PGK NEWS:- ನವದೆಹಲಿ: ಕಳೆದ 3 ತಿಂಗಳಿನಿಂದ ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿರುವ ಈಶಾನ್ಯ ರಾಜ್ಯ ಮಣಿಪುರಕ್ಕೆ ವಿಪಕ್ಷಗಳ ಹೊಸ ಮೈತ್ರಿ ಕೂಡವಾದ ಇಂಡಿಯಾದ ನಾಯಕರು ಶನಿವಾರದಿಂದ 2 ದಿನಗಳ ಕಾಲ ಭೇಟಿ ನೀಡುತ್ತಿದ್ದಾರೆ.
ಈಗಾಗಲೇ ದೆಹಲಿ ವಿಮಾನ ನಿಲ್ದಾಣ ತಲುಪಿರುವ ವಿಪಕ್ಷಗಳ ನಾಯಕರು, ಇನ್ನು ಕೆಲವೇ ಗಂಟೆಗಳಲ್ಲಿ ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ.
ನಿಯೋಗದಲ್ಲಿ 16 ಪಕ್ಷಗಳ 20 ಕಮಂದಿ ಸಂಸದರು ಇದ್ದು, ಎರಡು ದಿನಗಳ ಭೇಟಿ ವೇಳೆ ಕಂಡು ಬಂದ ವಸ್ತು ಸ್ಥಿತಿ ಕುರಿತು ಕೇಂದ್ರ ಸರ್ಕಾರ ಮತ್ತು ಸಂಸತ್ತಿಗೆ ವರದಿ ನೀಡುವುದಾಗಿ ನಾಯಕರು ಹೇಳಿದ್ದಾರೆ.
ಕಾಂಗ್ರೆಸ್‌ನ ಗೌರವ್ ಗೊಗೊಯ್ ಅವರು ಮಾತನಾಡಿ, ಮಣಿಪುರಕ್ಕೆ ಹೋಗಿ ಸತ್ಯಾಸತ್ಯತೆಯನ್ನು ತಿಳಿಯಲಿದ್ದೇವೆ. ಆ ಸತ್ಯವನ್ನು ಸಂಸತ್ತಿನ ಮುಂದೆ ಮಂಡಿಸುತ್ತೇವೆಂದು ಹೇಳಿದ್ದಾರೆ.
"ಸರ್ಕಾರ ವಿಫಲವಾಗಿದೆ, ಹೀಗಾಗಿಯೇ ನಾವೇ ಮಣಿಪುರಕ್ಕೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಸುಶ್ಮಿತಾ ದೇವ್ ಅವರು ತಿಳಿಸಿದ್ದಾರೆ.
ಆರ್‌ಜೆಡಿಯ ಮನೋಜ್ ಝಾ ಅವರು ಮಾತನಾಡಿ,"ಮಣಿಪುರ ನೋವು ಕೇಳಬೇಕಾಗಿದೆ". ಅಲ್ಲಿನ ಜನರ ನೋವು ಕೇಳಲು ಮತ್ತು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಭೇಟಿ ನೀಡುತ್ತಿದ್ದೇವೆಂದು ಹೇಳಿದ್ದಾರೆ.
ಈ ನಡುವೆ ಮಂಗಳವಾರ ಸಂಭವಿಸಿದ್ದ ಹಿಂಸಾಚಾರದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಫೌಗಕ್ಚಾವೊ ಇಕೈ, ಹೈಕೋಲ್ ಮತ್ತು ತೆರಾಖೋಂಗ್ಸಾಂಗ್ಬಿ (ಬಿಷ್ಣುಪುರ್) ಮತ್ತು ಕಂಗನಾ (ಚುರಾಚಂದಪುರ) ಪ್ರದೇಶಗಳಲ್ಲಿನ ಮನೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಘಟನೆಯಲ್ಲಿ ಇಬ್ಬರು ಯೋಧರು ಸೇರಿ 6 ಮಂದಿ ಗಾಯಗೊಂಡಿದ್ದರು. ಈ ಪೈಕಿ ಇಬ್ಬರು ನಾಗರೀಕರು ಸಾವನ್ನಪ್ಪಿದ್ದಾರೆಂದು ತಿಳಿಸಿದ್ದಾರೆ.
ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಮಾನ್ಯತೆ ನೀಡುವುದಕ್ಕೆ ವಿರೋಧಿಸಿ ಕೆಲವು ಪಂಗಡಗಳು ಆಕ್ಷೇಪಿಸಿರುವುದು ರಾಜ್ಯದಲ್ಲಿ ಗಲಭೆಗೆ ಕಾರಣವಾಗಿದೆ.
ಏಪ್ರಿಲ್ 19ರಂದು ಮೈತೇಯಿ ಸಮುದಾಯವನ್ನು ಎಸ್‌ಟಿ ಪಟ್ಟಿಯಲ್ಲಿ ಒಂದು ತಿಂಗಳೊಳಗೆ ಸೇರ್ಪಡೆ ಮಾಡಲು ಮಣಿಪುರ ಸರ್ಕಾರಕ್ಕೆ ಮಣಿಪುರ ಹೈಕೋರ್ಟ್ ನಿರ್ದೇಶಿಸಿತ್ತು. ಇದು ಬುಡಕಟ್ಟು ಮತ್ತು ಬುಡಕಟ್ಟೇತರ ಸಮುದಾಯಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.
ಗಲಭೆಯ ನಡುವೆ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಲೈಂಗಿಕ ಕಿರುಕುಳ ನೀಡುತ್ತಾ ಅವರನ್ನು ಮೆರವಣಿಗೆ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಘಟನೆಯು ಮೇ 4ರಂದು ನಡೆದಿದ್ದು, ಉದ್ರಿಕ್ತರ ಗುಂಪು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದೆ ಎಂದು ವರದಿಯಾಗಿತ್ತು.