ಕರ್ನಾಟಕ ಮಾದರಿಯ ಗ್ಯಾರೆಂಟಿ ಯೋಜನೆಗಳನ್ನು ದೇಶಾದ್ಯಂತ ಜನಪ್ರಿಯಗೊಳಿಸಲು ಕಾಂಗ್ರೆಸ್ ಚಿಂತನೆ!
PGK NEWS:-.ಕಲಬುರಗಿ: 2024 ರ ಲೋಕಸಭಾ ಚುನಾವಣೆಗೆ ಕರ್ನಾಟಕ ಮಾದರಿಯ ಗ್ಯಾರೆಂಟಿ ಯೋಜನೆಗಳನ್ನು ರಾಷ್ಟ್ರ ಮಟ್ಟದಲ್ಲಿ ಪ್ರಚಾರ ಮಾಡಲು ಕಾಂಗ್ರೆಸ್ ಗಂಭೀರ ಚಿಂತನೆ ನಡೆಸಿದೆ.
ಕಲಬುರಗಿಯಲ್ಲಿ ಗೃಹ ಜ್ಯೋತಿ ಯೋಜನೆಗೆ ಅಧಿಕೃತ ಚಾಲನೆ ಕಾರ್ಯಕ್ರಮದಲ್ಲಿ ಈ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿಎಂ ಸಿದ್ದರಾಮಯ್ಯ ಸುಳಿವು ನೀಡಿದ್ದಾರೆ.
5 ಗ್ಯಾರೆಂಟಿಗಳನ್ನು ಘೋಷಿಸಿ ಅದನ್ನು ಜಾರಿ ಮಾಡಿರುವ ಕರ್ನಾಟಕ ಸರ್ಕಾರದತ್ತ ಇಡೀ ದೇಶವೇ ನೋಡುತ್ತಿದೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಖರ್ಗೆ ಹೇಳಿದ್ದಾರೆ.
ಗ್ಯಾರೆಂಟಿಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಹಲವು ರಾಜ್ಯಗಳು ಆಸಕ್ತಿ ತೋರಿವೆ ಎಂದು ಖರ್ಗೆ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಗ್ಯಾರೆಂಟಿ ಯೋಜನೆಗಳನ್ನು ಘೋಷಿಸಿದ ಬಳಿಕ ತಮ್ಮ ಪಕ್ಷ ಹಾಗೂ ಸರ್ಕಾರ ಹಲವಾರು ಅಡೆತಡೆಗಳನ್ನು ಎದುರಿಸಿತ್ತು. ಕಾಂಗ್ರೆಸ್ ನಿಂದ ಘೋಷಣೆಯಾದ ಗ್ಯಾರೆಂಟಿಗಳು ಜಾರಿ ಮಾಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಬಿಜೆಪಿ ಚುನಾವಣೆ ವೇಳೆ ಹೇಳಿತ್ತು. ಕೇವಲ ಚುನಾವಣೆ ಎದುರಿಸುವುದಕ್ಕಾಗಿಯಷ್ಟೇ ನಾವು ಗ್ಯಾರೆಂಟಿ ಘೋಷಣೆ ಮಾಡಿದ್ದೇವೆ ಎಂದು ಬಿಜೆಪಿ ಆರೋಪಿಸಿತ್ತು. ಆದರೆ ಸರ್ಕಾರ ರಚಿಸಿದ ಬೆನ್ನಲ್ಲೇ ನಾವು ಗ್ಯಾರೆಂಟಿ ಜಾರಿಗೆ ಆದೇಶ ಪ್ರಕಟಿಸಿದ್ದೆವು ಎಂದು ಹೇಳಿದ್ದಾರೆ.