PGK NEWS:- ಉತ್ತರ ಕನ್ನಡ- ಚಿಕ್ಕಮಗಳೂರು: ಅಕ್ರಮ ಭೂ ಮಂಜೂರಾತಿ ಪ್ರಕರಣದಲ್ಲಿ ಬಂಧನವಾಗಿರುವ ಕಡೂರು ತಾಲೂಕಿನ ಹಿಂದಿನ ತಹಶೀಲ್ದಾರ್ ಜೆ.ಉಮೇಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿ ಉಮಾದೇವಿ ಆದೇಶಿಸಿದ್ದಾರೆ.
ಇತ್ತೀಚೆಗೆ ವರ್ಗಾವಣೆಗೊಂಡು ಕಾರವಾರ ಸೀಬರ್ಡ್ ಭೂಸ್ವಾಧೀನ ಅಧಿಕಾರಿಯಾಗಿದ್ದ ಜೆ.ಉಮೇಶ್ ಅವರ ಮೇಲೆ ಅಕ್ರಮ ಭೂ ಮಂಜೂರಾತಿ ಸಂಬಂಧ ತರೀಕೆರೆ ಉಪವಿಭಾಗಾಧಿಕಾರಿ ಡಾ|ಕಾಂತರಾಜ್ ಕಡೂರು ಪೊಲೀಸ್ ಠಾಣೆಯಲ್ಲ ದೂರು ದಾಖಲಿಸಿದ್ದರು.
ದೂರು ದಾಖಲಾಗುತ್ತಿದ್ದಂತೆ ತಹಶೀಲ್ದಾರ್ ಜೆ.ಉಮೇಶ್ ಬಂಧನ ಭೀತಿಯಿಂದ ಕಣ್ಮರೆಯಾಗಿದ್ದರು. ಕಡೂರು ಪೊಲೀಸರು ಗುರುವಾರ ರಾತ್ರಿ ಬೆಂಗಳೂರಿನಲ್ಲಿ ಜೆ.ಉಮೇಶ್ ಅವರನ್ನು ಬಂಧಿಸಿದ್ದಾರೆ. ಕಡೂರು ತಾಲೂಕಿನಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಉಳ್ಳಿನಾಗರು ಸರ್ಕಾರಿ ಬೀಳು ಸರ್ವೇ ನಂ೪೩ರಲ್ಲಿನ 5.04 ಎಕರೆ ಜಮೀನು ಅಕ್ರಮ ಭೂ ಮಂಜೂರಾತಿ ಮಾಡಿರುವ ಆರೋಪ ಈತನ ಮೇಲಿದ್ದು, ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸರ್ಕಾರಿ ಅಧಿಕಾರಿ ಗಂಭೀರ ಕರ್ತವ್ಯಲೋಪ ಮತ್ತು ಸರ್ಕಾರಕ್ಕೆ ತೀವ್ರ ಆರ್ಥಿಕ ನಷ್ಟ ಉಂಟು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನಲೆಯಲ್ಲಿ ಅಧಿಕಾರಿಯ ವಿರುದ್ಧ ಇಲಾಖೆ ವಿಚಾರಣೆ ಬಾಕೀ ಇದ್ದು, ಈ ಕಾರಣದಿಂದ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ವರದಿ :-ಚಂದ್ರಶೇಖರ್ ಶಿರೂರು ಕಾರವಾರ.