PGK NEWS:-ಶಿವಮೊಗ್ಗ: ʼಹಿಂಸೆಯು ಯಾವುದೇ ಧರ್ಮದ ಭಾಗವಲ್ಲ. ಧರ್ಮದ ಹೆಸರಲ್ಲಿ ಹಿಂಸೆಯನ್ನು ವಿರೋಧಿಸಿದ ಮಾತ್ರಕ್ಕೆ ನಾನು ಹಿಂದೂ ವಿರೋಧಿ ಎಂದು ಬಿಂಬಿಸಲಾಗುತ್ತದೆಯೇ ಹೊರತು ನನಗೂ ಧರ್ಮ ಬೇಕು, ಅದು ನನ್ನ ಆಯ್ಕೆ, ಪ್ರಶ್ನೆಗಳನ್ನು ಎತ್ತಿದ ತಕ್ಷಣ ನನ್ನನ್ನು ಹಿಂದೂ ವಿರೋಧಿ ಮಾಡುವುದು ಯಾಕೆ?ʼ ಎಂದು ಬಹುಭಾಷ ನಟ,ಚಿಂತಕ ಪ್ರಕಾಶ್ ರಾಜ್ ಪ್ರಶ್ನೆ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಮಂಗಳವಾರ ಮಾಧ್ಯಮ ಸಂವಾದದಲ್ಲಿ ಮಾತನಾಡುತ್ತಿದ್ದ ಅವರು, 'ದೇಶದಲ್ಲಿ ಧರ್ಮದ ಕುರಿತು ಮಾತನಾಡುವುದು ರಾಜಕಾರಣಿಗಳ ಕೆಲಸವಲ್ಲ.ಅವರು ಆಡಳಿತ ನಡೆಸಬೇಕು ಎಂದ ಅವರು, ಸಾಮಾನ್ಯ ಜನರಿಗೆ ಧರ್ಮದ ಕುರಿತ ಯಾವ ಭಿನ್ನಾಭಿಪ್ರಾಯಗಳೂ ಇಲ್ಲ. ಇದನ್ನು ಮಾಡುವವರು ರಾಜಕಾರಣಿಗಳು' ಎಂದು ದೂರಿದರು.
ʼʼದೇಹಕ್ಕಾದ ಗಾಯಗಳು ನಾವು ಸುಮ್ಮನಿದ್ದರೂ ಮಾಯುತ್ತವೆ. ಆದರೆ ದೇಶಕ್ಕಾದ ಗಾಯಗಳು ಸುಮ್ಮನಿದ್ದರೆ ಹೆಚ್ಚಾಗುತ್ತವೆ. ಈ ಕಾರಣಕ್ಕಾಗಿಯೇ ಪ್ರತಿಯೊಬ್ಬರು ಮಾತಾಡಬೇಕು, ಧರ್ಮದ ಹೆಸರಿನಲ್ಲಿ ನಡೆಯುವ ಎಲ್ಲಾ ಹಿಂಸೆಗಳನ್ನು ಪ್ರತಿಯೊಬ್ಬರು ಪ್ರಶ್ನಿಸಬೇಕು, ಇದು ಕೇವಲ ನನ್ನೊಬ್ಬನ ಕೆಲಸವೆಂದು ಭಾವಿಸಬಾರದು, ಕಲಾವಿದ, ಪತ್ರಕರ್ತ, ಸಾಹಿತಿ, ಉಪನ್ಯಾಸಕ ಹೀಗೆ ಎಲ್ಲಾ ವಲಯದ ಜನರೂ ಮಾತಾಡಬೇಕುʼʼ ಎಂದರು.
ʼʼಇತ್ತೀಚಿಗೆ ಬಸ್ಸಿನಲ್ಲಿ ನಿರ್ವಾಹಕರೊಬ್ಬರು ಟೋಪಿ ಧರಿಸಿದ್ದನ್ನು ಮಹಿಳೆಯೊಬ್ಬಳು ಪ್ರಶ್ನಿಸುತ್ತಿದ್ದರೆ ಜನ ಅದನ್ನು ನೋಡಿಕೊಂಡು ಸುಮ್ಮನಿದ್ದಾರೆ. ಇದೇ ತಪ್ಪು, ಪ್ರತಿಯೊಬ್ಬರಿಗೂ ಅವರವರ ಧರ್ಮದ ಆಚರಣೆಗೆ ಅವಕಾಶವಿದೆ. ಅದನ್ನು ಗೌರವಿಸಬೇಕೆ ವಿನಃ ಅದನ್ನು ವಿರೋಧಿಸುವುದು ಸರಿಯಲ್ಲʼʼ ಎಂದು ಆಕ್ಷೇಪಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಪ್ರಗತಿಪರ ಹೋರಾಟಗಾರ ಕೆ.ಎಲ್ ಆಶೋಕ್ ,ವಿವೇಕ ಸಂಘಟನೆಯ ಅಧ್ಯಕ್ಷ ಕುಮಾರ್,ಅನನ್ಯ ಶಿವು ಸೇರಿದಂತೆ ಹಲವರಿದ್ದರು.