PGK NEWS :_ಮಣಿಪುರ ಹಿಂಸಾಚಾರ | ತನಿಖೆಗೆ 53 ಅಧಿಕಾರಿಗಳ ಸಿಬಿಐ ತಂಡ ರಚನೆ.

PGK NEWS;-ಮಣಿಪುರ ಹಿಂಸಾಚಾರ ಪ್ರಕರಣಗಳ ತನಿಖೆಗಾಗಿ ಸಿಬಿಐ 53 ಮಂದಿ ಅಧಿಕಾರಗಳ ತಂಡ ರಚನೆ ಮಾಡಿದೆ. ತಂಡದಲ್ಲಿ 29 ಮಹಿಳಾ ಆಧಿಕಾರಿಗಳು ಇದ್ದಾರೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಸಂಖ್ಯೆಯ ಮಹಿಳಾ ಅಧಿಕಾರಿಗಳನ್ನು ಏಕಕಾಲದಲ್ಲಿ ಪ್ರಕರಣದ ತನಿಖೆಗೆ ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.

ಜಂಟಿ ನಿರ್ದೇಶಕ ಘನಶ್ಯಾಮ್ ಉಪಾಧ್ಯಾಯ ಅವರ ಮೇಲ್ವಿಚಾರಣೆಯಲ್ಲಿ ತಂಡವನ್ನು ರಚಿಸಲಾಗಿದೆ. ಮೂವರು ಡಿಐಜಿಗಳಾದ ಲವ್ಲಿ ಕಟಿಯಾರ್, ನಿರ್ಮಲಾ ದೇವಿ ಮತ್ತು ಮೋಹಿತ್ ಗುಪ್ತಾ ಮತ್ತು ಪೊಲೀಸ್ ವರಿಷ್ಠಾಧಿಕಾರಿ ರಾಜ್‌ವೀರ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಸಿಬಿಐ ತನಿಖೆ ನಡೆಸುತ್ತಿರುವ ಈ ಹಲವು ಪ್ರಕರಣಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ತನಿಖೆಗೆ ಒಳಪಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಆ ಪ್ರಕರಣಗಳನ್ನು ಉಪ ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಯ ಅಧಿಕಾರಿಗಳು ತನಿಖೆ ಮಾಡಲಿದ್ದಾರೆ.

ಇಬ್ಬರು ಮಹಿಳಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಆರು ಮಹಿಳಾ ಉಪ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿ 53 ಸದಸ್ಯರ ತಂಡವನ್ನು ಪ್ರಕರಣದ ತನಿಖೆಗೆ ನಿಯೋಜಿಸಲಾಗಿದೆ.

ಇನ್ನು 16 ಇನ್ಸ್‌ಪೆಕ್ಟರ್‌ಗಳು ಮತ್ತು 10 ಸಬ್‌ ಇನ್‌ಸ್ಪೆಕ್ಟರ್‌ಗಳು ಸಹ ತಂಡದ ಭಾಗವಾಗಲಿದ್ದಾರೆ.ಸಾಮಾನ್ಯವಾಗಿ ಇಷ್ಟು ದೊಡ್ಡ ಪ್ರಕರಣಗಳನ್ನು ಸಿಬಿಐಗೆ ಹಸ್ತಾಂತರಿಸಿದಾಗ, ಅಧಿಕಾರಿಗಳನ್ನು ನಿಯೋಜಿಸಲು ಸಿಬಿಐ ಸಂಸ್ಥೆಯು ಇತರ ರಾಜ್ಯದ ಮೇಲೆ ಕೂಡ ಅವಲಂಬಿತವಾಗಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಣಿಪುರದ ಪ್ರಕರಣದಲ್ಲಿ, ತನಿಖೆಯಲ್ಲಿ ಪಕ್ಷಪಾತದ ಆರೋಪಗಳನ್ನು ತಪ್ಪಿಸಲು ಸ್ಥಳೀಯ ಅಧಿಕಾರಿಗಳ ಸಹಭಾಗಿತ್ವ ಕಡಿಮೆ ಮಾಡಲು ಪ್ರಯತ್ನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಬಿಐ ಈಗಾಗಲೇ ಎಂಟು ಪ್ರಕರಣಗಳನ್ನು ದಾಖಲಿಸಿದೆ, ಮೇ 4 ರಂದು ಮಹಿಳೆಯ ಬೆತ್ತಲೆ ಮಾಡಿದ ಪ್ರಕರಣ ಕೂಡ ಇದರಲ್ಲಿ ಸೇರಿದೆ.ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದ ಇನ್ನೂ ಒಂಬತ್ತು ಪ್ರಕರಣಗಳನ್ನು ತನಿಖೆ ಮಾಡಲು ಸಿಬಿಐ ಸಿದ್ಧವಾಗಿದೆ. ಈ ಮೂಲಕ ಒಟ್ಟು 17 ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PGK

Post a Comment

Previous Post Next Post