PGK NEWS:-ಬೆಂಗಳೂರು:-ನಾನು ಪೂರ್ಣ ಪ್ರಮಾಣದ 3,27,747 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದೇನೆ. ಇದು ನಮ್ಮ ಗ್ಯಾರಂಟಿ ಬಜೆಟ್. ನಾವು ಕೊಟ್ಟ ಮಾತಿನಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ವಿಧಾನಸಭೆಯಲ್ಲಿ 2023-24ನೇ ಸಾಲಿನ ಬಜೆಟ್ ಮಂಡಿಸಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಚುನಾವಣಾ ಪೂರ್ವದಲ್ಲಿ ನಾವು ನೀಡಿದ್ದ 5 ಗ್ಯಾರೆಂಟಿಗಳಿಗೆ ಅನುದಾನ ಒದಗಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಸಮತೋಲಿತ ಹಾಗೂ ದೂರದೃಷ್ಟಿಯ ಬಜೆಟ್ ಅನ್ನು ನಾಡಿನ ಜನತೆಗೆ ಅರ್ಪಿಸುತ್ತಿದ್ದೇನೆ ಎಂದರು.
ನಮ್ಮ ಭರವಸೆಗಳು ಈ ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಭಿನ್ನವಾಗಿವೆ. ಅವರು ಬಡವರಿಗೆ ನೀಡುತ್ತಿದ್ದ ಏಳು ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಸಿದ್ದರು. ಹೀಗಾಗಿ ನಾವು 10 ಕೆಜಿ ಉಚಿತ ನೀಡುವುದಾಗಿ ನಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದ್ದೇವು. ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರಕ್ಕೆ ವರ್ಷಕ್ಕೆ 52 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಲಿದೆ. ಆದರೆ ಈ ಗ್ಯಾರಂಟಿ ಯೋಜನೆಗಳಿಂದ 1.3 ಕೋಟಿ ಕುಟುಂಬಗಳಿಗೆ ಲಾಭವಾಗಲಿದೆ ಎಂದರು.
ಸಾಲ ಜಿಡಿಪಿಯ ಶೇ. 25ರ ಒಳಗೆ ಇರಬೇಕು. ಆದರೆ ನಮ್ಮ ರಾಜ್ಯ ಸರ್ಕಾರದ ಸಾಲ ಶೇ. 23 ಇದೆ ಎಂದು ಸಿಎಂ ಸಿದ್ದರಾಮಯ್ಯ ಅವರು ವಿವರಿಸಿದ್ದಾರೆ.
ಈ ಸಾಲ ಜಿಡಿಪಿಯ ಶೇ. 25ರ ಒಳಗೆ ಇರಬೇಕು. ಆದರೆ ನಮ್ಮ ರಾಜ್ಯ ಸರ್ಕಾರದ ಸಾಲ ಶೇ. 23 ಇದೆ ಎಂದು ಸಿಎಂ ಸಿದ್ದರಾಮಯ್ಯ ಅವರು ವಿವರಿಸಿದ್ದಾರೆ.
ಮೆಟ್ರೋ ವಿಸ್ತರಣೆಗೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದು, ಬೆಂಗಳೂರಿನ ನಮ್ಮ ಮೆಟ್ರೋ ವಿಸ್ತರಣೆಗೆ 31,328 ಕೋಟಿ ರೂಪಾಯಿ ಅನುದಾನ ನೀಡಿದ್ದು, ಎರಡು ಪ್ರತ್ಯೇಕ ಮೆಟ್ರೋ ರೈಲು ಯೋಜನೆಗಳನ್ನು ಪ್ರಸ್ತಾಪಿಸಿದ್ದಾರೆ.
ಇಂದು ವಿಧಾನಸಭೆಯಲ್ಲಿ ದಾಖಲೆಯ 14ನೇ ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು, ಮೆಟ್ರೋ ಹಂತ-3ರ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ವಿವರವಾದ ಯೋಜನಾ ವರದಿಯನ್ನು ಸಲ್ಲಿಸಲಾಗಿದೆ ಎಂದರು.
