮಾರು 375 ಎಕರೆ ದಟ್ಟ ಕಾಡು ಪ್ರದೇಶದ¿ಲ್ಲಿನ ಮರಗಳು ಖಾಸಗಿಯವರ ಪಾಲಾಗುವ ಆತಂಕ ಎದುರಾಗಿದೆ.
ಉಡುಪಿ ಮೂಲದ ಖಾಸಗಿ ಕಂಪನಿ ಹಾಗೂ ಇದಕ್ಕೆ ಸಂಬಂಧಿಸಿ ವ್ಯಕ್ತಿಗಳು ಈ ಜಾಗದಲ್ಲಿರುವ ಅರಣ್ಯ ಸಂಪತ್ತನ್ನು ಕಟಾವು ಮಾಡಿ ಸಾಗಾಟ ಮಾಡಲು ಅನುಮತಿ ಕೋರಿ ಹೈಕೋರ್ಟ್‌ನಲ್ಲಿ 2014ರಲ್ಲಿ ಪ್ರಕರಣ ದಾಖಲಿಸಿದ್ದರು. 1984ರಿಂದಲೂ ಈ ಬಗ್ಗೆ ನ್ಯಾಯಾಲಯದಲ್ಲಿ ವಿವಿಧ ಪ್ರಕರಣಗಳು ನಡೆಯುತ್ತಿದ್ದು, 2014ರಲ್ಲಿ ದಾಖಲಾದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಮರಕಡಿತಲೆಗೆ ಪರವಾನಗಿ ಕೋರಿ ಹೊಸದಾಗಿ ಕೋರಿಕೆ ಸಲ್ಲಿಸಲು ಅರ್ಜಿದಾರರಿಗೆ ಅವಕಾಶ ನೀಡಿ 2022ರ ನವೆಂಬರ್ 30ರಂದು ಸರಕಾರಕ್ಕೆ ಸೂಚನೆ ನೀಡಿ ಆದೇಶಿಸಿದೆ. ನ್ಯಾಯಾಲಯ ನೀಡಿರುವ ಆದೇಶವನ್ನು ಮುಂದಿಟ್ಟುಕೊಂಡು ಮರ ಕಡಿತಲೆ ಮಾಡಲು ಅನುಮತಿಗಾಗಿ ರಾಜ್ಯ ಸರಕಾರವನ್ನು ಖಾಸಗಿ ವ್ಯಕ್ತಿಗಳು ಕೋರಿದ್ದಾರೆ. ಇದಕ್ಕೆ ಸ್ಪಂದಿಸಿರುವ ರಾಜ್ಯ ಸರಕಾರದ ಮುಖ್ಯ ಕಾರ‍್ಯದರ್ಶಿ ಏಪ್ರಿಲ್ 12ರಂದು ನ್ಯಾಯಾಲಯದ ಆದೇಶದಂತೆ ನಿಯಮಾನುಸಾರ ಕ್ರಮವಹಿಸಲು ಸಾಗರದ ಡಿಎಫ್‌ಓ ಅವರಿಗೆ ಸೂಚನೆ ನೀಡಿದ್ದಾರೆ. ಪರವಾನಗಿ ಕೋರಿಕೆ ಬಳಿಕ 8 ವಾರಗಳ ಒಳಗಾಗಿ ಅಗತ್ಯ ಕ್ರಮಕೈಗೊಳ್ಳುವಂತೆ ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈಗ ಮರ ಕಡಿತಲೆಗೆ ಪರವಾನಗಿ ಕಲ್ಪಿಸಬೇಕು ಇಲ್ಲವೇ ಸರಕಾರದ ಮೂಲಕ ಮತ್ತೊಮ್ಮೆ ನ್ಯಾಯಾಲಯದ ಮೊರೆ ಹೋಗಬೇಕಾದ ಅನಿವಾರ‍್ಯತೆ ಎದುರಾಗಿದೆ.ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೊಂಡ ಬಳಿಕ ಬ್ರಿಟಿಷ್ ಆಳ್ವಿಕೆ ಕಾಲದಲ್ಲಿದ್ದ ಹಾಗೂ ಕಾಯಿದೆ ಜಾರಿಗೂ ಮುನ್ನ ಇದ್ದ ಖಾತೆ ಖಾನು, ಒಂದಾಣೆ ಕಾನುಗಳನ್ನು ಅರಣ್ಯ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿದೆ. ಅಲ್ಲದೇ ಮೀಸಲು ಅರಣ್ಯ ಘೋಷಣೆಗೆ ಅಧಿಸೂಚನೆ ಪ್ರಕ್ರಿಯೆ ಸಹಾ ಜಾರಿಯಲ್ಲಿದೆ. ಆದಾಗ್ಯೂ ಖಾಸಗಿ ವ್ಯಕ್ತಿಗಳು ಮರಗಳನ್ನು ಕಡಿತಲೆ ಮಾಡಲು ಪ್ರಯತ್ನಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಹೊಸನಗರ ತಾಲೂಕಿನ ಬಹುತೇಕ ಈ ಪ್ರದೇಶಗಳು ಶರಾವತಿ ಹಿನ್ನೀರು ಪ್ರದೇಶಕ್ಕೆ ಸಮೀಪದಲ್ಲಿವೆ. ಅಲ್ಲದೇ ಜೀವವೈವಿಧ್ಯ ತಾಣಗಳಾಗಿವೆ. ಅರಣ್ಯ ಇಲಾಖೆ ಇಲ್ಲಿನ ಬೆಲೆಬಾಳುವ ಮರಗಳ ಕಡಿತಲೆ ಮಾಡಲು ಖಾಸಗಿ ವ್ಯಕ್ತಿಗಳಿಗೆ ಪರವಾನಗಿ ನೀಡಿದಲ್ಲಿ ಅಮೂಲ್ಯವಾದ ಅರಣ್ಯ ಸಂಪತ್ತು ನಾಶವಾಗಲಿದೆ.
