PGK NEWS-ಕರ್ನಾಟಕದಲ್ಲಿ ಮಳೆ ಹಾನಿ ನಷ್ಟ, ಆ.3ರಿಂದ ಐದು ದಿನ ಜಿಲ್ಲಾಧಿಕಾರಿಗಳಿಂದ ವಿವರ ಸಂಗ್ರಹ: ಸಚಿವ ಕೃಷ್ಣಭೈರೇಗೌಡ ಸೂಚನೆ.

 


PGK NEWS:-ಕಲಬುರಗಿ ವಿಭಾಗ ಕಂದಾಯ ಸಚಿವ ಕೃಷ್ಣಭೈರೇಗೌಡ ಕಲಬುರಗಿ ವಿಭಾಗ ಮಟ್ಟದ ಜಿಲ್ಲಾಧಿಕಾರಿಗಳ ಸಭೆಯನ್ನು ನಡೆಸಿ ಮಳೆ ಹಾನಿ, ವಿಪತ್ತಿನಿಂದ ತೊಂದರೆಯಾದ ಜನರಿಗೆ ಕೂಡಲೇ ಪರಿಹಾರ, ನೆರವು ನೀಡುವಂತೆ ಸೂಚಿಸಿದರು. ವಿಳಂಬ ನೀತಿ ಅನುಸರಿಸಬಾರದು ಎಂದು ತಾಕೀತು ಮಾಡಿದರು. ಸಭೆಯಲ್ಲಿ ಅವರು ಹೇಳಿದ್ದೇನು ಇಲ್ಲಿದೆ ವಿವರ.

ಕಲಬುರಗಿ: ಕರ್ನಾಟಕದಲ್ಲಿ ಜೂನ್ ಮತ್ತು ಜುಲೈ ಮಾಹೆಯಲ್ಲಿ ಸುರಿದ ಮಳೆಯಿಂದಾದ ಬೆಳೆ‌ ಮತ್ತು ಮನೆ ಹಾನಿಗಳ ವಿವರ ಸಂಗ್ರಹ ಅಗಸ್ಟ್ 3 ರಿಂದ‌ ಆರಂಭವಾಗಲಿದೆ.ಈಗಾಗಲೇ ಕರ್ನಾಟಕದ ಹಲವು ಕಡೆ ಮಳೆಯಿಂದ ಸಾಕಷ್ಟು ಹಾನಿಯಾಗಿದ್ದು ಅಧಿಕಾರಿಗಳು ವಿವರ ಸಂಗ್ರಹಿಸಿದ್ದಾರೆ. ನಿಖರ ಮಾಹಿತಿ ಸಂಗ್ರಹ ಗುರುವಾರದಿಂದ ಐದು ದಿನ ನಡೆಯಲಿದೆ. ಎಲ್ಲಾ ಜಿಲ್ಲಾಧಿಕಾರಿಗಳು ಆ. 7ರ ವರೆಗೆ ಮಳೆ ಹಾನಿ ವಿವರ ಸಂಗ್ರಹ ಪ್ರಕ್ರಿಯೆ ಮುಗಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಸೂಚಿಸಿದ್ದಾರೆ.

ಸೋಮವಾರ ಇಲ್ಲಿನ ಡಿ.ಸಿ. ಕಚೇರಿ ಸಭಾಂಗಣದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರೊಂದಿಗೆ ಕಂದಾಯ ಇಲಾಖೆಯ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ 

  ಮಳೆ ಗಾಳಿಗೆ ಮುನ್ನೆಚ್ಚರಿಕೆ ವಹಿಸಿ.


