PGK NEWS:-ಮಣಿಪುರ | ಬೆತ್ತಲೆ ಮೆರವಣಿಗೆ ಪ್ರಕರಣದ ಐದನೇ ಆರೋಪಿ ಬಂಧನ.

PGK NEWS:-ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ, ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐದನೇ ಆರೋಪಿಯನ್ನು ಶನಿವಾರ ಬಂಧಿಸಿದ್ದಾರೆ. ಆರೋಪಿಯು 19 ವರ್ಷದ ಯುವಕನಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೇ 4ರಂದು ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ನಡೆದಿದ್ದ ಹಿಂಸಾಚಾರದ ವೇಳೆ ಉದ್ರಿಕ್ತ ಗುಂಪೊಂದು ಕುಕಿ ಬುಡಕಟ್ಟು ಸಮುದಾಯದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿತ್ತು. ನಂತರ ಅವರ ಬೆತ್ತಲೆ ಮೆರವಣಿಗೆ ಮಾಡಲಾಗಿತ್ತು.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಂತರ ಘಟನೆಯ ಬಗ್ಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಮಣಿಪುರದ ಹಿಂಸಾಚಾರದ ಬಗ್ಗೆ ಅದುವರೆವಿಗೆ ಮಾತನಾಡದೇ ಇದ್ದ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಮಾತನಾಡಿದ್ದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

ಇನ್ನೊಂದೆಡೆ, ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರನ್ನು ಪದಚ್ಯುತಗೊಳಿಸಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವುದು ಮಣಿಪುರದ ಮುಂದಿರುವ ಏಕೈಕ ಮಾರ್ಗವಾಗಿದೆ ಎಂದು ಸಂಸದ ಕಪಿಲ್ ಸಿಬಲ್ ಶನಿವಾರ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಪಿಲ್ ಸಿಬಲ್, “ಬಿರೇನ್ ಸಿಂಗ್ ಅವರನ್ನು ವಜಾ ಮಾಡಿ; ಆರ್ಟಿಕಲ್ 356 ಹೇರಿ; ನಮ್ಮ ದೇಶದ ಮಹಿಳೆಯರ ಕ್ಷಮೆ ಯಾಚಿಸಿ. ಇದೊಂದೇ ಉಳಿದಿರುವ ಮಾರ್ಗ” ಎಂದಿದ್ದಾರೆ.

ನಿರ್ಭಯಾ ನಂತರ ಏನೂ ಬದಲಾಗಿಲ್ಲ. ಉನ್ನಾವೊ, ಹಾಥ್ರಾಸ್, ಕಥುವಾ, ಬಿಲ್ಕಿಸ್ (ಅಪರಾಧಿಗಳ ಬಿಡುಗಡೆ). ಬೇಟಿ ಬಚಾವೋ ಪಿಎಂಜೀ!” ಎಂದು ಸಿಬಲ್ ಟ್ವೀಟ್ ಮಾಡಿದ್ದಾರೆ.

ಮೇ 3 ರಂದು ಗುಡ್ಡಗಾಡು ಜಿಲ್ಲೆಗಳಲ್ಲಿ ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ನಡೆದ ನಂತರ ಆ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದು, 160 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಲಕ್ಷಾಂತರ ಮಂದಿ ಮನೆ ಮಠ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ; ಹೆಣ್ಣುಮಕ್ಕಳ ಮಾನ ಪ್ರಾಣಕ್ಕೆ ಧಕ್ಕೆಯೊದಗಿದೆ.



PGK

Post a Comment

Previous Post Next Post