ಇದರೊಂದಿಗೆ ಹೆಬ್ಬಾಳದಿಂದ ಸರ್ಜಾಪುರದವರೆಗೆ 37 ಕಿ.ಮೀ ಉದ್ದದ ಹೊಸ ಮೆಟ್ರೊ ಮಾರ್ಗವನ್ನು 15,000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸುವ ಹೊಸ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಸಿಎಂ ತಿಳಿಸಿದರು.
ಪ್ರಸಕ್ತ ವರ್ಷ ಬೈಯ್ಯಪ್ಪನಹಳ್ಳಿಯಿಂದ ಕೃಷ್ಣರಾಜಪುರ, ಕೆಂಗೇರಿಯಿಂದ ಚಲ್ಲಘಟ್ಟ, ನಾಗಸಂದ್ರದಿಂದ ಮಾದವಾರ, ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಮೆಟ್ರೊ ಮಾರ್ಗ ವಿಸ್ತರಣೆಯಾಗಲಿದೆ ಎಂದರು.
ಮುಂದಿನ ಮೂರು ವರ್ಷಗಳಲ್ಲಿ 70ಕಿ.ಮೀ. ಉದ್ದದ ಸಂಪರ್ಕ ಜಾಲ ಹೊಂದಿರುವ ಮೆಟ್ರೋ ಮಾರ್ಗವನ್ನು 176 ಕಿಮೀಗೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಪ್ರತಿನಿತ್ಯ 5.7 ಲಕ್ಷ ಪ್ರಯಾಣಿಕರು ಸಂಚರಿಸುವ ಮೆಟ್ರೋ ರೈಲು ಮಾರ್ಗ 70ಕಿಮೀ ಉದ್ದದ ಸಂಪರ್ಕ ಜಾಲ ಹೊಂದಿದ್ದು, 2024ರ ಅಂತ್ಯದ ವೇಳೆಗೆ ಬಯ್ಯಪ್ಪನಹಳ್ಳಿಯಿಂದ ಕೆಆರ್ ಪುರಂವರೆಗೆ, ಕೆಂಗೇರಿ ಯಿಂದ ಚಲ್ಲಘಟ್ಟದವರೆಗೆ, ನಾಗಸಂದ್ರದಿಂದ ನಾಗವಾರದವರೆಗೆ, ಆರ್‍ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಒಟ್ಟು 27ಕಿಮೀ ಉದ್ದದ ನೂತನ ಮಾರ್ಗಗಳನ್ನು ಪ್ರಾರಂಭಿಸಲಾಗುವುದು ಎಂದು ಸಿಎಂ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.
ಇದರ ಜತೆಗೆ ಪ್ರಗತಿಯಲ್ಲಿರುವ ಏರ್‍ಪೋರ್ಟ್ ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಿ 2026ರ ವೇಳೆಗೆ ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ನಡೆಸುವಂತೆ ನೋಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಬಜೆಟ್: ಜಲಸಂಪನ್ಮೂಲ ಇಲಾಖೆಗೆ 1 ಲಕ್ಷ ಕೋಟಿ ರೂ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದು, ಬಜೆಟ್ ನಲ್ಲಿ ಜಲಸಂಪನ್ಮೂಲ ಇಲಾಖೆಗೆ ಒಟ್ಟಾರೆ 1 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ.
ರಾಜ್ಯದಲ್ಲಿ 10 ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 940 ಕೋಟಿ ಮೀಸಲಿಡಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರು ಕುಡಿಯುವ ನೀರು ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ತಮ್ಮ 14ನೇ ಬಜೆಟ್ ನಲ್ಲಿ 770 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, 172 ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧಾರ ಮಾಡಿದೆ ಎಂದು ತಿಳಿಸಿದ್ದಾರೆ.
