PGK NEWS:-:-ಹಾವೇರಿ -ಹದಿಹರೆಯದ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ದೃಷ್ಟಿದೋಷ ಕಾಣಿಸಿಕೊಳ್ಳುತ್ತಿದೆ. ಹಾವೇರಿ ಜಿಲ್ಲಾಡಳಿತವು ಜಿಲ್ಲೆಯ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳನ್ನು ಕಣ್ಣಿನ ತಪಾಸಣೆಗೆ ಒಳಪಡಿಸಿದ್ದು, ಜಿಲ್ಲೆಯ 8,500 ವಿದ್ಯಾರ್ಥಿಗಳಲ್ಲಿ ದೃಷ್ಟಿದೋಷ ಇರುವುದು ಕಂಡುಬಂದಿದೆ.
ಜಿಲ್ಲೆಯಲ್ಲಿ ಹಲವು ವಿದ್ಯಾರ್ಥಿಗಳು ತಮಗೆ ಬೋರ್ಡ್ ಮೇಲೆ ಬರೆಯಲಾಗುತ್ತಿಲ್ಲ. ಹೆಚ್ಚು ಸಮಯ ಓದಲಾಗುತ್ತಿಲ್ಲವೆಂದು ಹೇಳಿಕೊಳ್ಳುತ್ತಿದ್ದ ಹಿನ್ನಲೆಯಲ್ಲಿ ಜಿಲ್ಲಾಡಳಿತವು ಜಿಲ್ಲೆಯ 1,796 ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನೇತ್ರ ತಪಾಸಣೆ ನಡೆಸಿದೆ.
ತಪಾಸಣೆಗೆ ಒಳಗಾದ ವಿದ್ಯಾರ್ಥಿಗಳ ಪೈಕಿ 8,500 ವಿದ್ಯಾರ್ಥಿಗಳಲ್ಲಿ ದೃಷ್ಟಿದೋಷ ಕಂಡುಬಂದಿದೆ. ಕಳೆದ ವರ್ಷ( 2022-23ರ ಶೈಕ್ಷಣಿಕ ಸಾಲು) 4,367 ಮಕ್ಕಳಲ್ಲಿ ದೃಷ್ಟಿದೋಷ ಕಾಣಿಸಿಕೊಂಡಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ದೃಷ್ಟಿದೋಷ ಇರುವ ವಿದ್ಯಾರ್ಥಿಗಳ ಸಂಖ್ಯೆ ದ್ವಿಗುಣಗೊಂಡಿದೆ.
ಅತಿಯಾದ ಮೊಬೈಲ್ ಬಳಕೆ, ಆನ್‌ಲೈನ್ ತರಗತಿಗಳು ಹಾಗೂ ಸ್ಮಾರ್ಟ್ ನೋಟ್‌ಗಳ ಬಳಕೆಯು ವಿದ್ಯಾರ್ಥಿಗಳಲ್ಲಿ ದೃಷ್ಟಿದೋಷಕ್ಕೆ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ. ಅಲ್ಲದೆ, ಅಗತ್ಯ ಪೌಷ್ಟಿಕಾಂಶದ ಕೊರತೆಯೂ ಕಾರಣವೆಂದು ಹೇಳಲಾಗುತ್ತಿದೆ. ಆದರೆ, ಸಮಸ್ಯೆಗೆ ನಿಖರ ಮಾಹಿತಿ ತಿಳಿದುಬಂದಿಲ್ಲ.