ಕಳೆದ ಜೂನ್ ಮತ್ತು ಜುಲೈನಲ್ಲಿ ಸುರಿದ ಮಳೆಯಿಂದಾಗಿ ವಿಭಾಗದಲ್ಲಿ ನೆರೆ ಹಾವಳಿಯಿಂದ ಮಾನವ ಮತ್ತು ಜಾನುವಾರುಗಳ ಜೀವ ಹಾನಿ‌, ಕೃಷಿ ಬಿತ್ತನೆ ಕುರಿತು ಆಯಾ‌ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಮಾನವ ಸಾವು ಪ್ರಕರಣದಲ್ಲಿ ಜನರಿಗೆ ಪರಿಹಾರ ನೀಡುವುದು ಮುಖ್ಯವಲ್ಲ. ಅವರನ್ನು ಬದುಕಿಸುವುದು ನಮ್ಮ ಆದ್ಯತೆ ಆಗಬೇಕು. ಅದಕ್ಕಾಗಿ ಮಳೆಗಾಲ ಸಂದರ್ಭದಲ್ಲಿ ವಹಿಸಬೇಕಾದ ‌ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಆಡಳಿತ ವರ್ಗ ಹೆಚ್ಚಿನ ಗಮನ ನೀಡಬೇಕಿದೆ ಎಂದರು.

ಕಷ್ಟದಲ್ಲಿದ್ದವರಿಗೆ ಪರಿಹಾರ ವಿತರಣೆ ಮಾಡುವುದು ಒಳ್ಳೆಯದ್ದೆ. ನೊಂದವರಿಗೆ ಸರ್ಕಾರ ಸಹಾಯ ಹಸ್ತ ಚಾಚುವುದು ಉತ್ತಮ. ಆದರೆ ಇದನ್ನು ದುರಪಯೋಗವಾಗಬಾರದು ಎಂಬುದು ನಮ್ಮ‌ ಕಳಕಳಿಯಾಗಿದೆ. ವಿಪತ್ತು ನಿರ್ವಹಣೆ ಹೆಸರಿನಲ್ಲಿ ಹಣ ದುರಪಯೋಗವಾದಲ್ಲಿ ಅದು ಕೆಟ್ಟ ಆಡಳಿತಕ್ಕೆ ಅವಕಾಶ ಮಾಡಿಕೊಡುತ್ತದೆ. ಪರಿಹಾರ ವಿತರಣೆಯ ಕೆಲವೊಂದು ಪ್ರಕರಣದಲ್ಲಿ ಸ್ಯಾಟಲೈಟ್ ಫೋಟೋ ಗಳನ್ನು ಪರೀಕ್ಷಿಸಿ ಜಿಲ್ಲಾಧಿಕಾರಿಗಳು ಪರಿಹಾರ ನೀಡಬೇಕು ಎಂದು ಕಂದಾಯ ಸಚಿವ‌ ಕೃಷ್ಣ ಬೈರೇಗೌಡ ತಿಳಿಸಿದರು.

ಹೊಸ ಸರ್ಕಾರ ಬಂದಿದೆ 

ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದೆ. ಅಡಳಿತದಲ್ಲಿ ಬದಲಾವಣೆ ತರಬೇಕು. ಸರಳೀಕರಣಕ್ಕೆ ಆದ್ಯತೆ ಕೊಡಿ. ಕಂದಾಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿ-ಸಿಬ್ಬಂದಿಗಳು ತಂಡದ ರೂಪದಲ್ಲಿ ಕಾರ್ಯನಿರ್ವಹಿಸಬೇಕು ಎಂದ‌ ಸಚಿವರು, ಕಂದಾಯ ಸಚಿವನಾದ ಮೇಲೆ ಈಗಾಗಲೆ ಬೆಳಗಾವಿ‌ ವಿಭಾಗದ ಪ್ರಗತಿ ಪರಿಶೀಲನೆ ನಡೆಸಿದ್ದು, ಇಂದು‌ ಇಲ್ಲಿ ನಡೆಸಲಾಗುತ್ತಿದೆ. ಮುಂದೆ ಜಿಲ್ಲಾವಾರು ಸಹ ಪ್ರಗತಿ ಪರಿಶೀಲನೆ ಮಾಡುವುದಾಗಿ ಹೇಳಿದರು.

