PGK NEWS:- ರಾಜ್ಯದಲ್ಲಿ ಈ ವರ್ಷ ಉತ್ತಮ ಮಳೆಯಾಗಿಲ್ಲ, ರೈತರ ಬೆಲೆ ಹಾನಿಯಾಗಿದೆ, ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ ಎಂದು ಸದನದಲ್ಲಿ ಅನೇಕ ಶಾಸಕರು ಪ್ರಶ್ನೆ ಮುಂದಿಟ್ಟರು. ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಕೃಷ್ಣಭೈರೇಗೌಡ, “ ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ವಾಡಿಕೆಗಿಂತ ಶೇ.56 ರಷ್ಟು ಮಳೆ ಕೊರತೆಯಾಗಿದೆ. ಜುಲೈ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಮಳೆಯ ಕೊರತೆ ಇದೀಗ ಶೇ. 29ಕ್ಕೆ ಇಳಿದಿದೆ. ಹೀಗಾಗಿ ಕುಡಿಯುವ ನೀರಿನ ಪೂರೈಕೆಗೆ ಯಾವುದೇ ಸಮಸ್ಯೆ ಇಲ್ಲ” ಎಂದು ಮಾಹಿತಿ ನೀಡಿದ್ದಾರೆ.
ನೀರು ಪೂರೈಕೆಗೆ ತಲಾ 1 ಕೋಟಿ ರೂ. ಮಂಜೂರು
ಜುಲೈ ತಿಂಗಳಿನಲ್ಲಿ ಉತ್ತಮ ಮಳೆಯಾಗಿದ್ದರೂ ಸಹ, ಕೆಲವು ಜಿಲ್ಲೆಗಳು ಈಗಲೂ ಮಳೆ ಕೊರತೆಯನ್ನು ಎದುರಿಸುತ್ತಿವೆ. ರಾಜ್ಯದ 330 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ಈ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರಿನ ಸರಬರಾಜು ಮಾಡಲಾಗುತ್ತಿದೆ. 404 ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ನೀರಿನ ಪೂರೈಕೆ ಮಾಡಲಾಗುತ್ತಿದೆ. ಈ ಹೊರೆಯನ್ನು ಸರ್ಕಾರ ಗ್ರಾಮ ಪಂಚಾಯಿತಿಗಳ ಮೇಲೆ ಹೊರಿಸಿಲ್ಲ. ಬದಲಾಗಿ ಪ್ರತಿ ಜಿಲ್ಲೆಗೆ ನೀರಿನ ಪೂರೈಕೆಗೆಂದೆ ಸರ್ಕಾರ ತಲಾ 1 ಕೋಟಿ ರೂ. ಮಂಜೂರು ಮಾಡಲಾಗಿದೆ.
ಈ ಸಂಬಂಧ ಎಲ್ಲ ಜಿಲ್ಲಾಧಿಕಾರಿಗಳ ಜೊತೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿದ್ದು, ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗದಂತೆ ಎಚ್ಚರವಹಿಸಲು ಸೂಚನೆ ನೀಡಿದ್ದಾರೆ. ಅಲ್ಲದೆ,, ಹೆಚ್ಚುವರಿ ಹಣದ ಅಗತ್ಯ ಇದ್ದರೆ ಅದನ್ನೂ ಪೂರೈಸಲು ಸರ್ಕಾರ ಬದ್ಧವಾಗಿರುವುದಾಗಿ ಸಚಿವ ತಿಳಿಸಲಾಗಿದೆ ಎಂದರು.
ಹಿಂದಿನ ಸರ್ಕಾರ ಜಲಾಶಯಗಳನ್ನು ಅಶಿಸ್ತಿನಿಂದ ನಿರ್ವಹಿಸಿದೆ
ಹಿಂದಿನ ಬಿಜೆಪಿ ಸರ್ಕಾರ ರಾಜ್ಯದ ಎಲ್ಲ ಜಲಾಶಯಗಳನ್ನು ಅಶಿಸ್ತಿನಿಂದ ನಿರ್ವಹಿಸಿದೆ. ಪರಿಣಾಮ ಜಲಾಶಯಗಳು ಬಹುತೇಕ ಬರಿದಾಗಿವೆ ಎಂದು ಕೃಷ್ಣಬೈರೇಗೌಡ ಕಿಡಿಕಾರಿದರು.
ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗದ ಕಾರಣ ಜಲಾಶಯಗಳ ನೀರಿನ ಮಟ್ಟ ಮತ್ತಷ್ಟು ಕುಸಿದಿತ್ತು. ಆದರೆ, ಜುಲೈನಲ್ಲಿ ಉತ್ತಮ ಮಳೆಯಾಗಿದೆ. ಕಾವೇರಿಯ ನಾಲ್ಕು ಜಲಾಶಯಗಳಿಗೆ 18,617 ಕ್ಯೂಸೆಕ್ಸ್ ನೀರಿನ ಒಳಹರಿವಿದೆ. ಕೃಷ್ಣ ನದಿಯ 6 ಜಲಾಶಯಗಳಿಗೆ 76, 264 ಕ್ಯೂಸೆಕ್ಸ್ ನೀರಿನ ಹರಿವಿದೆ. ಆಲಮಟ್ಟಿಗೂ 32,146 ಕ್ಯೂಸೆಕ್ಸ್ ನೀರಿನ ಒಳಹರಿವಿದೆ. ಘಟಪ್ರಭ-ಮಲಪ್ರಭದಲ್ಲೂ ನೀರಿನ ಒಳಹರಿವು ಹಣನೀಯವಾಗಿ ಹೆಚ್ಚಾಗಿದೆ.ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಸದ್ಯಕ್ಕಿಲ್ಲ. ಎಲ್ಲ ಗ್ರಾಮಗಳಿಗೂ ಕುಡಿಯುವ ನೀರನ್ನು ಪೂರೈಸುವ “ಬಹುಗ್ರಾಮ ಕುಡಿಯುವ ನೀರು” ಯೋಜನೆಗೆ ಯಾವುದೇ ಆತಂಕ ಇಲ್ಲ. ಆದರೆ, ಹಲವು ಸದಸ್ಯರ ಭಿತ್ತನೆಯಾಗಿರುವ ಬೆಳೆಗೆ ನೀರು ಹರಿಸುವಂತೆ ಹಲವು ಸದಸ್ಯರು ಮನವಿ ಮಾಡುತ್ತಿದ್ದಾರೆ. ಸದ್ಯಕ್ಕೆ ನಾಲೆಗಳಿಗೆ ನೀರು ಹರಿಸುವಷ್ಟು ನೀರಿನ ಶೇಖರಣೆ ಜಲಾಶಯಗಳಲ್ಲಿ ಇಲ್ಲ ಎಂದು ಸಚಿವ ಕೃಷ್ಣಬೈರೇಗೌಡ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಬರಗಾಲ ಘೋಷಣೆ
ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ರೈತ ಸಂಕಷ್ಟಕ್ಕೆ ಈಡಾಗಿದ್ದಾನೆ. ಹಲವೆಡೆ ಬೆಲೆ ನಷ್ಟವಾಗಿದೆ. ಹೀಗಾಗಿ ಬರಗಾಲ ಘೋಷಿಸಿ ರೈತರಿಗೆ ನಷ್ಟ ಪರಿಹಾರವನ್ನು ತುಂಬಿಕೊಡಬೇಕು ಎಂದು ವಿಧಾನಸಭೆಯಲ್ಲಿ ಹಲವು ಶಾಸಕರು ಒತ್ತಾಯಿಸಿದರು.ಈ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಕೃಷ್ಣಬೈರೇಗೌಡ, “ರಾಜ್ಯದಲ್ಲಿ ಕೆಲವು ತಾಲೂಕುಗಳಲ್ಲಿ ಬರದ ಛಾಯೆ ಇದೆ. ಅಲ್ಲದೆ, ಬರ ಘೋಷಣೆಗೆ ಕೇಂದ್ರ ಸರ್ಕಾರದ ಕೆಲವು ಮಾನದಂಡಗಳಿವೆ. ಆಗಸ್ಟ್ ಮೊದಲ ವಾರದೊಳಗೆ ಉತ್ತಮ ಮಳೆಯಾಗದಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ, ಬರ ಘೋಷಣೆಯ ಬಗ್ಗೆ ಚಿಂತನೆ ನಡೆಸಲಾಗುವುದು” ಎಂದು ಅವರು ತಿಳಿಸಿದ್ದಾರೆ.