ರಾಜ್ಯದಲ್ಲಿ ಮಳೆ ಅಭಾವದ ಹಿನ್ನೆಲೆಯಲ್ಲಿ ಕಾವೇರಿನಲ್ಲಿ ನೀರಿನ ಪ್ರಮಾಣ ತೀವ್ರವಾಗಿ ಕುಸಿದಿದೆ. ರಾಜ್ಯಕ್ಕೆ ಕುಡಿಯುವ ಅಗತ್ಯಕ್ಕೂ ನೀರಿಲ್ಲದಂತಾಗಿದೆ. ಹೀಗಾಗಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಪ್ರತಿನಿಧಿಗಳು ವಾದಿಸಿದ್ದರೂ ಕಾವೇರಿ ನಿರ್ವಹಣಾ ಪ್ರಾಧಿಕಾರವು ನಿತ್ಯ 10 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶಿಸಿದೆ. ಇದರಂತೆ ರಾಜ್ಯ ಸರ್ಕಾರ ಸ್ವಲ್ಪ ನೀರನ್ನು ಬಿಡುಗಡೆ ಮಾಡಿದೆ.
ಹೀಗಾಗಿ ಪ್ರಾಧಿಕಾರದ ಸೂಚನೆಯಂತೆ ನೀರು ಬಿಡುಗಡೆ ಮಾಡಿದರೆ ರಾಜ್ಯದಲ್ಲಿ ಕುಡಿಯುವ ನೀರಿಗೂ ಅಭಾವ ಸೃಷ್ಟಿಯಾಗಲಿದೆ. ಆದ್ದರಿಂದ ರಾಜ್ಯದಲ್ಲಿನ ಮಳೆ ಅಭಾವ, ಕುಡಿಯುವ ನೀರಿನ ಅಗತ್ಯ ಹಾಗೂ ತಮಿಳುನಾಡಿನ ಜಲಾಶಯಗಳ ನೀರಿನ ಮಟ್ಟದ ಆಧಾರದ ಮೇಲೆ ಪ್ರಾಧಿಕಾರ ನೀಡಿರುವ ಆದೇಶ ರದ್ದುಪಡಿಸುವಂತೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಕಾವೇರಿ ವಿವಾದ ಸಂಬಂಧ ಪ್ರತಿಪಕ್ಷಗಳ ಪ್ರತಿಭಟನೆ ಪ್ರಮುಖವಾಗಿ ಮಂಡ್ಯದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸರ್ವ ಪಕ್ಷಗಳ ಸಭೆ ಕರೆಯಲು ತೀರ್ಮಾನಿಸಿದ್ದಾರೆ. ಇದನ್ನು ಅಧಿಕೃತವಾಗಿಯೂ ಪ್ರಕಟಿಸಿದ್ದಾರೆ. ಹೀಗಾಗಿ ಯಾರೂ ಯಾವುದೇ ಪ್ರತಿಭಟನೆ, ಹೋರಾಟ ಮಾಡುವ ಅಗತ್ಯವಿಲ್ಲ. ಎಲ್ಲರೂ ಒಂದು ಕಡೆ ಸೇರಿ ರಾಜ್ಯದ ಹಿತದೃಷ್ಟಿಯಿಂದ ಚರ್ಚಿಸಲು ಅವಕಾಶವಿದೆ ಎಂದರು.
ಸರ್ಕಾರದ ವಿರುದ್ಧ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹಾಗೂ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಕಿಡಿಕಾರಿದ್ದು, ರೈತರ ಹಿತವನ್ನು ಕಡೆಗಣಿಸಿ ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಿದೆ ಎಂದು ಕಿಡಿಕಾರಿದ್ದಾರೆ.