ಕಂದಾಯ ಇಲಾಖೆಯು ಸರ್ಕಾರದ‌ ಮಾತೃ ಇಲಾಖೆಯಾಗಿದ್ದು, ಇಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳು ಸಹ ಮಾತೃ ಹೃದಯಿಗಳಾಗಿರಬೇಕು. ಸರ್ಕಾರದ ಉದ್ದೇಶ ಮತ್ತು ಧ್ಯೆಯೋದ್ದೇಶಗಳನ್ನು ಅರಿತು ಜನರಿಗೆ ಉತ್ತಮ ಆಡಳಿತ ನೀಡಬೇಕು ಎಂದು ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಭಾಗದ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಜನರಿಗೆ ನೀವೇ ನೆಮ್ಮದಿ ಕೊಡಿ 

ಭೂಮಿ ತಂತ್ರಾಂಶದಲ್ಲಿ ಪಹಣಿ ಪತ್ರಿಕೆ ತಿದ್ದುಪಡಿ, ವರ್ಗಾವಣೆ ವಿಷಯ ಕುರಿತು ಚರ್ಚೆಯಲ್ಲಿ ಕಲಬುರಗಿ ವಿಭಾಗದಲ್ಲಿ 6 ತಿಂಗಳಿನಿಂದ 5 ವರ್ಷದೊಳಗಿನ 5,266 ಪ್ರಕರಣಗಳು ಬಾಕಿ ಇರುವುದನ್ನು ಗಮನಿಸಿದ ಸಚಿವ ಕೃಷ್ಣ‌ ಬೈರೇಗೌಡ ಅವರು, ಇಂತಹ ಪ್ರಕರಣಗಳಿಂದಲೆ ಜನರು ಬೇಸತ್ತು ಹೋಗಿ ನನ್ನನ್ನು ಭೇಟಿ ಮಾಡಲು ವಿಧಾನಸೌಧಕ್ಕೆ ಬರುತ್ತಿದ್ದಾರೆ ಎಂದು‌ ಬೇಸರ ವ್ಯಕ್ತಪಡಿಸಿ ಮುಟೇಷನ್ ಡಿಸ್ಪೂಟ್ ಪ್ರಕರಣಗಳನ್ನು 4-5 ವಿಚಾರಣೆಗಳಲ್ಲಿ‌ ಮುಗಿಸಿ ಜನರಿಗೆ ನೆಮ್ಮದಿ ಕಲ್ಪಿಸಿ ಎಂದು ತಹಶೀಲ್ದಾರರಿಗೆ ಖಡಕ್ ಸೂಚನೆ ನೀಡಿದರು.

ಸಿಡಿಲು, ಮಿಂಚಿಗೆ 80 ಜನ ಸಾವು



ಕಲಬುರಗಿ ವಿಭಾಗ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಕಳೆದ 3 ತಿಂಗಳಿನಲ್ಲಿ 24 ಸೇರಿದಂತೆ ರಾಜ್ಯದಲ್ಲಿ ಈ ವರ್ಷ ಸಿಡಿಲು, ಮಿಂಚಿನಿಂದ 80 ಜನ ಸಾವನಪ್ಪಿದ್ದಾರೆ. ಸಿಡಿಲು ಕುರಿತು ಹೆಚ್ಚಿನ ಅರಿವು ನೀಡಿದಲ್ಲಿ ಈ ಸಾವು ತಪ್ಪಿಸಬಹುದಿತ್ತು. ಜಿಲ್ಲಾಧಿಕಾರಿಗಳು ಇದರ ಬಗ್ಗೆ ಹೆಚ್ಚಿನ ಗಮನ ಕೊಡಿ. ಮಳೆಗಾಲ‌ ಸಂದರ್ಭದಲ್ಲಿ ಸಿಡಿಲಿನಿಂದ ಸಾವನಪ್ಪುವರ ಸಂಖ್ಯೆ ಇತ್ತೀಚಿನ‌ ವರ್ಷದಲ್ಲಿ ಹೆಚ್ಚುತ್ತಿದೆ. ಅರಿವಿನ ಕೊರತೆಯೇ ಇದಕ್ಕೆ ಮುಖ್ಯ ಕಾರಣ. ಇದನ್ನು ನಿಯಂತ್ರಿಸಬೇಕಿದೆ. ನೊಂದ ಕುಟುಂಬಗಳಿಗೆ ಸರ್ಕಾರ 24 ಗಂಟೆಯಲ್ಲಿ ಪರಿಹಾರ ನೀಡಬಹುದು, ಆದರೆ ಹೋದ ಜೀವ ಮತ್ತೆ ಮರುಕಳಿಸಲು ಸಾಧ್ಯವಿಲ್ಲ ಎಂದರು.

