PGK NEWS:- ಬೆಂಗಳೂರು, ಜುಲೈ 09; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ, ಸಿಬ್ಬಂದಿಗೆ ಯಾವುದೇ ಮುನ್ಸೂಚನೆ ನೀಡಿದೆ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ದಿಢೀರ್ ಬೆಂಗಳೂರು ನಗರದ ಪ್ರದಕ್ಷಿಣೆ ಕೈಗೊಂಡರು.
ಭಾನುವಾರ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ. ಕೆ. ಶಿವಕುಮಾರ್ ದಿಢೀರ್ ಬೆಂಗಳೂರು ಪ್ರದಕ್ಷಿಣೆ ಕೈಗೊಂಡರು. ಮೊದಲಿಗೆ ಅವರು ಇಂದಿರಾ ಕ್ಯಾಂಟೀನ್ ಪರಿಸ್ಥಿತಿ ಪರಿಶೀಲಿಸಿದರು. ದಾಸರಹಳ್ಳಿ ವಲಯದ ವಾರ್ಡ್ ಸಂಖ್ಯೆ 39 ಚೊಕ್ಕಸಂದ್ರದ ಇಂದಿರಾ ಕ್ಯಾಂಟೀನ್‌ಗೆ ಬೆಳಗ್ಗೆ 9.10 ಕ್ಕೆ ಭೇಟಿ ನೀಡಿ ತಿಂಡಿ ಕೇಳಿದರು.
ಅದಾಗಲೇ ಕ್ಯಾಂಟೀನ್‌ನಲ್ಲಿ ತಿಂಡಿ ಖಾಲಿ ಆಗಿತ್ತು. ಎಷ್ಟು ಪ್ಲೇಟ್ ಬರುತ್ತದೆ? ಎಂದು ಕ್ಯಾಂಟೀನ್ ಮ್ಯಾನೇಜರ್‌ಗೆ ಕೇಳಿದರು. 208 ಪ್ಲೇಟ್ ಬಂದು ಖಾಲಿ ಆಗಿದೆ ಎಂದರು. "ಮಾಧ್ಯಮ ಮಿತ್ರರಿಗೆ ತಿಂಡಿ ಕೊಡಿಸೋಣ ಅಂದುಕೊಂಡೆ, ಆದರೆ ಖಾಲಿ ಆಗಿದೆಯಲ್ಲ" ಎಂದು ನಗೆ ಬೀರಿದರು. ಈ ಸಂದರ್ಭದಲ್ಲಿ ಸಾಕಷ್ಟು ಪ್ರಮಾಣದಲ್ಲಿ ತಿಂಡಿ ಪೂರೈಕೆ ಖಾತರಿಪಡಿಸಿಕೊಳ್ಳಲು ಕೊಳ್ಳಲು ಸೂಚನೆ ಕೊಟ್ಟರು.
ಉಪ್ಪಿಟ್ಟು, ಕೇಸರಿಬಾತ್ ಸವಿದರು; ಡಿ. ಕೆ. ಶಿವಕುಮಾರ್ ಬಳಿಕ ದಾಸರಹಳ್ಳಿಯ 15ನೇ ವಾರ್ಡ್‌ನ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದರು. ಉಪ್ಪಿಟ್ಟು, ಕೇಸರಿಬಾತ್ ಸವಿದರು. ಈ ಸಂದರ್ಭದಲ್ಲಿ ಪಕ್ಕದಲ್ಲಿ ತಿಂಡಿ ತಿನ್ನುತ್ತಿದ್ದವರನ್ನು ಮಾತನಾಡಿಸಿ, ಮಾಹಿತಿ ಪಡೆದರು.
ಆ ವ್ಯಕ್ತಿಯಿಂದ ಕ್ಯಾಂಟೀನ್ ಸಿಬ್ಬಂದಿ 5 ರೂ. ಬದಲು 10 ರೂ. ಪಡೆದಿರುವುದು ಗಮನಕ್ಕೆ ಬಂದಾಗ ಸಿಬ್ಬಂದಿಯನ್ನು ಪ್ರಶ್ನಿಸಿದರು. ಇದೇ ಸಮಯದಲ್ಲಿ ಇಂದಿರಾ ಕ್ಯಾಂಟೀನ್ ಕುಂದು ಕೊರತೆ ದೂರು ಸಲ್ಲಿಸುವ ಸಹಾಯವಾಣಿಗೆ ಕರೆ ಮಾಡಿಸಿದಾಗ ಆ ಸಂಪರ್ಕ ದುರಸ್ಥಿಯಲ್ಲಿರುವುದನ್ನು ಗಮನಿಸಿದರು. ತಕ್ಷಣ ಸರಿಪಡಿಸಲು ಸೂಚನೆ ನೀಡಿದರು.
ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಪ್ರತಿ ವಾರ, ತಿಂಗಳಿಗೆ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಆಹಾರದ ಗುಣಮಟ್ಟ ಪರಿಶೀಲಿಸುವಂತೆ ಪಾಲಿಕೆ ಆರೋಗ್ಯಾಧಿಕಾರಿಗಳಿಗೆ ನಿರ್ದೇಶನವನ್ನು ನೀಡಿದರು. ಸಿದ್ದರಾಮಯ್ಯ ಕನಸಿನ ಯೋಜನೆ; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆ ಇಂದಿರಾ ಕ್ಯಾಂಟೀನ್. ಬಡವರಿಗೆ ಕಡಿಮೆ ದರದಲ್ಲಿ ಊಟ, ಉಪಹಾರ ಸಿಗುವಂತೆ ಆಗಲು ಮೊದಲ ಬಾರಿಗೆ ಅವರು ಮುಖ್ಯಮಂತ್ರಿಯಾದಾಗ ಯೋಜನೆ ಜಾರಿಗೊಳಿಸಿದರು. ಬೆಂಗಳೂರು ನಗರದಲ್ಲಿಯೇ 100ಕ್ಕೂ ಅಧಿಕ ಇಂದಿರಾ ಕ್ಯಾಂಟೀನ್‌ಗಳಿವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇಂದಿರಾ ಕ್ಯಾಂಟೀನ್ ನಿರ್ವಹಣೆ ನೋಡಿಕೊಳ್ಳುತ್ತದೆ. ಕೆಲವು ಕ್ಯಾಂಟೀನ್‌ಗಳು ಅನುದಾನದ ಕೊರತೆಯ ಕಾರಣ ಮುಚ್ಚುವ ಹಂತಕ್ಕೆ ಬಂದಿದ್ದವು. 2ನೇ ಬಾರಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಇಂದಿರಾ ಕ್ಯಾಂಟೀನ್‌ಗೆ ಮರುಜೀವ ಸಿಕ್ಕಿದೆ. ಊಟದ ಮೆನುವಿನಲ್ಲಿಯೂ ಹಲವು ಬದಲಾವಣೆಯನ್ನು ಮಾಡಲು ಬಿಬಿಎಂಪಿ ಮುಂದಾಗಿದೆ. ಜುಲೈ 7ರ ಶುಕ್ರವಾರ 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್‌ಗಾಗಿ 100 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆ. ಮುಚ್ಚಿರುವ ಕ್ಯಾಂಟೀನ್‌ಗಳನ್ನು ಬಿಬಿಎಂಪಿ, ಸ್ಥಳೀಯ ಸಂಸ್ಥೆಗಳ ಜೊತೆ ಸೇರಿ ಮತ್ತೆ ಆರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ.
ತಮ್ಮ ಬಜೆಟ್ ಭಾಷಣದಲ್ಲಿ ಸಿದ್ದರಾಮಯ್ಯ, "ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಜಾರಿಗೆ ತಂದ ಇಂದಿರಾ ಕ್ಯಾಂಟೀನ್ ಯೋಜನೆಯು ನಗರ ಪ್ರದೇಶಗಳಲ್ಲಿ ಬಡವರು ಹಾಗೂ ಶ್ರಮಿಕರಿಗೆ ಅತ್ಯಂತ ಕಡಿಮೆ ದರದಲ್ಲಿ ಊಟ, ಉಪಾಹಾರ ಒದಗಿಸುವ ಮೂಲಕ ಅವರ ನೆಮ್ಮದಿಗೆ ಕಾರಣವಾಗಿತ್ತು. ಆದರೆ ಹಿಂದಿನ ಸರ್ಕಾರ ವಿವಿಧ ನೆಪಗಳೊಡ್ಡಿ, ಈ ಯೋಜನೆಯನ್ನು ಸ್ಥಗಿತಗೊಳಿಸಿ, ಬಡವರ ವಿರೋಧಿ ಕ್ರಮವನ್ನು ಅನುಸರಿಸಿತು" ಎಂದು ಹೇಳಿದರು. "ಇದೀಗ ಮೊದಲನೇ ಹಂತದಲ್ಲಿ (Phase-1) ಹೊಸ ಮೆನುವಿನೊಂದಿಗೆ, ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಬಿಬಿಎಂಪಿ ಹಾಗೂ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪುನರಾರಂಭ ಮಾಡಲಾಗುವುದು. ಎರಡನೇ ಹಂತದಲ್ಲಿ (Phase-2) ಎಲ್ಲಾ ಹೊಸ ಪಟ್ಟಣಗಳಲ್ಲಿ ಮತ್ತು ಬಿಬಿಎಂಪಿಯ ಹೊಸ ವಾರ್ಡ್‌ಗಳಲ್ಲಿ ಈ ಯೋಜನೆಯನ್ನು ವಿಸ್ತರಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಇಂದಿರಾ ಕ್ಯಾಂಟೀನ್‌ಗಳ ದುರಸ್ತಿ, ನವೀಕರಣ ಹಾಗೂ ನಿರ್ವಹಣೆಗೆ ರಾಜ್ಯ ಸರ್ಕಾರವು 100 ಕೋಟಿ ಒದಗಿಸಲಿದೆ" ಎಂದರು.