PGK NEWS:-ಮಂಡ್ಯ (ಜು.29): ಕನ್ನಡ ನಾಡಿನ ಜನರ ಜೀವನಾಡಿ ಆಗಿರುವ ಕಾವೇರಿ ನದಿಗೆ ನಿರ್ಮಿಸಲಾದ ದೊಡ್ಡ ಜಲಾಶಯವಾದ ಕೃಷ್ಣರಾಜ ಸಾಗರ ಜಲಾಶಯ (KRS Dam) 110 ಅಡಿ ಭರ್ತಿಯಾಗಿದೆ. ಅಂದರೆ ಒಟ್ಟು 124 ಅಡಿ ಜಲಾಶಯದಲ್ಲಿ ಇನ್ನು 14 ಅಡಿಗಳು ಮಾತ್ರ ಬಾಕಿಯಿದೆ. ಇನ್ನು ಕೊಡಗು ಭಾಗದಲ್ಲಿ ಮಳೆ ಸುರಿಯುತ್ತಿದ್ದು, ಹಾರಂಗಿ ಜಲಾಶಯದ ನೀರನ್ನು ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದು, ಬಹುತೇಕ ಭರ್ತಿಯಾಗಲಿದೆ ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯವು ಮಂಡ್ಯ ಜಿಲ್ಲೆಯ ರೈತರ ಜೀವನಾಡಿ ಆಗಿದೆ. ಇನ್ನು ಸುಮಾರು 1.3 ಕೋಟಿ ಜನಸಂಖ್ಯೆಯನ್ನು ಹೊಂದಿರುವ ರಾಜ್ಯದ ರಜಧಾನಿ ಬೆಂಗಳೂರಿನ ಕುಡಿಯುವ ನೀರಿನ ಮೂಲವೂ ಕೆ.ಆರ್.ಎಸ್. ಜಲಾಶಯವಾಗಿದೆ. ಈ ಹಿನ್ನೆಲೆಯಲ್ಲಿ ಡ್ಯಾಮ್ ಭರ್ತಿಗಾಗಿ ಇಡೀ ನಾಡಿನ ಜನರು ಪ್ರಾರ್ಥನೆ ಮಾಡಿದ್ದರು. ಮುಂಗಾರು ಮಳೆ ವಿಳಂಬವಾಗಿದ್ದರಿಂದ ಜುಲೈ ಎರಡನೇ ವಾರದವರೆಗೂ ಬರಗಾಲ ಕಾರ್ಮೋಡ ಕವಿದಿತ್ತು. ಕೇವಲ 15 ದಿನಗಳ ಹಿಂದೆ ಖಾಲಿ- ಖಾಲಿ ಆಗಿದ್ದ ಜಲಾಶಯ ಜುಲೈ ಅಂತ್ಯದ ವೇಳೆಗೆ ಭರ್ತಿ ಆಗುತ್ತಿದ್ದು, ಮಂಡ್ಯ ರೈತರು ಮತ್ತು ಬೆಂಗಳೂರಿನ ಜನತೆಗೆ ಸಂತಸದಾಯಕವಾದ ವಿಷಯವಾಗಿದೆ
ಜಲಾಶಯಕ್ಕೆ 33,566 ಕ್ಯೂಸೆಕ್ ನೀರು ಒಳ ಹರಿವು: ಒಟ್ಟು 124.80 ಗರಿಷ್ಠ ಮಟ್ಟವಿರುವ ಕೆಆರ್‌ಎಸ್ ಜಲಾಶಯದಲ್ಲಿ ಶುಕ್ರವಾರ ಬೆಳಗಗ್ಗಿನ ಮಾಹಿತಿ ಅನ್ವಯ 110.82 ಅಡಿ ನೀರು ಭರ್ತಿಯಾಗಿದೆ. ಈ ಮೂಲಕ ಕೆಆರ್‌ಎಸ್ ಡ್ಯಾಂ ಭರ್ತಿಗೆ ಇನ್ನೂ 14 ಅಡಿ ಮಾತ್ರ ಬಾಕಿಯಿದೆ. ಈ ಮೂಲಕ ನೀರಿನ ಹಾಹಾಕಾರವನ್ನು ಮಳೆ ದೂರಾಗಿಸಿದೆ. ಒಟ್ಟು 49.452 ಟಿಎಂಸಿ ಸಾಂದ್ರತೆ ಉಳ್ಳ ಕೆಆರ್‌ಎಸ್ ಡ್ಯಾಂನಲ್ಲಿ 32.554 ಟಿಎಂಸಿ ನೀರು ಶೇಖರಣೆಯಾಗಿದೆ. ಸದ್ಯ ಡ್ಯಾಂಗೆ 33,566 ಕ್ಯೂಸೆಕ್ ನೀರು ಒಳ ಹರಿವು ಬರುತ್ತಿದೆ. ಜಲಾಶಯದಿಂದ ಮಂಡ್ಯ ಜಿಲ್ಲೆಯ ವಿವಿಧ ನಾಲೆಗಳಿಗೆ (ನೀರು ಕಾಲುವೆಗಳು) 3,106 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.
78 ಅಡಿಗೆ ಕುಸಿದಿದ್ದ ಜಲಾಶಯ: ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ವೈಫಲ್ಯದಿಂದ ಜಿಲ್ಲೆಯ ರೈತರು ತೀವ್ರ ಆತಂಕಗೊಂಡಿದ್ದರು. ಕೆಆರ್‌ಎಸ್ ಜಲಾಶಯದಲ್ಲೂ ನೀರಿನ ಮಟ್ಟಕುಸಿದಿದ್ದರಿಂದ ಬೆಳೆ ಬೆಳೆಯಲಾಗದ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು. ಕೃಷಿ ಸಚಿವರು ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹೊಸ ಬೆಳೆ ಬೆಳೆಯದಂತೆ ರೈತರಲ್ಲಿ ಮನವಿಯನ್ನೂ ಮಾಡಿದ್ದರು. ಜಲಾಶಯದ ನೀರಿನ ಮಟ್ಟ ಜುಲೈ ಮೊದಲ ವಾರದಲ್ಲಿ 78 ಅಡಿಗೆ ತಲುಪಿದ್ದರಿಂದ ಉತ್ತಮ ಮಳೆಯಾಗಬಹುದೆಂಬ ನಿರೀಕ್ಷೆಯೂ ಹುಸಿಯಾಗಿತ್ತು.
ರೈತರ ಮೊಗದಲ್ಲಿ ಸಂತಸ: ಮುಂಗಾರು ಪೂರ್ವ ಮಳೆ ಕೈಕೊಟ್ಟಿದ್ದರಿಂದ ಬೇಸಿಗೆ ಬೆಳೆಗೆ ಕಟ್ಟುಪದ್ಧತಿಯಲ್ಲಿ ನೀರು ಹರಿಸಿದ್ದರಿಂದ ಜಲಾಶಯದಲ್ಲಿ 3 ಟಿಎಂಸಿ ಅಡಿಯಷ್ಟು ಮಾತ್ರ ನೀರು ಸಂಗ್ರಹಗೊಂಡಿತ್ತು. ಈಗ ಜಲಾಶಯ ಭರ್ತಿಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮುಡಿದೆ. ಇನ್ನು ಸಾಮಾನ್ಯ ವರ್ಷಗಳಂತೆ ಕಬ್ಬು, ಭತ್ತ ಸೇರಿ ಇತ್ಯಾದಿ ಬೆಳೆಗಳನ್ನು ಬೆಳೆಯಲು ಅನುಕೂಲ ಆಗಲಿದೆ.
(ವರದಿ ರಾಮನಗರ ಆನಂದ್). ಪಶ್ಚಿಮ ಘಟ್ಟ ವಾಯ್ಸ್