PGK NEWS:ಹುಬ್ಬಳ್ಳಿ, ಆಗಸ್ಟ್ 1: ಸ್ಟಾರ್ ಏರ್ಲೈನ್ಸ್ ಮಾಲೀಕ ಸಂಜಯ್ ಘೋಡಾವತ್ ಅವರಿಗೆ ಬಹುಕೋಟಿ ವಂಚನೆ ಮಾಡಿರುವ ಪ್ರಕರಣದ ಹಿನ್ನೆಲೆಯಲ್ಲಿ ವಂಚನೆ ಪ್ರಕರಣ ಸಂಬಂಧ ಹುಬ್ಬಳ್ಳಿ ಮೂಲದ ಇಬ್ಬರು ಉದ್ಯಮಿಗಳ 40.22 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯವು (E.D.) ಜಪ್ತಿ ಮಾಡಿದೆ.
ರಿಯಲ್ ಎಸ್ಟೇಟ್ ಉದ್ಯಮದ ಹೆಸರಿನಲ್ಲಿ ಉದ್ಯಮಿಗಳಾದ ಶೀತಲ್ ಕುಮಾರ್, ಜಿನೇಂದ್ರ ಮಗ್ದುಮ್ ಎನ್ನುವವರು ಸ್ಟಾರ್ ಏರ್ಲೈನ್ ಮಾಲೀಕ ಸಂಜಯ್ ಘೋಡಾವತ್ ಅವರಿಗೆ ವಂಚಿಸಿದ್ದ ಪ್ರಕರಣ ಇದಾಗಿದೆ. ಶೀತಲ್ ಕುಮಾರ್ ಮತ್ತು ಜಿನೇಂದ್ರ ಮಗ್ದುಮ್ ಎಂಬವರು ರಿಯಲ್ ಎಸ್ಟೇಟ್ ಉದ್ಯಮದ ಹೆಸರಿನಲ್ಲಿ ಬರೋಬ್ಬರಿ 525 ಕೋಟಿ ರೂಪಾಯಿ ಹಣ ತಮ್ಮ ವೈಯಕ್ತಿಕ ಖಾತೆಗಳು ಹಾಗೂ ಇತರರ ಖಾತೆಗೆ ವರ್ಗಾಯಿಸಿಕೊಂಡಿದ್ದರು ಎನ್ನಲಾಗಿದೆ.
ಈ ಬಗ್ಗೆ ಸಂಜಯ್ ಘೋಡಾವತ್ ಅವರು ಹುಬ್ಬಳ್ಳಿಯ ಅಶೋಕನಗರ ಠಾಣೆ ಮೆಟ್ಟಿಲೇರಿದ್ದರು. ಸಂಜಯ್ ದೂರಿನ ಅನ್ವಯ ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದರು. ಬಹುಕೋಟಿ ವಂಚನೆ ಪ್ರಕರಣವಾಗಿರುವ ಕಾರಣ ಪ್ರಕರಣವನ್ನು ಅಶೋಕ ನಗರ ಠಾಣಾ ಪೊಲೀಸರು ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಿದ್ದರು
ಇನ್ನು ಪ್ರಕರಣದ ದೂರು ದಾಖಲಾಗುತ್ತಿದ್ದಂತೆಯೇ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ತನಿಖೆ ನಡೆಸುತ್ತಿರುವ ಅಧಿಕಾರಿಗಳು, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಶೀತಲ್ ಕುಮಾರ್, ಜಿನೇಂದ್ರ ಅವರಿಗೆ ಸೇರಿರುವ ಮನೆ, ಅಪಾರ್ಟ್ಮೆಂಟ್, ವಿಂಡ್ಮಿಲ್ ಸೇರಿದಂತೆ 12 ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ.
ವರದಿ:- ಶಂಕರ್ ಪಾಟೀಲ್.