PGK NEWS:-ಗೋಮಾಂಸ ಹಾಗೂ ಚರ್ಮ ಸಾಗಾಟ ವಿಚಾರ ಸಂಬಂಧ ಶಿವಮೊಗ್ಗದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ.

PGK NEWSಶಿವಮೊಗ್ಗ:ಗೋಮಾಂಸ ಹಾಗೂ ಚರ್ಮ ಸಾಗಾಟ ವಿಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಜಿಲ್ಲೆಯ ಶಿಕಾರಿಪುರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಅಲ್ಲದೇ, ಪೊಲೀಸ್ ಠಾಣೆ ಮುಂದೆಯೂ ಯುವಕರು ತಳ್ಳಾಟ, ನೂಕಾಟ ನಡೆಸಿದ್ದಾರೆ.
ಶಿಕಾರಿಪುರ ತಾಲೂಕು ಮಳಲಿಕೊಪ್ಪ ಬಳಿ ಕೆಲವರು ದನದ ಮಾಂಸ ಸಾಗಾಟ ಮಾಡುವಾಗ ಕೆಲ ಸಂಘಟನೆ ಕಾರ್ಯಕರ್ತರು ವಾಹನ ತಡೆದಿದ್ದಾರೆ. ಬಳಿಕ ದನದ ಚರ್ಮ ಹಾಗೂ ಮಾಂಸ ಸಾಗಿಸುತ್ತಿದ್ದ ವಾಹನವನ್ನು ಪೊಲೀಸರ ಸಮ್ಮುಖದಲ್ಲಿ ಹಿಡಿದುಕೊಂಡು ಠಾಣೆಗೆ ತರಲಾಗಿತ್ತು. ಈ ವೇಳೆ ಎರಡೂ ಕಡೆಯ ಯುವಕರು ಪೊಲೀಸ್ ಠಾಣೆ ಮುಂದೆ ಜಮಾವಣೆ ಆಗಿದ್ದರು.

ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ. ಅಷ್ಟರಲ್ಲಿ ಪೊಲೀಸರು‌ ಮಧ್ಯ ಪ್ರವೇಶಿಸಿ ಗುಂಪನ್ನು‌ ಚದುರಿಸಿದ್ದಾರೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ. ಸ್ಥಳಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ ಕುಮಾರ್ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

ಗಾಯಾಳುವಿನ ಆರೋಗ್ಯ ವಿಚಾರಿಸಿದ ಸಂಸದ ರಾಘವೇಂದ್ರ:ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದ ವ್ಯಕ್ತಿಯನ್ನು ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಸದ ಬಿ.ವೈ. ರಾಘವೇಂದ್ರ ಅವರು ಆಸ್ಪತ್ರೆಗೆ ಭೇಟಿ ನೀಡಿ,‌ ಗಾಯಾಳುವಿನ ಆರೋಗ್ಯ ವಿಚಾರಿಸಿದರು. ಘಟನೆಯಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ‌‌ ಕೊಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಗೋಮಾಂಸ ಸಾಗಾಟದ ಬಗ್ಗೆ ಪ್ರಕರಣ ದಾಖಲು:ಗೋಮಾಂಸ ಸಾಗಾಟ ಮಾಡುತ್ತಿದ್ದವರ ವಿರುದ್ಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಂಸ ಸಾಗಾಟ ಮಾಡುವ ಕುರಿತು ಮೂವರು ಯುವಕರು ಪ್ರಶ್ನೆ ಮಾಡುತ್ತಿರುವ ಸಂದರ್ಭದಲ್ಲೇ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ತಪಾಸಣೆ ನಡೆಸಿ, ಪ್ರಕರಣ ದಾಖಲಿಸಲಾಗಿದೆ. ಸದ್ಯ ಶಿಕಾರಿಪುರ ಪಟ್ಟಣ ಶಾಂತಿಯುತವಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ ಕುಮಾರ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‌
PGK

Post a Comment

Previous Post Next Post