PGK NEWS:-ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಕೊಂಚ ಬಿಡುವು ಪಡೆದಿದ್ದ ಮಳೆ ಇಂದು ಬಿರುಸಾಗಿದೆ.
ಶುಕ್ರವಾರ ಮಳೆ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಶನಿವಾರ ರಜೆ ಘೋಷಣೆ ಮಾಡಿರಲಿಲ್ಲ. ಆದರೆ ಶನಿವಾರ ಮಳೆ ಮುಂಜಾನೆಯಿಂದಲೇ ಜೋರಾಗಿ ಸುರಿಯಲಾರಂಭಿಸಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಬಹುತೇಕ ಒದ್ದೆಯಾಗಿಯೇ ಶಾಲೆ ಸೇರುವಂತಾಯಿತು.
ವಿಮಾನ ಸಂಚಾರ ವ್ಯತ್ಯಯ:
ಹವಾಮಾನ ವೈಪರೀತ್ಯದಿಂದಾಗಿ ಮುಂಬೈ ಹಾಗೂ ದುಬೈಯಿಂದ ಆಗಮಿಸಿರುವ ವಿಮಾನಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆ ತಡವಾಗಿ ಲ್ಯಾಂಡಿಂಗ್ ಆಗಿದೆ. ಜೊತೆಗೆ ಹೈದರಾಬಾದ್‌ನಿಂದ ಆಗಮಿಸಿರುವ ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲು ಸಾಧ್ಯವಾಗದೆ ಆಕಾಶದಲ್ಲೇ ಸುತ್ತುಹಾಕಿ ಮತ್ತೆ ಹಿಂತಿರುಗಿ ಬಂದು ಲ್ಯಾಂಡ್ ಆಗಿದೆ.
ಮುಂದುವರೆದ ಶೋಧ:
ಸುಳ್ಯ ಆಲೆಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ಕಾಲುಸಂಕ ದಾಟುತ್ತಿರುವ ವೇಳೆ ನೀರು ಪಾಲಾದ ಕೂಲಿ ಕಾರ್ಮಿಕನ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ. ಎನ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳ ಹಾಗೂ ನುರಿತ ಈಜುಗಾರರಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಗುರುವಾರ ಸಂಜೆ ಕೇರಳದ ನಾರಾಯಣ ಯಾನೆ ಬಾಲಕೃಷ್ಣ(47) ಕಾಲುಸಂಕ ದಾಟುವಾಗ ಕಾಲು ಜಾರಿ ಬಿದ್ದು ನೀರು ಪಾಲಾಗಿದ್ದರು. ಗುರುವಾರ ಸಂಜೆವರೆಗೆ ನಡೆದ ನಡೆದ ಶೋಧಕಾರ್ಯದಲ್ಲಿ ಅವರ ಸುಳಿವು ಪತ್ತೆಯಾಗಿರಲಿಲ್ಲ. ಶುಕ್ರವಾರ ಮತ್ತೆ ಎನ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳ ತಂಡದ ಸುಮಾರು ೧೫ರಿಂದ ೨೦ ಮಂದಿ ಆಗಮಿಸಿ ಮೆಷಿನ್ ಬೋಟ್ ಬಳಸಿ ಹುಡುಕಾಟ ನಡೆಸಿದ್ದಾರೆ. ಅಲ್ಲದೇ ಸ್ಥಳೀಯ ಮುಳುಗು ತಜ್ಞರು ಆಗಮಿಸಿ ನೀರಿನಲ್ಲಿ ಹುಡುಕಾಟ ನಡೆಸಿದರು. ಇಂದು ಕೂಡ ಶೋಧ ಕಾರ್ಯ ಮುಂದುವರಿದಿದೆ.
ಮೆಸ್ಕಾಂಗೆ ೧೧.೨೮ ಕೋಟಿ ನಷ್ಟ:
ಮಳೆಗಾಲ ಆರಂಭವಾದಾಗಿನಿಂದ ಈವರೆಗೆ ಸುರಿದ ಧಾರಾಕಾರ ಮಳೆಗೆ ಮೆಸ್ಕಾಂನ ಸಾಕಷ್ಟು ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಗಿದೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಂಭವಿಸಿದ ಹಾನಿಯಿಂದಾಗಿ ಮೆಸ್ಕಾಂಗೆ ೧೧.೨೮ ಕೋಟಿ ರೂ. ನಷ್ಟ ಉಂಟಾಗಿದೆ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಳಂಜದಲ್ಲಿ ಇಂದು ಬೆಳಿಗ್ಗೆ ೮.೩೦ರ ತನಕ ಕಳೆದ ೨೪ ತಾಸಿನಲ್ಲಿ ೧೨.೯೦ ಸೆ.ಮೀ. ಮಳೆಯಾಗಿದ್ದು, ಇದು ಜಿಲ್ಲೆಯಲ್ಲಿಯೇ ಅತ್ಯಧಿಕ.