PGK NEWS : ಕರ್ನಾಟಕ ಹೈಕೋರ್ಟ್‌ನ ಆರು ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿ, 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. 50 ಲಕ್ಷ ರೂ. ಅನ್ನು ಪಾಕಿಸ್ತಾನದ ಬ್ಯಾಂಕ್ ಅಕೌಂಟ್‌ಗೆ ಹಾಕಿ ಎಂದು ಹೇಳಿರುವುದು ಕೊಲೆ ಬೆದರಿಕೆ ಹಿಂದೆ ಪಾಕಿಸ್ತಾನದ ಕೈವಾಡ ಇದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹೈಕೋರ್ಟ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿಆರ್‌ಒ) ಕೆ ಮುರಳೀಧರ್ ಅವರ ಅಧಿಕೃತ ವಾಟ್ಸ್‌ಆಪ್ ಸಂಖ್ಯೆಗೆ ಸಂದೇಶವನ್ನು ಕಳುಹಿಸುವ ಮೂಲಕ ಅಪರಿಚಿತ ವ್ಯಕ್ತಿ ಕೊಲೆ ಬೆದರಿಕೆ ಹಾಕಿದ್ದಾನೆ. ಅದಲ್ಲದೇ ಪಾಕಿಸ್ತಾನದ ಅಲೈಡ್ ಬ್ಯಾಂಕ್ ಲಿಮಿಟೆಡ್‌ನಲ್ಲಿರುವ ಬ್ಯಾಂಕ್ ಖಾತೆಗೆ 50 ಲಕ್ಷ ರೂ. ಅನ್ನು ಜಮೆ ಮಾಡುವಂತೆ ಜುಲೈ 12ರಂದು ವಾಟ್ಸ್‌ಆಪ್‌ಗೆ ಸಂದೇಶ ಕಳುಹಿಸಿ ಬೇಡಿಕೆ ಇಟ್ಟಿದ್ದಾನೆ.
ದುಬೈ ಗ್ಯಾಂಗ್ ಮೂಲಕ ತಮ್ಮನ್ನು ಸೇರಿ ಆರು ಹೈಕೋರ್ಟ್ ನ್ಯಾಯಾಧೀಶರನ್ನು ಕೊಲ್ಲುವುದಾಗಿ ವಾಟ್ಸ್‌ಆಪ್ ಸಂದೇಶದಲ್ಲಿ ಬೆದರಿಕೆ ಹಾಕಲಾಗಿದೆ ಎಂದು ಮುರಳೀಧರ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ. ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಜ್, ಎಚ್‌ಟಿ ನರೇಂದ್ರ ಪ್ರಸಾದ್, ಅಶೋಕ್ ಜಿ ನಿಜಗಣ್ಣವರ್, ಎಚ್‌ಪಿ ಸಂದೇಶ್, ಕೆ ನಟರಾಜನ್ ಹಾಗೂ ಬಿ ವೀರಪ್ಪ ಅವರ ಹೆಸರನ್ನು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.