19 ಕೆರೆಗಳಿಗೆ ನೀರು ತುಂಬಿಸಲು 770 ಕೋಟಿ ಹಣ ಮೀಸಲಿಡಲಾಗಿದೆ. ಬೆಳಗಾವಿ, ದಾವಣಗೆರೆ, ಬಳ್ಳಾರಿ, ಹಾವೇರಿ, ಗದಗ, ಬೀದರ್, ಉತ್ತರ ಕನ್ನಡ, ವಿಜಯನಗರ, ಕೊಪ್ಪಳ, ಕಲಬುರಗಿ ಹಾಗೂ ಯಾದಗಿರಿ ಸೇರಿ ಒಟ್ಟು 823,99 ಕೆರೆಗಳನ್ನು ತುಂಬಿಸಲು ಸರ್ಕಾರ ನಿರ್ಧಾರಿಸಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕೆ 5 ಸಾವಿರ ಕೋಟಿ ರೂ., ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆಗೆ 1 ಸಾವಿರ ಕೋಟಿ ರೂ., ಭದ್ರಾ ಮೇಲ್ದಂಡೆ ಯೋಜನೆಗೆ 3 ಸಾವಿರ ಕೋಟಿ ರೂ., ಎತ್ತಿನಹೊಳೆ ಯೋಜನೆ 3 ಸಾವಿರ ಕೋಟಿ ರೂ. ಹಾಗೂ ಮೇಕೆದಾಟು ಯೋಜನೆಗೆ 1 ಸಾವಿರ ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದಲ್ಲಿ ಮಾನವ–ಕಾಡಾನೆ ಸಂಘರ್ಷ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ನಿಯಂತ್ರಿಸಲು ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಒಂದು 520 ಕಿ.ಮೀ.ಗಳ ಬ್ಯಾರಿಕೇಡ್‌ಗಳನ್ನು ನಿರ್ಮಿಸಲು ಘೋಷಿಸಲಾಗಿತ್ತು. ಈ ಯೋಜನೆಯಡಿಯಲ್ಲಿ ಇಲ್ಲಿಯವರೆಗೂ 312 ಕಿ.ಮೀ. ನಷ್ಟು ಬ್ಯಾರಿಕೇಡ್ ನಿರ್ಮಿಸಲಾಗಿದ್ದು, ಬಾಕಿ ಉಳಿದಿರುವ ಬ್ಯಾರಿಕೇಡ್ ನಿರ್ಮಾಣ ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು. ಈ ಕಾಮಗಾರಿಗಳ ಅನುಷ್ಠಾನಕ್ಕೆ 2023-24 ರಲ್ಲಿ 120 ಕೋಟಿ ರೂ. ಮೀಸಲಿಡಲಾಗಿದೆ. ಮಾನವ - ಕಾಡಾನೆ ಸಂಘರ್ಷವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಈಗಾಗಲೇ ಮೈಸೂರು, ಮಂಡ್ಯ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಆನೆ ಕಾರ್ಯಪಡೆಯನ್ನು ರಚಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ರಾಮನಗರ ಮತ್ತು ಬನ್ನೇರುಘಟ್ಟದಲ್ಲಿ ಎರಡು ಹೊಸ ಆನೆ ಕಾರ್ಯಪಡೆಗಳನ್ನು ರಚಿಸಲಾಗುತ್ತದೆ ಮಾನವ-ವನ್ಯಪ್ರಾಣಿ ಸಂಘರ್ಷದಲ್ಲಿ ಸಂರಕ್ಷಿಸಿದ, ಗಾಯಗೊಂಡ, ಅನಾರೋಗ್ಯ ಪೀಡಿತ ಪ್ರಾಣಿಗಳನ್ನು ರಕ್ಷಣೆ/ನಿರ್ವಹಣೆ ಮಾಡುತ್ತಿರುವ ಬನ್ನೇರುಘಟ್ಟ ಮತ್ತು ಮೈಸೂರಿನಲ್ಲಿರುವ ಪುನರ್ವಸತಿ ಕೇಂದ್ರಗಳ ಸಾಮರ್ಥ್ಯ ವರ್ಧನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಶಿವಮೊಗ್ಗ ಹಾಗೂ ಬೆಳಗಾವಿಯಲ್ಲಿ ಹೊಸದಾಗಿ ಪುನರ್ವಸತಿ ಕೇಂದ್ರಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗುವುದು. ಬೀದರ್ ಜಿಲ್ಲೆಯಲ್ಲಿ ಕೃಷ್ಣಮೃಗಗಳು ಹೆಚ್ಚಾಗಿ ಕಂಡು ಬರುವುದರಿಂದ, ಇವುಗಳ ಸಂರಕ್ಷಣೆಗಾಗಿ ಕೃಷ್ಣಮೃಗ ಸಂರಕ್ಷಣಾ ಮೀಸಲು ಪ್ರದೇಶವನ್ನು ಘೋಷಿಸಲಾಗುವುದು. ಈ ಸಂರಕ್ಷಣಾ ಮೀಸಲು ಪ್ರದೇಶದ ರಕ್ಷಣೆ ಮತ್ತು ನಿರ್ವಹಣೆಗಾಗಿ ಎರಡು ಕೋಟಿ ರೂ. ಮೀಸಲಿಡಲಾಗಿದೆ.
ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ಭೌಗೋಳಿಕ ವಿಸ್ತೀರ್ಣದ ಶೇ.33 ರಷ್ಟು ಭಾಗ ಅರಣ್ಯ ಪ್ರದೇಶದಿಂದ ಆವೃತಗೊಂಡಿರಬೇಕಾಗಿದ್ದು, ಕರ್ನಾಟಕ ರಾಜ್ಯದ ಬಯಲುಸೀಮೆ ಪ್ರದೇಶದ 17 ಜಿಲ್ಲೆಗಳಲ್ಲಿ ಶೇ.10ಕ್ಕಿಂತ ಕಡಿಮೆ ಅರಣ್ಯ ಪ್ರದೇಶ ಇರುತ್ತದೆ. ಹಾಗಾಗಿ ಈ ಜಿಲ್ಲೆಗಳಲ್ಲಿ 500 ಕೋಟಿ ರೂ. ವೆಚ್ಚದಲ್ಲಿ 'ಹಸಿರೀಕರಣ ಕಾರ್ಯಕ್ರಮ' ವನ್ನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯೊಂದಿಗೆ ಸಂಯೋಜಿಸಿ ಐದು ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.
ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರದ ಎಲ್ಲಾ ಪ್ರಮುಖ ಯೋಜನೆಗಳಲ್ಲಿ ಪರಿಸರ ಹೊಂದಾಣಿಕೆಯನ್ನು ಮಾಡುವ ಕುರಿತು ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ವತಿಯಿಂದ ಮೌಲ್ಯಮಾಪನ ಮಾಡಲಾಗುವುದು.
ಡಿಕಾರ್ಬೊನೈಸೇಷನ್ನಿನ ಆರ್ಥಿಕತೆಯನ್ನು ಪ್ರೋತ್ಸಾಹಿಸಲು ಮತ್ತು ಹಸಿರು ಬೆಳವಣಿಗೆಯನ್ನು ಉತ್ತೇಜಿಸಲು, ರಾಜ್ಯದಲ್ಲಿನ ಸಂಸ್ಥೆಗಳಿಂದ ಸ್ವಯಂಪ್ರೇರಿತವಾಗಿ ಹೊರಸೂಸುವಿಕೆಯನ್ನು ಬಹಿರಂಗಪಡಿಸುವ ಯೋಜನೆಯನ್ನು ಪ್ರಾರಂಭಿಸಲಾಗುವುದು.
ಶಾಲಾ ಮಕ್ಕಳಿಗೆ ಬ್ಯಾಗ್ ರಹಿತ ದಿನ: 'ಸಂಭ್ರಮ ಶನಿವಾರ' ಆಚರಣೆ ಕುರಿತು ಸರ್ಕಾರ ಸುತ್ತೋಲೆ!
ಶಾಲಾ ಮಕ್ಕಳಿಗೆ ವಾರದಲ್ಲಿ ಒಂದು ದಿನ ಬ್ಯಾಗ್ ರಹಿತವಾಗಿ ಖುಷಿಯಿಂದ ಕಲಿಯುವ ವಾತಾವರಣ ನಿರ್ಮಿಸುವ ಉದ್ದೇಶದಿಂದ ರಾಜ್ಯದ ಶಾಲೆಗಳಲ್ಲಿ ಪ್ರತಿ ತಿಂಗಳ 3ನೇ ಶನಿವಾರವನ್ನು ‘ಬ್ಯಾಗ್ ರಹಿತ ದಿನ ಅಥವಾ ಸಂಭ್ರಮ ಶನಿವಾರ’ ಕಾರ್ಯಕ್ರಮ ನಡೆಸುವಂತೆ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ.
