PGK NEWS:- ನವದೆಹಲಿ: ಹಿಮಾಚಲ ಪ್ರದೇಶ, ನವದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ವರುಣ ಆರ್ಭಟಿಸುತ್ತಿದ್ದು, ಅಪಾರ ಪ್ರಮಾಣದಲ್ಲಿ ಜೀವ, ಆಸ್ತಿಪಾಸ್ತಿ ನಷ್ಟ ಉಂಟಾಗಿದೆ. ಕುಲು ಜಿಲ್ಲೆಯ ಬಿಯಾಸ್ ನದಿಯಿಂದ ಬುಧವಾರ 13 ಮೃತದೇಹ ಗಳನ್ನು ಹೊರಗೆ ತರಲಾಗಿದೆ ಎಂದು ಹಿಮಾಚಲ ಪ್ರದೇಶದ ಹಂಗಾಮಿ ಪೊಲೀಸ್ ಮಹಾನಿರ್ದೇಶಕ ಸತ್ವಂತ್ ಅತ್ವಾಲ್ ತ್ರಿವೇದಿ ಬುಧವಾರ ತಿಳಿಸಿದ್ದಾರೆ.
ಪತ್ತೆಯಾಗಿರುವ ಮೃತದೇಹಗಳನ್ನು ಗುರುತಿಸಬೇಕಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗುವುದು, ನಂತರವಷ್ಟೇ ಅವುಗಳ ಗುರುತು ಸಿಗಲಿದೆ. ರಾಜ್ಯದ ಅನೇಕ ಜನರು ಜಿಲ್ಲಾಡಳಿತ ಮತ್ತು ಪೊಲೀಸರನ್ನು ಸಂಪರ್ಕಿಸಿದ್ದಾರೆ ಮತ್ತು 40 ಕ್ಕೂ ಹೆಚ್ಚು ವಿದೇಶಿ ಪ್ರಜೆಗಳನ್ನು ರಕ್ಷಿಸಲಾಗಿದೆ ಎಂದು ಅವರು ಹೇಳಿದರು
ವಿವಿಧ ಸ್ಥಳಗಳಲ್ಲಿ ಸಿಕ್ಕಿಬಿದ್ದಿರುವ 1500 ಕ್ಕೂ ಹೆಚ್ಚು ಜನರು ಹಿಮಾಚಲ ಪ್ರದೇಶ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಕುಲು ಜಿಲ್ಲೆಯ ಕಸೋಲ್ ಪ್ರದೇಶದಿಂದ ಬುಧವಾರ ಮಧ್ಯಾಹ್ನದವರೆಗೆ 2,000 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ. ಹಿಮಾಚಲ ಪ್ರದೇಶದಲ್ಲಿ ಮಳೆಯಿಂದಾಗಿ ಈವರೆಗೂ 88 ಜನರು ಮೃತಪಟ್ಟಿದ್ದು, 16 ಜನರು ನಾಪತ್ತೆಯಾಗಿದ್ದಾರೆ. 100 ಜನರು ಗಾಯಗೊಂಂಡಿದ್ದು, 492 ಜಾನುವಾರುಗಳು ಸಾವನ್ನಪ್ಪಿವೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ರಾಷ್ಟ್ರ ರಾಜಧಾನಿ ದೆಹಲಿಯೂ ಕೂಡಾ ಮಳೆಯ ಹೊಡೆತಕ್ಕೆ ಸಿಲುಕಿದ್ದು, ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಬುಧವಾರ ನೀರಿನ ಮಟ್ಟ ಸಾರ್ವಕಾಲಿಕ ದಾಖಲೆ ಮಟ್ಟ 207.55 ಮೀಟರ್ ತಲುಪಿದೆ. ಈ ಮೂಲಕ 45 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದೆ. ನೀರಿನ ಮಟ್ಟ ಹೆಚ್ಚಳದಿಂದ ಅನೇಕ ಪ್ರದೇಶಗಳು ಜಲಾವೃತಗೊಂಡಿವೆ ಮತ್ತು ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ತಕ್ಷಣವೇ ಸ್ಥಳಾಂತರಗೊಳ್ಳುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ನದಿ ಸಮೀಪದಲ್ಲಿ ವಾಸಿಸುತ್ತಿದ್ದ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ. ಅಧಿಕಾರಿಗಳಿಂದ ಕಾರ್ಯ ಮುಂದುವರಿಯುತ್ತಿದೆ.