PGK NEWS :-ಅಪೂರ್ಣಗೊಂಡ ಹೆದ್ದಾರಿ ಕಾಮಗಾರಿ: ಬಾಯ್ತೆರೆದ ಗುಡ್ಡಗಳಿಂದ ಮಣ್ಣು ಕುಸಿತ ವಾಹನ ಸವಾರರಿಗೆ ಹೆಚ್ಚಿದ ಆತಂಕ !

PGK NEWS
 ಕಾರವಾರ ಜೂನ್‌ 28/06/2023: ಅದು ಕರಾವಳಿ ಹಾಗೂ ಪಶ್ಚಿಮ ಘಟ್ಟಗಳ ಸರಣಿಯನ್ನು ಹೊಂದಿರುವ ವಿಶಿಷ್ಟ ಜಿಲ್ಲೆ. ಕರಾವಳಿ ಹಾಗೂ ಘಟ್ಟದ ಭಾಗಗಳಿಗೆ ಸಂಚರಿಸಲು ಇರುವ ಮೂರ್ನಾಲ್ಕು ರಸ್ತೆಗಳೇ ಪ್ರಮುಖ ಕೊಂಡಿಯಾಗಿದ್ದು, ಇದೀಗ ಆ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಆತಂಕ ಎದುರಾಗಿದೆ.


ಕಳೆದ ಬಾರಿ ಮಳೆಗಾಲದಲ್ಲಿ ಎದುರಾಗಿದ್ದ ಭೂಕುಸಿತ ಪ್ರಕರಣಗಳು ಇದೀಗ ಮತ್ತೆ ಮರುಕಳಿಸುವ ಸಾಧ್ಯತೆಗಳಿದ್ದು, ಮಳೆ‌ ಜೋರಾಗಿ ಪ್ರಾರಂಭವಾದ ಮೇಲೆ ಯಾವಾಗ ರಸ್ತೆಯ ಮೇಲೆ ಕಲ್ಲು, ಮಣ್ಣು ಕುಸಿದುಬೀಳುತ್ತೋ ಎಂದು ಸವಾರರು ಭೀತಿಗೊಳಗಾಗುವಂತಾಗಿದೆ.


ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾರ್ಯ ಆರಂಭವಾಗಿ ದಶಕಗಳೇ ಕಳೆಯುತ್ತಾ ಬಂದಿದೆ. ಆದರೆ, ಇನ್ನೂ ಸಹ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲ.‌ ಅಲ್ಲದೇ, ಕಾಮಗಾರಿಗಾಗಿ ಅಲ್ಲಲ್ಲಿ ಗುಡ್ಡಗಳನ್ನು ಕೊರೆದು ಹಾಗೆಯೇ ಬಿಡಲಾಗಿದೆ.



ಈ ಗುಡ್ಡಗಳಿಂದ ಬೇಸಿಗೆಯಲ್ಲಿ ಅಷ್ಟೇನೂ ಆತಂಕ ಇಲ್ಲವಾದರೂ ಮಳೆಗಾಲದಲ್ಲಿ ಇವು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸುತ್ತವೆ. ಅದರಲ್ಲೂ ಕರಾವಳಿ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುವುದರಿಂದ ಅಪಾಯಕಾರಿ ರೀತಿಯಲ್ಲಿ ಕೊರೆದಿರುವ ಗುಡ್ಡಗಳು ಕುಸಿದು ಹೆದ್ದಾರಿಗೇ ಬೀಳುವ ಆತಂಕ ಎದುರಾಗಿದ್ದು, ಮಳೆ ಜೋರಾಗಿ ಪ್ರಾರಂಭವಾದ ಬಳಿಕ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಪರಿಸ್ಥಿತಿ ಎದುರಾಗಿದೆ. 
ಜಿಲ್ಲಾಡಳಿತ ಈ ಬಗ್ಗೆ ನಿರ್ಲಕ್ಷ್ಯ ವಹಿಸದೆ ಸಂಬಂಧಪಟ್ಟ ಕಂಪನಿಗೆ ಅಗತ್ಯ ಕ್ರಮ‌ಕೈಗೊಳ್ಳಲು ಸೂಚಿಸಬೇಕು. ಇಲ್ಲದೆ ಇದ್ದಲ್ಲಿ ಉಗ್ರ ಪ್ರತಿಭಟನೆ ಕೈಗೊಳ್ಳುವುದಾಗಿ ಹೋರಾಟಗಾರರಾದ ಮಂಜುನಾಥ ಗೌಡ    ಹಾಗೂ   ರಾಷ್ಟ್ರೀಯ ದಲಿತ ಸಮಿತಿ ,         ಎಚ್ಚರಿಸಿದ್ದಾರೆ.
ಇನ್ನು ಕಳೆದ 2021ರಲ್ಲಿ ಸುರಿದ ಭಾರೀ ಮಳೆಗೆ ಜೊಯಿಡಾದ ಅಣಶಿ ಹಾಗೂ ಅರಬೈಲ್ ಘಟ್ಟದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿ ಹೆದ್ದಾರಿ ಸಂಪರ್ಕವೇ ಕಡಿತಗೊಂಡಿತ್ತು. ಅಲ್ಲದೇ, ಪ್ರತಿವರ್ಷ ಮಳೆಗಾಲದ ಅವಧಿಯಲ್ಲಿ ಹೆದ್ದಾರಿಯ ಅಲ್ಲಲ್ಲಿ ಅಗಲೀಕರಣಕ್ಕಾಗಿ ಕೊರೆದ ಗುಡ್ಡಗಳಿಂದ ಕಲ್ಲು, ಮಣ್ಣು ಕುಸಿದುಬಿದ್ದು ಸಂಚಾರ ಅಸ್ತವ್ಯಸ್ತವಾದ ಘಟನೆಗಳು ನಡೆದಿತ್ತು. ಅದರಂತೆ ಈ ಬಾರಿಯೂ ಸಹ ಕೆಲವೆಡೆ ಅಪಾಯಕಾರಿ ರೀತಿಯಲ್ಲಿ ಗುಡ್ಡಗಳನ್ನು ಕೊರೆದು ಬಿಡಲಾಗಿದ್ದು ಇದು ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ.
ಇನ್ನು ಈ ಬಗ್ಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರನ್ನು ಕೇಳಿದರೆ ಮಳೆಗಾಲದಲ್ಲಿ ಹೆದ್ದಾರಿ ಸುರಕ್ಷತೆ ವಿಚಾರವಾಗಿ ಐಆರ್‌ಬಿ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುನ್ನೆಚ್ಚರಿಕೆ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಗುಡ್ಡ ಕುಸಿತದ ಸಾಧ್ಯತೆಗಳಿರುವ ಪ್ರದೇಶವನ್ನೂ ಗುರುತಿಸಲಾಗಿದ್ದು, ಜನರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಆದೇಶಿಸಿರುವುದಾಗಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಪ್ರತಿ ಮಳೆಗಾಲದಲ್ಲೂ ಹೆದ್ದಾರಿ ಅಗಲೀಕರಣದ ಅವ್ಯವಸ್ಥೆಯಿಂದಾಗಿ ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ಎದುರಾಗುತ್ತಿದ್ದು, ಈ ಬಾರಿಯಾದರೂ ಎದುರಾಗಬಹುದಾದ ದೊಡ್ಡ ಗಂಡಾಂತರ ತಪ್ಪಿಸಲು ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಸಮರ್ಪಕವಾಗಿ ಕೈಗೊಳ್ಳುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.



PGK

Post a Comment

Previous Post Next Post