ಇತ್ತೀಚೆಗಷ್ಟೇ ಶಾಲಾ ಬ್ಯಾಗ್‌ತೂಕ ಇಳಿಸಿ ಆದೇಶ ಹೊರಡಿಸಿದ್ದ ಶಿಕ್ಷಣ ಇಲಾಖೆ, ಇದೀಗ ಸಂಭ್ರಮ ಶನಿವಾರ ಆದೇಶ ಹೊರಡಿಸಿದೆ .! .ಮಕ್ಕಳಿಗೆ ಸಂತಸದಾಯಕ ಕಲಿಕೆಯನ್ನು ನೀಡಲು ಹಾಗೂ ಮಕ್ಕಳಿಗೆ ಪಠ್ಯವನ್ನು ಹೊರೆಯಾಗಿಸದೆ ಉಲ್ಲಾಸದಿಂದ ಕಲಿಯುವಂತೆ ಮಾಡುವ ಉದ್ದೇಶದಿಂದ ಪ್ರತಿ ತಿಂಗಳು ಒಂದು ಶನಿವಾರದಂದು ಬ್ಯಾಗ್ ರಹಿತ ದಿನವೆಂದು ಆಚರಿಸುವಂತೆ ಆದೇಶಿಸಲಾಗಿದೆ. ಮಕ್ಕಳನ್ನು ಬಹುಮುಖ ಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ನಾಗರಿಕ ಪ್ರಜ್ಞೆಯನ್ನು ಬೆಳೆಸಲು ವಿವಿಧ ವಿಷಯಗಳಲ್ಲಿ ವಿದ್ಯಾರ್ಥಿಗಳಿಗಾಗಿ 10 ಸ್ವಯಂ ವಿವರಣಾತ್ಮಕ ಮಾಡ್ಯೂಲ್‌ಗಳನ್ನು ಹಾಗೂ ಶಿಕ್ಷಕರಿಗೆ ಮಾರ್ಗದರ್ಶಿ ಕೈಪಿಡಿಯನ್ನು ಸಿದ್ಧಪಡಿಸಲಾಗಿದೆ. ಈ ಕುರಿತು ಜಿಲ್ಲಾ, ತಾಲ್ಲೂಕು ಹಾಗೂ ಕ್ಲಸ್ಟರ್ ಮಟ್ಟದಲ್ಲಿ ನಡೆಸಲಾಗುವ ಮುಖ್ಯ ಶಿಕ್ಷಕರು ಶಿಕ್ಷಕರ ಸಭೆಗಳಲ್ಲಿ ಅಗತ್ಯ ಮಾರ್ಗದರ್ಶನ ನೀಡುವಂತೆ ತಿಳಿಸಲಾಗಿದೆ.
ಸಂಭ್ರಮ ಶನಿವಾರ ದಂದು ಜಿಲ್ಲಾ ಹಂತ, ಬ್ಲಾಕ್ ಹಂತದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಶಾಲೆಗಳಿಗೆ ಭೇಟಿ ನೀಡಿ ಅಗತ್ಯ ಮಾರ್ಗದರ್ಶನ ನೀಡುವಂತೆ ತಿಳಿಸಲಾಗಿದೆ.
2023-24ನೇ ಶೈಕ್ಷಣಿಕ ಸಾಲಿನ ‘ಸಂಭ್ರಮ ಶನಿವಾರ’ ಆಚರಣೆಗೆ ಸಂಬಂಧಿಸಿದ ಜಿಲ್ಲಾ ಹಂತದ ಕ್ರೋಡೀಕೃತ ವರದಿಯನ್ನು ಪ್ರತಿ ತಿಂಗಳು ಸಿದ್ಧಪಡಿಸಿ ಕಚೇರಿಗೆ ಕಳುಹಿಸಿಕೊಡುವಂತೆ ಸುತ್ತೋಲೆಯಲ್ಲಿತಿಳಿಸಲಾಗಿದೆ.