PGK NEWS:-ಪಶ್ಚಿಮಘಟ್ಟದ ತಪ್ಪಲಲ್ಲಿ ಈ ವರ್ಷ "ಮಳೆಯ ಅಬ್ಬರ'' (ಪಶ್ಚಿಮ ಘಟ್ಟ ಕೂಗು ಪತ್ರಿಕೆ ವಿಶೇಷ ವರದಿ)



 PGK NEWS:-ಚಿಕ್ಕಮಗಳೂರು
ಪಶ್ಚಿಮಘಟ್ಟದ ತಪ್ಪಲನ ಬೆಳಗಾವಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಬಹುತೇಕ ನದಿ ಮತ್ತು ಜಲಾಶಯಗಳಿಗೆ ನಿಧಾನವಾಗಿ ಮೊದಲಿನ ಕಳೆ ಬರಲಾರಂಭಿಸಿದೆ.

ನೆರೆಯ ಮಹಾರಾಷ್ಟ್ರ ಹಾಗೂ ಬೆಳಗಾವಿ ಮತ್ತು ಖಾನಾಪುರ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಘಟಪ್ರಭಾ-ಮಲಪ್ರಭಾ ನದಿಗಳು ತುಂಬಿ ಹರಿಯುತ್ತಿವೆ. ಮಹಾರಾಷ್ಟ್ರದ ಕೊಯ್ನಾ ಮತ್ತು ಕಾಳಮ್ಮವಾಡಿ ಜಲಾಶಯ ವ್ಯಾಪ್ತಿಯಲ್ಲೂ ಭಾರೀ ಮಳೆಯಾಗುತ್ತಿದ್ದು ಕೃಷ್ಣಾ ವೇದಗಂಗಾ, ದೂಧಗಂಗಾ ನದಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರಲಾರಂಭಿಸಿದೆ.


ಮಹಾರಾಷ್ಟ್ರದ ಅಂಬೋಲಿ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಘಟಪ್ರಭಾ ನದಿ ಮತ್ತು ಹಿಡಕಲ್‌ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಮಲಪ್ರಭಾ ಹಾಗೂ ಹಿಪ್ಪರಗಿ ಜಲಾಶಯದಲ್ಲೂ ಒಳಹರಿವು ಹೆಚ್ಚಾಗಿದೆ. ಖಾನಾಪುರ ತಾಲೂಕಿನ ಹೆಬ್ಟಾನಟ್ಟಿಯ ಮಾರುತಿ ದೇವಸ್ಥಾನ ಹಾಗೂ ಹಿಡಕಲ್‌ ಜಲಾಶಯದ ಹಿನ್ನೀರಿನಲ್ಲಿದ್ದ ಅತ್ಯಂತ ಪುರಾತನ ವಿಠuಲ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ.
ಕಾಫಿನಾಡಲ್ಲೂ ಮಳೆ: ಇನ್ನು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲೂ ಮಳೆ ಬಿರುಸುಗೊಂಡಿದ್ದು, ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನಮಟ್ಟ ಏರಿಕೆಯಾಗಿದೆ. ಗಾಳಿ-ಮಳೆಗೆ ಅಲ್ಲಲ್ಲಿ ಮರ ಮುರಿದು ಬಿದ್ದಿದ್ದು,ಹೇಮಾವತಿ ನದಿ ದಡದಲ್ಲಿ ಮೂಡಿಗೆರೆ ತಾಲೂಕು ದಾರದಹಳ್ಳಿ ಗ್ರಾಮದ ದೇವಮ್ಮ (61) ಎಂಬವರ ಶವ ಪತ್ತೆಯಾಗಿದೆ. ಇವರು ಮೂರು ದಿನಗಳಿಂದ ಕಾಣೆಯಾಗಿದ್ದರು ಎನ್ನಲಾಗಿದೆ.
ಕಳಸ, ಕುದುರೆಮುಖ, ಮೂಡಿಗೆರೆ, ಕೊಪ್ಪ, ನರಸಿಂಹರಾಜಪುರ, ಬಾಳೆಹೊನ್ನೂರು, ಶೃಂಗೇರಿ ಭಾಗದಲ್ಲಿ ಮಳೆಯಾಗುತ್ತಿದೆ.

 ಶೃಂಗೇರಿ ಸುತ್ತಮುತ್ತ ಭಾರೀ ಮಳೆಯಾಗಿದ್ದು, ಕಪ್ಪೆ ಶಂಕರ ದೇವಸ್ಥಾನ ತುಂಗಾನದಿ ನೀರಿನಲ್ಲಿ ಮುಳುಗಿದೆ. ಮೂಡಿಗೆರೆ ತಾಲೂಕು ಚಾರ್ಮಾಡಿ ಘಾಟಿ ಪ್ರದೇಶ ಮಳೆ ಮಂಜಿನಿಂದ ಆವರಿಸಿದೆ. ಶೃಂಗೇರಿ ತಾಲೂಕು ಕೆರೆಕಟ್ಟೆ ಚೆಕ್‌ಪೋಸ್ಟ್‌ ಸಮೀಪ ಚಲಿಸುತ್ತಿದ್ದ ಲಾರಿ ಮೇಲೆ ಮರವೊಂದು ಮುರಿದು ಬಿದ್ದು, ಲಾರಿ ಚಾಲಕ ಸ್ವಲ್ಪದರಲ್ಲೇ ಪಾರಾಗಿದ್ದಾನೆ. ಕಡೂರು, ತರೀಕೆರೆ, ಅಜ್ಜಂಪುರ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.

"ಪಶ್ಚಿಮ ಘಟ್ಟ ಕೂಗು ಪತ್ರಿಕೆ ವಿಶೇಷ ವರದಿ''

PGK

Post a Comment

Previous Post Next Post