PGK NEWS. ಪಶ್ಚಿಮ ಘಟ್ಟ ವಾಯ್ಸ್ಮ ಚಿಕ್ಕಮಗಳೂರು, ಆಗಸ್ಟ್, 22: ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ನಲ್ಲಿ ಪ್ರವಾಸಿಗರು ಮತ್ತೆ ಪುಂಡಾಟ ಮುಂದುವರೆಸಿದ್ದಾರೆ. ಎಚ್ಚರಿಕೆಯ ನಾಮಫಲಕವಿದ್ದರೂ ಅಪಾಯದ ಸ್ಥಳದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವ ಮೂಲಕ ಪ್ರವಾಸಿಗರು ಪುಂಡಾಟ ಮೆರೆಯುತ್ತಿದ್ದಾರೆ.
ಚಾರ್ಮಾಡಿ ಘಾಟ್‌ನಲ್ಲಿ ಪ್ರವಾಸಿಗರ ಪುಂಡಾಟ
ಈ ಹಿಂದೆ ಚಾರ್ಮಾಡಿಘಾಟಿ ಪ್ರದೇಶದಲ್ಲಿನ ಚಿಕ್ಕಮಗಳೂರು ಮಂಗಳೂರು ರಸ್ತೆಯಲ್ಲಿ ಪ್ರವಾಸಿಗರು ವಾಹನಗಳನ್ನು ನಿಲ್ಲಿಸಿಕೊಂಡು ಅಸಭ್ಯವಾಗಿ ಡ್ಯಾನ್ಸ್ ಮಾಡುವುದು, ಇತರೆ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ದೂರುಗಳು ಕೇಳಿಬಂದಿದ್ದವು. ಬಳಿಕ ಇಲ್ಲಿಗೆ ಪೊಲೀಸ್ ಗಸ್ತು ಹೆಚ್ಚಿಸಿ ಪ್ರವಾಸಿಗರ ಅಸಭ್ಯ ವರ್ತನೆಗೆ ಕಡಿವಾಣ ಹಾಕಲಾಗಿತ್ತು.
ಇದೀಗ ಮತ್ತೆ ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಲ್ಲೊಂದಾಗಿರುವ ದೇವರ ಮನೆಗೆ ಸಾಗುವ ಮಾರ್ಗದಲ್ಲಿ ಪ್ರವಾಸಿಗರು ಅಸಭ್ಯ ವರ್ತನೆ ತೋರುತ್ತಿದ್ದು, ಇದಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕೆಂದು ಇಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ.
ಚಾರ್ಮಾಡಿ ಘಾಟ್‌ನಲ್ಲಿ ಪ್ರವಾಸಿಗರ ಪುಂಡಾಟ ಇನ್ನು ಇತ್ತೀಚೆಗಷ್ಟೇ ಭಾರೀ ಮಳೆ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಹುತೇಕ ನದಿ, ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಅಲ್ಲದೆ ಕೆಲವೆಡೆ ಬೆಟ್ಟ, ಗುಡ್ಡಗಳು ಕೂಡ ಕುಸಿದಿವೆ. ಆದ್ದರಿಂದ ಮುಂಜಾಗ್ರತೆಗಾಗಿ ಯಾವುದೇ ಅನಾಹುತಗಳು ಸಂಭವಿಸಬಾರದು ಅನ್ನುವ ನಿಟ್ಟಿನಲ್ಲಿ ಮಳೆ ಕಡಿಮೆಯಾಗುವವರೆಗೂ ಜಿಲ್ಲೆ ಪ್ರವಾಸ ನಿಲ್ಲಿಸಿ ಎಂದು ಚಿಕ್ಕಮಗಳೂರು ಎಸ್‌ಪಿ ಪ್ರವಾಸಿಗರಲ್ಲಿ ಮನವಿ ಮಾಡಿದ್ದರು. ಆದರೂ ಕೂಡ ಇಂದು ಚಾರ್ಮಾಡಿ ಘಾಟ್‌ನಲ್ಲಿ ಪ್ರವಾಸಿಗರು ಪುಂಡಾಟ ಮೆರೆದಿದ್ದರು.
ಪ್ರವಾಸಿಗರು ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಡೇಂಜರ್ ಬಂಡೆ ಮೇಲೆ ಹತ್ತಿ ಸೆಲ್ಪೀ ಕ್ಲಿಕ್ಕಿಸಿಕೊಳ್ಳುವ ಮೂಲಕ ಹುಚ್ಚಾಟ ಮೆರೆದಿದ್ದರು. ಇಲ್ಲಿಂದ ಸ್ವಲ್ಪ ಜಾರಿದರೂ ದೊಡ್ಡ ಮಟ್ಟದ ಅಪಾಯ ಸಂಭವಿಸುವುದಂತೂ ಗ್ಯಾರಂಟಿ. ಈಗಾಗಲೇ ರೀಲ್ಸ್ ಮಾಡಲು ಹೋಗಿ ಯುವಕನೊಬ್ಬ ಜಲಪಾತದಲ್ಲಿ ಬಿದ್ದು ಪ್ರಾಣ ಕಳೆದುಕೊಂಡ ಘಟನೆಯೂ ನಡೆದಿತ್ತು.
ಜಿಲ್ಲಾಡಳಿತ, ಪೊಲೀಸ್ ಬೇಡ ಅಂತಾ ಮನವಿ ಮಾಡಿದ್ದರೂ ಕೂಡ ಪ್ರವಾಸಿಗರು ಮಾತ್ರ ಚಾರ್ಮಾಡಿ ಘಾಟಿಯ ಅಪಾಯದ ಸ್ಥಳದಲ್ಲಿರುವ ಕಲ್ಲು, ಬಂಡೆಗಳ ಮೇಲೆ ನಿಂತು ಫೋಟೋ ತೆಗೆಸಿಕೊಳ್ಳುವ ಕ್ರೇಜಿಗೆ ಬಿದ್ದಿದ್ದರು.
ವರದಿ:- ಚಿಕ್ಕಮಗಳೂರು ನಾಗ.