ಮರ ಕಡಿತಲೆಗೆ ಪರವಾನಗಿ ಕೋರಿ ಯಾವುದೇ ಕೋರಿಕೆ ಈವರೆಗೆ ನಮ್ಮ ಕಚೇರಿಗೆ ಸಲ್ಲಿಕೆಯಾಗಿಲ್ಲ. ಒಂದು ವೇಳೆ ಕೋರಿಕೆ ಸಲ್ಲಿಕೆಯಾದರೂ, ಮರ ಕಡಿತಲೆಗೆ ಪರವಾನಗಿ ಸಿಗುವುದು ಕಷ್ಟ. ಸುಪ್ರೀಂ ಕೋರ್ಟ್ ಇಂತಹ ಪ್ರಕರಣಗಳ ಕುರಿತು ಹಿಂದೆ ಸ್ಪಷ್ಟ ಆದೇಶ ಮಾಡಿದೆ. ಅರಣ್ಯ ಕುರಿತು ಕಾಯಿದೆಯಡಿ ವ್ಯಾಖ್ಯಾನವಿದೆ. ಆ ಪ್ರಕಾರವಾಗಿ ಮರಗಳು ಹುಲುಸಾಗಿ ಬೆಳೆದಿರುವ ಪ್ರದೇಶದಲ್ಲಿ ಮರ ಕಡಿತಲೆಗೆ ಅನುಮತಿ ನೀಡಲು ಕಾನೂನಿನ ಅಡಿಯಲ್ಲಿ ಅವಕಾಶವಿಲ್ಲ ಎಂದು ಸಾಗರ ಡಿಎಫ್‌ಓ, ಸಂತೋಷ್ ಕೆಂಚಪ್ಪನವರ್ ತಿಳಿಸಿದ್ದಾರೆ.
ಹೊಸನಗರ ತಾಲೂಕಿನ ನೆಲಗಳಲೆ ಸಮೀಪದ ತೋಟದಕೊಪ್ಪ ಸರ್ವೆ ನಂ.50ರಲ್ಲಿ 205.4 ಎಕರೆ, ಮುತ್ತೂರು ಗ್ರಾಮದ ಸರ್ವೆ ನಂ. 28ರಲ್ಲಿ74.12 ಎಕರೆ, ಬಸವಾಪುರ ಗ್ರಾಮದ ಸರ್ವೆ ನಂ. 80ರಲ್ಲಿನ 94 ಎಕರೆ 19 ಗುಂಟೆ ಪ್ರದೇಶ. ಇಷ್ಟಲ್ಲದೇ ಶಿವಮೊಗ್ಗ ಜಿಲ್ಲೆಯಲ್ಲಿ ಇಂತಹದ್ದೇ 10 ಪ್ರಕರಣಗಳು ನ್ಯಾಯಾಲಯದಲ್ಲಿವೆ. ಇವುಗಳಲ್ಲಿ ತಾಲೂಕಿನ ಯಡೂರು, ಸಾಗರದ ಗಂಟಿಕೊಪ್ಪ, ತೀರ್ಥಹಳ್ಳಿಯ ಹಲವನಹಳ್ಳಿ, ಹಲಗತ್ತಿ, ಮಳಲಿ ಗ್ರಾಮಗಳು ಸೇರಿವೆ. ಒಟ್ಟಾರೆ 5 ಸಾವಿರ ಎಕರೆ ಅರಣ್ಯ ಪ್ರದೇಶದ ಮರಗಳ ಕಡಿತಲೆ ಕುರಿತು ಖಾಸಗಿಯವರು ಅನುಮತಿ ಕೋರಿರುವ ಪ್ರಕರಣಗಳು ನ್ಯಾಯಾಲಯದಲ್ಲಿವೆ ಎನ್ನಲಾಗಿದೆ.
ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ನಡುವೆ ಸಮನ್ವಯತೆಯ ಕೊರತೆ, ರಾಜ್ಯ ಮಟ್ಟದ ಅರಣ್ಯ ಅಧಿಕಾರಿಗಳು ಪ್ರಕರಣಗಳ ಕುರಿತು ಗಮನ ನೀಡದಿರುವ ಕಾರಣದಿಂದ ನ್ಯಾಯಾಲಯದಲ್ಲಿಖಾಸಗಿಯವರಿಗೆ ಜಯವಾಗಿದೆ. ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳು ಆಗಮಿಸಿ ಸ್ಥಳ ಪರಿಶೀಲನೆ, ಕಂದಾಯ ಇಲಾಖೆಯ ಜೊತೆ ಸಮಾಲೋಚನೆ ನಡೆಸಿ ತುರ್ತು ಕ್ರಮಗಳನ್ನು ಜರುಗಿಸಬೇಕು ಎಂದು ವೃಕ್ಷಲಕ್ಷ ಆಂದೋಲನದ ಕಾರ‍್ಯಕರ್ತರು ಹಾಗೂ ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.
ಸಚಿವರಿಗೆ ಪತ್ರ
ಪ್ರಕರಣದ ಗಂಭೀರತೆಯನ್ನು ಗಮನಿಸಿದ ಕರ್ನಾಟಕ ಜೀವವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ವೃಕ್ಷಲಕ್ಷ ಆಂದೋಲನ ಸಂಘಟನೆ ಮೂಲಕ ಅರಣ್ಯ ಸಚಿವರಿಗೆ ಪತ್ರ ಬರೆದಿದ್ದಾರೆ. ಒಟ್ಟಾರೆ ಇಂತಹ ಪ್ರಕರಣಗಳಿಂದ 1300 ಎಕರೆ ಅರಣ್ಯ ಪ್ರದೇಶ ಹಾಗೂ 4 ಲಕ್ಷ ಗಿಡಗಳ ಕಡಿತಲೆ ಆಗಲಿದ್ದು, ರಾಜ್ಯ ಸರಕಾರ ಇದನ್ನು ತಡೆಯುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಅರಣ್ಯ ಹಾಗೂ ಪರಿಸರ ಜೀವವೈವಿಧ್ಯ ಸಂರಕ್ಷಣೆಗಾಗಿ ವೃಕ್ಷಲಕ್ಷ ಆಂದೋಲನ ಕಳೆದ 40 ವರ್ಷಗಳಿಂದ ರಚನಾತ್ಮಕವಾಗಿ ಕೆಲಸ ಮಾಡುತ್ತಿದೆ. ಶಿವಮೊಗ್ಗ ಜಿಲ್ಲೆಯ ಶರಾವತಿ ಹಾಗೂ ತುಂಗಾ ನದಿ ಕಣಿವೆ ಪ್ರದೇಶದ ಅರಣ್ಯ ಸಂರಕ್ಷಣೆ ಕಾರ‍್ಯ ಆಗಬೇಕಿದೆ. ಇಲ್ಲಿನ ಅರಣ್ಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಜರೂರು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದ್ದಾರೆ.
ಮರ ಕಡಿತಲೆಗೆ ಪರವಾನಗಿ ಕೋರಿ ಯಾವುದೇ ಕೋರಿಕೆ ಈವರೆಗೆ ನಮ್ಮ ಕಚೇರಿಗೆ ಸಲ್ಲಿಕೆಯಾಗಿಲ್ಲ. ಒಂದು ವೇಳೆ ಕೋರಿಕೆ ಸಲ್ಲಿಕೆಯಾದರೂ, ಮರ ಕಡಿತಲೆಗೆ ಪರವಾನಗಿ ಸಿಗುವುದು ಕಷ್ಟ. ಸುಪ್ರೀಂ ಕೋರ್ಟ್ ಇಂತಹ ಪ್ರಕರಣಗಳ ಕುರಿತು ಹಿಂದೆ ಸ್ಪಷ್ಟ ಆದೇಶ ಮಾಡಿದೆ. ಅರಣ್ಯ ಕುರಿತು ಕಾಯಿದೆಯಡಿ ವ್ಯಾಖ್ಯಾನವಿದೆ. ಆ ಪ್ರಕಾರವಾಗಿ ಮರಗಳು ಹುಲುಸಾಗಿ ಬೆಳೆದಿರುವ ಪ್ರದೇಶದಲ್ಲಿ ಮರ ಕಡಿತಲೆಗೆ ಅನುಮತಿ ನೀಡಲು ಕಾನೂನಿನ ಅಡಿಯಲ್ಲಿ ಅವಕಾಶವಿಲ್ಲ ಎಂದು ಸಾಗರ ಡಿಎಫ್‌ಓ, ಸಂತೋಷ್ ಕೆಂಚಪ್ಪನವರ್ ತಿಳಿಸಿದ್ದಾರೆ.