ವಿಪತ್ತು ನಿರ್ವಹಣೆ ಕೆಲಸ ವಿಳಂಬ ಸಲ್ಲ


ಕಲಬುರಗಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ 2020-21ನೇ ಸಾಲಿನ ನೆರೆ ಹಾವಳಿಯ ಕಾಮಗಾರಿಗಳು ಇನ್ನು ಪ್ರಗತಿಯಲ್ಲಿರುವುದಕ್ಕೆ ಸಚಿವ ಕೃಷ್ಣ ಬೈರೇಗೌಡ ಅವರು ಅಸಮಾಧಾನ ವ್ಯಕ್ತಪಡಿಸಿ, ರಸ್ತೆ, ಶಾಲೆ, ಸೇತುವೆ ದುರಸ್ತಿಗೆ ವಿಪತದರು ನಿರ್ವಹಣೆಯಲ್ಲಿ 1-2 ಲಕ್ಷ ರೂ. ಅನುದಾನ ನೀಡಲಾಗುತ್ತದೆ. ಮಳೆಗಾಲ ಹೋಗಿ ಮತ್ತೆ ಮಳೆಗಾಲ ಬಂದರೂ ಕೆಲಸ ಇನ್ನು ಮುಗಿಯಲ್ಲ ಎಂದರೆ ಏನರ್ಥ. ನೀಡಲಾದ ಅನುದಾನ ಉದ್ದೇಶ ಈಡೇರುತ್ತಾ ಎಂದು ಡಿ.ಸಿ.ಗಳನ್ನು ಪ್ರಶ್ನಿಸಿದರು.

ಕಲಬುರಗಿ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯಲ್ಲಿ 2020-21ರಲ್ಲಿ 640 ಕೆಲಸ ಕೈಗೆತ್ತಿಕೊಂಡಿದ್ದು, ಇದರಲ್ಲಿ 514 ಮುಕ್ತಾಯವಾಗಿದ್ದು, 132 ಕಾಮಗಾರಿಗಳು ಪ್ರಗತಿಯಲ್ಲಿವೆ. ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಮುಂದಿನ 15 ದಿನದಲ್ಲಿ‌ ಮುಗಿಸುವುದಾಗಿ ಸಚಿವರಿಗೆ ತಿಳಿಸಿದರು.

ಕಠಾರಿಯಾ ಸೂಚನೆ

ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ಮಾತನಾಡಿ, 3 ತಿಂಗಳ ಒಳಗೆ ವಿಪತ್ತು ಪ್ರಕರಣಗಳನ್ನು ವಿಲೇವಾರಿ ಮಾಡಬೇಕು. ಜಿಲ್ಲಾಧಿಕಾರಿಗಳು ಮಾಸಿಕ‌ ಪ್ರಗತಿ ಪರಿಶೀಲನೆ ಮಾಡಬೇಕು. ಡಿ.ಸಿ.ಗಳಿಗೆ ಕಂದಾಯ ಇಲಾಖೆ ಹೊರತಾಗಿ ಇತರೆ ಇಲಾಖೆಯ ಕೆಲಸಗಳು ಇವೆ. ಆದರೆ ಮಾತೃ ಇಲಾಖೆಯ ಮೂಲ‌ ಕೆಲಸ ಮಾತ್ರ ಮರೆಯಬಾರದು ಎಂದರು.

