PGK NEWS:- ಉತ್ತರ ಕನ್ನಡ ಜೂನ್‌ನಲ್ಲಿ ತೀವ್ರ ಮಳೆ ಅಭಾವ ಎದುರಿಸಿದ್ದ ರಾಜ್ಯವು ಜುಲೈನಲ್ಲಿ ತುಸು ಚೇತರಿಕೆ ಹಾದಿಯತ್ತ ಸಾಗಿದೆ. ಜು.1ರಿಂದ ಜು.5ರವರೆಗೆ ವಾಡಿಕೆಗಿಂತ ತುಸು ಅಧಿಕವಾಗಿ ವರ್ಷಧಾರೆಯಾಗಿದೆ. ಇದರಿಂದಾಗಿ ಮಳೆ ಕೊರತೆಯಿಂದ ದಯನೀಯ ಸ್ಥಿತಿಗೆ ಒಳಗಾಗಿದ್ದ ರೈತಾಪಿ ವರ್ಗ ನಿಟ್ಟಿಸಿರುವ ಬಿಡುವಂತಾಗಿದೆ.
ರಾಜ್ಯಾದ್ಯಂತ ಐದು ದಿನಗಳಲ್ಲಿ 42 ಮಿಮೀ ಮಳೆಯಾಗಬೇಕಿತ್ತು. ಆದರೆ 45 ಮಿಮೀ ಬಿದ್ದಿದ್ದು, ಶೇ.8ರಷ್ಟು ಹೆಚ್ಚಾಗಿ ಸುರಿದಿದೆ. ಒಟ್ಟು 31 ಜಿಲ್ಲೆಗಳ ಪೈಕಿ 23 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ವರ್ಷಧಾರೆಯಾದರೆ, ಚಾಮರಾಜನಗರ, ಮೈಸೂರು, ಮಂಡ್ಯ, ಬೆಳಗಾವಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ಪ್ರಸಕ್ತ ತಿಂಗಳ ಮೊದಲ ವಾರದಲ್ಲಿಯೂ ಮಳೆ ಕೊರತೆ ಮುಂದುವರಿದಿದೆ. ಇದರಿಂದಾಗಿ ಮೈಸೂರು ಭಾಗದಲ್ಲಿ ಕೃಷಿ ಚಟುವಟಿಕೆಗಳ ಮೇಲೆ ಇನ್ನಷ್ಟು ಪರಿಣಾಮ ಬೀರಿದಂತಾಗಿದೆ
ಕರಾವಳಿ ಭಾಗದಲ್ಲಿ ಬುಧವಾರವೂ ವರುರ್ಣಾಭಟ ಮುಂದುವರಿದಿದ್ದು, ಉಡುಪಿ ಜಿಲ್ಲೆಯಾದ್ಯಂತ ಸರಾಸರಿ 200 ಮಿಮೀ ಅಧಿಕ ಮಳೆ ಸುರಿದಿದೆ. ಉತ್ತರ ಕನ್ನಡದಲ್ಲಿ ಜು.6ರಂದು ಅತಿ ಹೆಚ್ಚು ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಈ ಸಂದರ್ಭದಲ್ಲಿ 204 ಮಿಮೀ ಮಳೆ ಸುರಿಯುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರ ಇಳಿಯದಂತೆ ಹಾಗೂ ಸಮುದ್ರ ತೀರದ ನಿವಾಸಿಗಳು ಎಚ್ಚರಿಕೆಯಿಂದಿರುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಹಾವೇರಿ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗದಲ್ಲಿ ಮುಂದಿನ 24 ಗಂಟೆ ಕಾಲ ಭಾರಿ ಮಳೆ ಬೀಳುವ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಇರಲಿದೆ. ದಾವಣಗೆರೆ, ಧಾರವಾಡ, ಗದಗ, ರಾಯಚೂರು, ದಾವಣಗೆರೆಯಲ್ಲಿ ಜು.6ರಂದು ಯೆಲ್ಲೋ ಅಲರ್ಟ್ ಇರಲಿದ್ದು, ಉಳಿದೆಡೆ ಸಾಧಾರಣ ವರ್ಷಧಾರೆಯಾಗಲಿದೆ.
Tags:
Daily News