PGK NEWS :-ಬೆಂಗಳೂರು ಧಾರವಾಡ ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಾಟ ಆರಂಭಿಸಿ ಕೇವಲ ಐದು ದಿನಗಳಲ್ಲಿ ಕಲ್ಲು ಹೊಡೆದ ಘಟನೆ ನಡೆದಿದೆ. ಮಾರ್ಗ ಮಧ್ಯೆ ದಾವಣಗೆರೆ ನಗರದಲ್ಲಿ ಈ ಘಟನೆ ನಡೆದಿದ್ದು, ರೈಲಿನ ಗಾಜಿಗೆ ಹಾನಿಯಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.
ದಾವಣಗೆರೆ: ನಗರದ ಹೊರ ವಲಯದ ಜಿಲ್ಲಾಧಿಕಾರಿ ಕಚೇರಿ ಬಳಿಯ ಜಿಎಂಐಟಿ ಹಿಂಭಾಗದಲ್ಲಿ ಕಿಡಿಗೇಡಿಯೊಬ್ಬ ವಂದೇ ಭಾರತ್ ರೈಲಿಗೆ ಕಲ್ಲು ಹೊಡೆದಿರುವ ಪ್ರಕರಣ ಶನಿವಾರ ಮಧ್ಯಾಹ್ನ ನಡೆದಿದೆ.
ಧಾರವಾಡದಿಂದ ಮಧ್ಯಾಹ್ನ ರೈಲು ವಾಪಸ್ ಬೆಂಗಳೂರಿಗೆ ತೆರಳುವಾಗ ದಾವಣಗೆರೆ ಬಳಿ ಈ ಘಟನೆ ನಡೆದಿದೆ. ಕಿಡಿಗೇಡಿ ಕಲ್ಲು ಹೊಡೆದು ಪರಾರಿಯಾಗಿದ್ದಾನೆ. ಕಲ್ಲಿನ ರಭಸಕ್ಕೆ ರೈಲಿನ ಕಿಟಿಕಿ ಗಾಜು ತೂತಾಗಿದೆ. ಯಾರಿಗೂ ತೊಂದರೆ ಆಗಿಲ್ಲ. ಈ ಕುರಿತು ರೈಲ್ವೆ ಆರ್‌ಪಿಎಫ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುತ್ತಿರುವ ಪ್ರಕರಣಗಳು
ರೈಲಿಗೆ ಕಲ್ಲು ಹೊಡೆಯುವ ಪ್ರಕರಣಗಳು ಈ ಭಾಗದಲ್ಲಿ ಹೆಚ್ಚುತ್ತಿವೆ. ಈ ಹಿಂದೆಯೂ ದಾವಣಗೆರೆ ಮತ್ತು ಅರಸೀಕೆರೆ ನಡುವಿನ ಹೊಸದುರ್ಗ, ಹೊಳಲ್ಕೆರೆ, ಚಿಕ್ಕಜಾಜಾರು ಭಾಗದಲ್ಲಿ ರೈಲಿಗೆ ಕಲ್ಲು ಹೊಡೆಯುವ ಕಿಡಿಗೇಡಿ ಪ್ರಕರಣಗಳು ವರದಿ ಆಗಿದ್ದವು. ಆದರೆ ನಾಲ್ಕು ದಿನದ ಹಿಂದೆ ಆರಂಭವಾದ ಹೊಸ ಹೈಸ್ಪೀಡ್ ರೈಲು ವಂದೇಭಾರತ್ ರೈಲಿಗೆ ಕಲ್ಲು ಹೊಡೆದ ಪ್ರಕರಣ ನಡೆದಿದೆ. ಈ ರೈಲಿಗೆ ಗ್ಲಾಸ್ ಕಿಟಕಿ ಇರುವುದರಿಂದ ರೈಲ್ವೆ ನಷ್ಠ ಹಾಗೂ ಪ್ರಯಾಣಿಕರಿಗೆ ಏಟು ಬೀಳುವ ಸಾಧ್ಯತೆ ಹೆಚ್ಚಿದೆ ಎಂದು ರೈಲ್ವೆ ಪೊಲೀಸರು ಹೇಳುತ್ತಾರೆ.
ಜೂನ್ 27 ರಿಂದ ಆರಂಭವಾಗಿತ್ತು
ಕರ್ನಾಟಕದ ಎರಡನೇ ವಂದೇ ಭಾರತ್ ರೈಲು ಬೆಂಗಳೂರು ಧಾರವಾಡ ಎಕ್ಸ್‌ಪ್ರೆಸ್ ಜೂನ್ 27 ರಿಂದ ಆರಂಭವಾಗಿತ್ತು. ಪ್ರಧಾನಿ ಮೋದಿ ಆನ್‌ಲೈನ್ ಮೂಲಕ ಚಾಲನೆ ನೀಡಿದ್ದರು. ಈ ರೈಲು ಬೆಳಗ್ಗೆ ಬೆಂಗಳೂರಿನಿಂದ ಹೊರಟು ಮಧಾಹ್ನ ಧಾರವಾಡ ತಲುಪಿ ಮತ್ತೆ ಬೆಂಗಳೂರಿಗೆ ಹಿಂದಿರುಗುತ್ತದೆ. ವಾಣಿಜ್ಯ ಸಂಚಾರವನ್ನು ಜೂನ್ 28 ರಿಂದ ವಾಣಿಜ್ಯ ಸಂಚಾರ ಆರಂಭಿಸಿತ್ತು.
ತುಮಕೂರಿಗೂ ರೈಲು ನಿಲ್ಲಿಸಲು ಒತ್ತಾಯ
ವಂದೇ ಭಾರತ್ ರೈಲು ಬೆಂಗಳೂರಿನಿಂದ ಧಾರವಾಡಕ್ಕೆ ಹಾಗೂ ಧಾರವಾಡದಿಂದ ಬೆಂಗಳೂರಿಗೆ ಸಂಚಾರ ಮಾಡುತ್ತಿದ್ದು, ಪ್ರಸ್ತುತ ತುಮಕೂರಿನಲ್ಲಿ ನಿಲುಗಡೆ ಇರುವುದಿಲ್ಲ. ತುಮಕೂರು ನಗರದಿಂದ ವ್ಯಾಪಾರಸ್ಥರು, ಕೈಗಾರಿಕೊದ್ಯಮಿಗಳು ಹಾಗೂ ಇತರರು ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ ಹಾಗೂ ಧಾರವಾಡ ನಗರಕ್ಕೆ ಪ್ರತಿನಿತ್ಯ ಕಾರ್ಯನಿಮಿತ್ತ ಓಡಾಡುವುದರಿಂದ ಈ ಎಲ್ಲ ವರ್ಗಕ್ಕೆ ಅನುಕೂಲವಾಗಲು ವಂದೇ ಭಾರತ್ ರೈಲು ತುಮಕೂರಿನಲ್ಲಿ ನಿಲುಗಡೆ ಮಾಡಬೇಕೆಂದು ಹಾಗೂ ಈ ನಮ್ಮ ಬೇಡಿಕೆಯನ್ನು ಅತೀ ಶೀಘ್ರದಲ್ಲಿಈಡೇರಿಸಬೇಕೆಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಟಿ.ಜೆ.ಗಿರೀಶ್ ಕೇಂದ್ರ ರೈಲ್ವೆ ಸಚಿವ ಅಶ್ವಿನಿವೈಷ್ಣವ್, ಸಂಸದ ಜಿ.ಎಸ್.ಬಸವರಾಜ್ ಹಾಗೂ ಜನರಲ್ ಮ್ಯಾನೇಜರ್, ದಕ್ಷಿಣ ನೈರುತ್ಯ ರೈಲ್ವೆ ಇಲಾಖೆ, ಹುಬ್ಬಳ್ಳಿ ಇವರಿಗೆ ಪತ್ರ ಬರೆದಿದ್ದಾರೆ,
ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
Tags:
Daily News