ಪಾವತಿ ಹತ್ತು ದಿನದಲ್ಲಿ ಆಗಲಿ 

ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ)‌ ವಿ. ರಶ್ಮಿ‌ ಮಹೇಶ್ ಮಾತನಾಡಿ, ಮುಂಗಾರು ಪೂರ್ವ ವಿಪತ್ತು ನಿರ್ವಹಣೆಯ ಎಲ್ಲಾ ಪಾವತಿಗಳನ್ನು ಮುಂದಿನ 10 ದಿನದಲ್ಲಿ ಪೂರ್ಣಗೊಳಿಸಬೇಕು. ಭಾರಿ ಮಳೆಯ ರೆಡ್ ಅಲರ್ಟ್, ಆರೆಂಜ್ ಅಲರ್ಟ್ ಮುನ್ಸೂಚನೆ ಬಂದಾಗ ಡಿ.ಸಿ.ಗಳು ಸಾಮಾಜಿಕ‌ ಜಾಲತಾಣ ಮೂಲಕ ಹೆಚ್ಚಿನ ಪ್ರಚಾರ ನೀಡುವುದರಿಂದ ಜನ‌ ಮತ್ತು ಜಾನುವಾರುಗಳಿಗೆ ಆಗುವ ಅನಾಹುತಗಳನ್ನು ತಪ್ಪಿಸಬಹುದಾಗಿದೆ ಎಂದರು.

ಕಂದಾಯ ಇಲಾಖೆಯ ಆಯುಕ್ತ ಪಿ. ಸುನೀಲಕುಮಾರ, ಭೂಮಾಪನ‌ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಆಯುಕ್ತ ಜೆ.ಮಂಜುನಾಥ, ನೋಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತೆ ಡಾ.ಬಿ.ಆರ್.ಮಮತಾ, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಕಲಬುರಗಿ ಡಿ.ಸಿ ಬಿ.ಫೌಜಿಯಾ ತರನ್ನುಮ್, ಯಾದಗಿರಿ ಡಿ.ಸಿ. ಡಾ.ಬಿ.ಸುಶೀಲಾ, ಬೀದರ ಡಿ.ಸಿ. ಗೋವಿಂದರೆಡ್ಡಿ, ರಾಯಚೂರು ಡಿ.ಸಿ. ಎಲ್‌.ಚಂದ್ರಶೇಖರ ನಾಯಕ್, ಬಳ್ಳಾರಿ ಡಿ.ಸಿ. ಪ್ರಶಾಂತ ಕುಮಾರ ಮಿಶ್ರಾ, ವಿಜಯ ನಗರ ಡಿ.ಸಿ ಎಂ.ಎಸ್.ದಿವಾಕರ, ಕೊಪ್ಪಳ ಡಿ.ಸಿ ಸುಂದರೇಶ ಬಾಬು ಎಂ. ಸೇರಿದಂತೆ ವಿಭಾಗದ ಅಪರ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಜಿಲ್ಲಾ ನೋಂದಣಾಧಿಕಾರಿಗಳು, ತಹಶೀಲ್ದಾರರು, ಭೂದಾಖಲೆಗಳ ಇಲಾಖೆಯ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು ಭಾಗವಹಿಸಿದ್ದರು. 

ವರದಿ :-ಶಂಕರಗೌಡ ಪಾಟೀಲ್ ಗುಲ್ಬರ್ಗ.


PGK

Post a Comment

Previous Post Next Post