PGK NEWS(ಪಶ್ಚಿಮ ಘಟ್ಟ ವಾಯ್ಸ್)- ಶಿವಮೊಗ್ಗ= ಬಾಗಲಕೋಟೆ, ಆಗಸ್ಟ್ 28: ಲೋಕಸಭೆ ಚುನಾವಣೆ ಪೂರ್ವ ಸಮೀಕ್ಷೆ ಬಿಜೆಪಿಗೆ ರಾಜ್ಯದಲ್ಲಿ 23 ಸ್ಥಾನ ಬರುತ್ತೆ ಎಂದು ಹೇಳಿದೆ. ಅದಕ್ಕಾಗಿ ಕಾಂಗ್ರೆಸ್ ನವರು ನಿದ್ದೆ ಮಾಡುತ್ತಿಲ್ಲ. 23 ಸ್ಥಾನಗಳು ಬರ್ತಿದ್ದಂಗೆ ರಾಜ್ಯದಲ್ಲಿ ಈ ಸರ್ಕಾರ ಇರುತ್ತಾ? ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ ಅವರು, ಕರ್ನಾಟಕದಲ್ಲಿ ಪಕ್ಷಾಂತರ ಪ್ರವೀಣ ಯಾರು? ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದವರು ಯಾರು? ಇದೇ ಸಿದ್ದರಾಮಯ್ಯ, ಇವರಿಗೆ ಪಕ್ಷಾಂತರದ ಬಗ್ಗೆ ಮಾತನಾಡುವ ಅಧಿಕಾರವೇ ಇಲ್ಲ ಎಂದು ಕಿಡಿಕಾರಿದ ಅವರು, 17 ಜನ ಕಾಂಗ್ರೆಸ್‌ನ ಆಡಳಿತ ಸರಿಯಿಲ್ಲ, ಬಿಜೆಪಿಗೆ ಹೋಗ್ತೀವಿ ಅಂತಾ, ರಾಜೀನಾಮೆ ನೀಡಿ ಬಿಜೆಪಿಗೆ ಬಂದರು. ಸೂರ್ಯ, ಚಂದ್ರ ಇರೋದು ಎಷ್ಟು ಸತ್ಯವೋ, ಪಕ್ಷಾಂತರವಾದ 17 ಜನರನ್ನ ಮರಳಿ ಪಕ್ಷಕ್ಕೆ ಕರೆದುಕೊಳ್ಳಲ್ಲ ಎಂದು ವಿಧಾನಸೌಧದಲ್ಲಿ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಸೋಮಶೇಖರ್ ಅವರ ಮನೆಗೆ ಮೂವರು ಹೋಗಿದ್ದಾರೆ ಯಾಕೆ? ಎಂದು ಪ್ರಶ್ನಿಸಿದರು.
?ಇನ್ನೂ ಸರ್ಕಾರದ ವಿರುದ್ಧ ವಿಪಕ್ಷಗಳು ಗುತ್ತಿಗೆದಾರರನ್ನು ಎತ್ತಿಕಟ್ಟಿದ್ದಾರೆಂಬ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಡಿಸಿಎಂ ಆದ ದಿನದಂದಲೂ ಸಿಎಂ ರೀತಿ ಮಾತನಾಡುತ್ತಿದ್ದಾರೆ. ಎಲ್ಲಾ ಇಲಾಖೆಗಳು ನಿಮ್ಮ ಕೈಯಲ್ಲೇ ಇವೆ ತನಿಖೆ ಮಾಡಿಸಿ. ಯಾವುದಾದರೊಂದು ಇಲಾಖೆಗೆ ಒಬ್ಬ ಜಡ್ಜ್ ಅನ್ನು ಚೇರಮನ್ ಮಾಡಿ. 15 ದಿನ ಅವರಿಗೆ ಸಮಯ ಕೊಡಿ, ಒಂದು ಕೇಸ್ ಕೊಡಿ ನೋಡೋಣ ಎಂದು ನೇರವಾಗಿ ಸವಾಲು ಹಾಕಿದರು.
ಬ್ಲಾಕ್‌ಮೇಲ್ ತಂತ್ರದ ರಾಜಕಾರಣ ಮಾಡುತ್ತಿದ್ದು, ಇದನ್ನು ಬಿಜೆಪಿ ನಂಬಲ್ಲ. ಹಾಲಿ ಅಥವಾ ನಿವೃತ್ತ ಜಡ್ಜ್ ಅವರ ನೇತೃತ್ವದಲ್ಲಿ ಸಮಿತಿ ಆಗಿ, ತನಿಖೆಯಾಗಲಿ, ಗೊತ್ತಾಗುತ್ತದೆ. ನಿಜಕ್ಕೂ ಕಳಕಳಿ ಇದ್ದರೆ ನಿಮ್ಮ ಕಾಲದಿಂದ ಇಲ್ಲಿಯವರೆಗೂ ತನಿಖೆ ಮಾಡಿಸಿ. ಬರೀ ತನಿಖೆ ಅನ್ನೋ ಡಿಕೆ ಶಿವಕುಮಾರ್ ಯಾರು? ಡಿಕೆಶಿ ಯಾವ ಜೈಲಿನಿಂದ ಹೊರಬಂದವರು? ಯಾವ ಬೇಲ್‌ನಲ್ಲಿ ಬಂದವರು? ಯಾವ ಜೈಲಿನಲ್ಲಿ ಇದ್ದವರು ಇವರು ಎಂದು ಡಿ ಕೆ ಶಿವಕುಮಾರ್ ವಿರುದ್ದ ವಾಗ್ದಾಳಿ ನಡೆಸಿದರು.ಬಾಗಲಕೋಟೆಯಲ್ಲಿ ಶಿವಾಜಿ ಮೂರ್ತಿ ತೆರವು ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಶಿವಾಜಿ ಅವರ ಪ್ರತಿಮೆ ಎರಡು ದಿನ ಆದ ಬಳಿಕ ಯಾಕೆ ತೆರುವು ಮಾಡಿದರು. ಎರಡು ದಿನ ಡಿಸಿ, ಎಸ್‌ಪಿ ಪೋಸ್ಟ್ ಖಾಲಿ ಇತ್ತಾ? ಎಂದು ಪ್ರಶ್ನಿಸಿದ ಅವರು, ಪ್ರತಿಮೆ ತೆರವುಗೊಳಿಸಲು ಡಿಸಿ, ಎಸ್‌ಪಿಗೆ ಧಮ್ಕಿ ಹಾಕಿದ ಸಚಿವ ಯಾರು ಅಂತಾ ತನಿಖೆ ನಡೆಸಿ ಮಂತ್ರಿಯ ರಾಜೀನಾಮೆ ತೆಗೆದುಕೊಳ್ಳಲಿ. ಇದು ಬಾಗಲಕೋಟೆಗೆ ಮಾಡಿದ ಅವಮಾನ ಅಲ್ಲ, ಇಡೀ ಹಿಂದೂ ಸಮಾಜಕ್ಕೆ ಮಾಡಿದ ಅವಮಾನ, ಮುಂದೆ ಅನುಭವಿಸ್ತಾರೆ ಅನುಭವಿಸಲಿ ಎಂದು ಕಿಡಿಕಾರಿದರು.
ವರದಿ :-ಅವಿನಾಶ್ ಶಿವಮೊಗ್ಗ.