PGK NEWS:-ಶಿರಾಡಿಘಾಟ್ ಮಾರ್ಗದಲ್ಲಿ ಸುರಂಗ ನಿರ್ಮಾಣ; ಕೇಂದ್ರಕ್ಕೆ ಪ್ರಸ್ತಾವನೆ: ಸತೀಶ್‌ ಜಾರಕಿಹೊಳಿ.

  • ಶಿರಾಡಿ ಘಾಟ್, ರಾಷ್ಟ್ರೀಯ ಹೆದ್ದಾರಿ-75ರ ಕಾಮಗಾರಿ ಪರಿಶೀಲನೆ
  • ಕಾಮಗಾರಿ ಪೂರ್ಣಗೊಳಿಸಲು ಮಾರ್ಚ್‌ ವರೆಗೆ ಗಡುವು
  • ಪ್ರಯಾಣಿಕರ ಅನುಕೂಲ, ಸಂಚಾರ ಸಮಸ್ಯೆ 
  • ಪ್ರಯಾಣಿಕರ ಅನುಕೂಲ, ಸಂಚಾರ ಸಮಸ್ಯೆ ಶಾಶ್ಚತ ಪರಿಹಾರಕ್ಕಾಗಿ ಶಿರಾಡಿಘಾಟ್ ಸುರಂಗಗಳನ್ನೊಳಗೊಂಡ ಸಂಚಾರ ಮಾರ್ಗ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಒಟ್ಟು 30 ಕಿ.ಮೀ ಉದ್ದದ ಹೊಸ ಯೋಜನೆಗೆ ರೂಪುರೇಷೆ ಸಿದ್ದಪಡಿಸಲಾಗಿದೆ. ಇದರಲ್ಲಿ 3.8 ಕಿ.ಮೀ ಸುರಂಗ ಮಾರ್ಗ ಇರಲಿದೆ ಎಂದು ಸಚಿವರು ಮಾಹಿತಿ ನೀಡಿದರು.
  • ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಶನಿವಾರ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆಯುತ್ತಿರುವ ಶಿರಾಡಿ ಘಾಟ್, ರಾಷ್ಟ್ರೀಯ ಹೆದ್ದಾರಿ-75ರ ಕಾಮಗಾರಿ ಪರಿಶೀಲಿಸಿದರು.
  • ಹಾಸನದಿಂದ ಸಕಲೇಶಪುರ ಬೈಪಾಸ್‌ವರೆಗೆ ನವೆಂಬರ್‌ 1ರ ಒಳಗೆ ಕಾಮಗಾರಿ ಮುಗಿಸಬೇಕು. ಸಂಪೂರ್ಣ ಕಾಮಗಾರಿ 2024ರ ಮಾರ್ಚ್‌ ವೇಳೆಗೆ ಮುಕ್ತಾಯ ಮಾಡಬೇಕು. ಪ್ರತಿ ತಿಂಗಳು ಗುರಿ ನಿಗದಿಪಡಿಸಿ ಪ್ರಗತಿ ಪರಿಶೀಲನೆ, ಮೇಲ್ವಿಚಾರಣೆ ಮಾಡಲಾಗುವುದು ಎಂದು ಹೇಳಿದರು.
  • ದೋಣಿಗಾಲ್ ಬಳಿ ಕಳೆದ ಹಲವು ವರ್ಷಗಳಿಂದಲೂ ಭೂ ಕುಸಿತದಿಂದ ಸಮಸ್ಯೆ ಉಂಟಾಗಿರುವ ಸ್ಥಳ ಪರಿಶೀಲಿಸಿದ ಸಚಿವರು, ಆದಷ್ಟು ಶೀಘ್ರವಾಗಿ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
  • ಇದೇ ವೇಳೆ ರಸ್ತೆ ಕಾಮಗಾರಿಯಿಂದ ಭೂ ಕುಸಿತ ಉಂಟಾಗಿ ಜಮೀನು ಕಳೆದುಕೊಂಡ ರೈತರ ಭೂ‌ಮಾಲೀಕರ ಅಹವಾಲು ಆಲಿಸಿ, ಪರಿಹಾರ ದೊರಕಿಸಿ ಕೊಡುವ ಭರವಸೆ ನೀಡಿದರು.
  • ಸಕಲೇಶಪುರದಿಂದ ಗುಂಡ್ಯವರೆಗೆ ರಸ್ತೆ ಕಾಮಗಾರಿ ಪರಿಶೀಲಿಸಿದ ಅವರು ಕಾಲಮಿತಿಯೊಳಗೆ ಗುಣಮಟ್ಟದೊಂದಿಗೆ ಕಾಮಗಾರಿ ನಿರ್ವಹಣೆ ಮಾಡುವಂತೆ ಸೂಚಿಸಿದರು.
  • ಇದೇ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ, ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯ ಹಾಗೂ ತಾಂತ್ರಿಕ ತೊಂದರೆಯಿಂದ ಕಾಮಗಾರಿ ವಿಳಂಬವಾಗಿದೆ. ರಾಜ್ಯದಲ್ಲಿ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿರುವ ಯೋಜನೆಗಳಲ್ಲಿ ಇದೂ ಒಂದು ಎಂದರು.
  • 2017 ದಿಂದ ಕಾಮಗಾರಿ ನಡೆಯುತ್ತಿದ್ದು, ಎರಡು – ಮೂರು ವರ್ಷದ ಹಿಂದೆಯೇ ಕಾಮಗಾರಿ ಮುಗಿಯಬೇಕಿತ್ತು. ಮಳೆಗಾಲದಲ್ಲಿ ಭೂಕುಸಿತ ತಡೆಗೆ ಅಗತ್ಯವಿರುವ ಕಡೆ ಕಡ್ಡಾಯವಾಗಿ ತಡೆಗೋಡೆ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಇದು ಬೆಂಗಳೂರು – ಮಂಗಳೂರಿಗೆ ನಡುವೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ಕಾಮಗಾರಿಗಾಗಿ ಸಂಪೂರ್ಣವಾಗಿ ಶಿರಾಡಿಘಾಟ್ ರಸ್ತೆ ಬಂದ್ ಮಾಡಲು ಆಗುವುದಿಲ್ಲ. ಸಮಯದ ಮಿತಿಗಳಲ್ಲಿ ಏಕಮುಖ ಸಂಚಾರ ಮಾಡಿ ವಾಹನ ಸಂಚರಿಸಲು ಅವಕಾಶ ನೀಡಲು ಚಿಂತನೆ ಮಾಡಿದ್ದೇವೆ ಎಂದು ಹೇಳಿದರು.ಈ ವೇಳೆ ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್‌ ಮಂಜು, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸತ್ಯನಾರಾಯಣ, ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್ ರಮೇಂದ್ರ, ಎಸ್ ಎಚ್.ಡಿ.ಪಿ ಮುಖ್ಯ ಯೋಜನಾಧಿಕಾರಿ ಶಿವಯೋಗಿ ಹಿರೇಮಠ್, ಉಪ ವಿಭಾಗಾಧಿಕಾರಿ ಅನ್ಮೋಲ್ ಜೈನ್ ಹಾಗೂ ಇತರರು ಇದ್ದರು.
PGK

Post a Comment

Previous Post Next Post