PGK NEWS (ಪಶ್ಚಿಮ ಘಟ್ಟ ವಾಯ್ಸ್) :-ಬೆಂಗಳೂರು, ಸೆಪ್ಟೆಂಬರ್ 04: ರಾಜ್ಯದ ಬರ ಪೀಡಿತ ತಾಲೂಕುಗಳಿಗೆ ಹಣದ ಬದಲು 10 ಕೆಜಿ ಅಕ್ಕಿ ನೀಡಲಾಗುವುದು ಎಂದು ಆಹಾರ ಸಚಿವ ಕೆ ಎಚ್ ಮುನಿಯಪ್ಪ ಅವರು ಘೋಷಿಸಿದ್ದಾರೆ.ಈ ಕುರಿತು ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, 114 ಬರ ಪೀಡಿತ ತಾಲ್ಲೂಕುಗಳಲ್ಲಿ ಹತ್ತು ಕೆಜಿ ಅಕ್ಕಿ ಪೂರೈಕೆ ಮಾಡಲಾಗುವುದು. 5 ಕೆ ಜಿ ಅಕ್ಕಿ ಹಾಗೂ ಹಣ ನೀಡಲಾಗಿತ್ತು. ಆದರೆ, ಇದೀಗ ಒಟ್ಟು 10 ಕೆ ಜಿ ಅಕ್ಕಿ ಪೂರೈಕೆ ಮಾಡುತ್ತೇವೆ. ಬರಪೀಡಿತ ತಾಲ್ಲೂಕುಗಳ ಪಟ್ಟಿ ಘೋಷಣೆ ಆಗುತ್ತಿದ್ದಂತೆ ಹತ್ತು ಕೆಜಿ ಅಕ್ಕಿ ಪೂರೈಕೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇನ್ನೊಂದು ವಾರದಲ್ಲಿ ಹತ್ತು ಕೆಜಿ ಅಕ್ಕಿ ಪೂರೈಕೆ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಆಂಧ್ರ, ತೆಲಂಗಾಣ ಮತ್ತು ಛತ್ತೀಸ್ಗಢ ದಿಂದ ಅಕ್ಕಿ ಕೊಡಲು ಮುಂದೆ ಬಂದಿದ್ದಾರೆ ದರ ನಿಗದಿಯ ಚರ್ಚೆ ನಡೆಯುತ್ತಿದೆ. ಇನ್ನೊಂದು ಹತ್ತು ದಿನದಲ್ಲಿ ಎಲ್ಲವೂ ಅಂತಿಮವಾಗಬಹುದು. ಎಫ್‌ಸಿಐ ದರದಲ್ಲೇ ಇಲ್ಲೂ ಅಕ್ಕಿ ಖರೀದಿಸಬೇಕು ಎಂಬ ಲೆಕ್ಕಾಚಾರದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.
ಡಿಬಿಟಿ (ನೇರ ನಗದು ವರ್ಗಾವಣೆ ವಿಚಾರದಲ್ಲಿ ಮಾಧ್ಯಮಗಳಿಗೆ ತಪ್ಪು ಮಾಹಿತಿ ಹೋಗಿದೆ. ಜುಲೈ ತಿಂಗಳಿನಲ್ಲಿ 97 ಲಕ್ಷ ಕಾರ್ಡ್‌ದಾರರಿಗೆ ಡಿಬಿಟಿ ಮಾಡಿದ್ದೇವೆ. 3.45 ಕೋಟಿ ಜನರಿಗೆ 566 ಕೋಟಿ ರೂಪಾಯಿ ಬೇಕಾಗುತ್ತದೆ. ಆಗಸ್ಟ್ ತಿಂಗಳಲ್ಲಿ 3.69 ಕೋಟಿ ಜನರಿಗೆ 606 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದೇವೆ. ಬ್ಯಾಂಕ್ ಅಕೌಂಟ್ ಇಲ್ಲದವರು 21 ಲಕ್ಷ ಜನರಿದ್ದಾರೆ. 2 ಲಕ್ಷ ಜನರಿಗೆ ನಾವೇ ಬ್ಯಾಂಕ್ ಅಕೌಂಟ್ ಮಾಡಿದ್ದೇವೆ. 14 ಲಕ್ಷ ಜನರಿಗೆ ನಾವೇ ಅಕೌಂಟ್ ಮಾಡ್ತಾ ಇದ್ದೇವೆ. ಇದರಿಂದ ಯಾರಿಗೂ ಅನ್ಯಾಯ ಆಗುವುದಿಲ್ಲ ಎಂದು ಕೆ.ಎಚ್. ಮುನಿಯಪ್ಪ ತಿಳಿಸಿದರು.
ಉದಯನಿಧಿ ಸ್ಟಾಲಿನ್ ಹೇಳಿಕೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಅವರ ವೈಯಕ್ತಿಕ ಅಭಿಪ್ರಾಯ. ಭಾರತದ ವ್ಯವಸ್ಥೆ ಹೇಗಿದೆ, ಆ ರೀತಿ ನಾವು ಹೋಗಬೇಕು ಭಾರತ ಒಂದು ಧರ್ಮಕ್ಕೆ ಸೇರಿದಲ್ಲ, ಸಾವಿರಾರು ವರ್ಷಗಳಿಂದ ಎಲ್ಲಾ ಧರ್ಮದವರು ಇದ್ದಾರೆ. ಸ್ವಾತಂತ್ರ್ಯ ಹೋರಾಟಕ್ಕೆ ಎಲ್ಲಾ ಧರ್ಮಗಳು ಭಾಗಿಯಾಗಿವೆ, ಅದೊಂದು ವೈಯಕ್ತಿಕ ಅಭಿಪ್ರಾಯ ಸಂವಿಧಾನದ ಚೌಕಟ್ಟಿನಲ್ಲಿ ನಾವೆಲ್ಲ ಪಡೆಯಬೇಕಾಗುತ್ತದೆ ಎಂದು ಹೇಳಿದರು.
ಉಚಿತ ಗ್ಯಾರಂಟಿ ಕುರಿತು ಪ್ರಧಾನಿ ನರೇಂದ್ರ ಮೋದಿ ಟೀಕಿಸಿರುವ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ದೇಶದಲ್ಲಿ 35-37% ಬಡತನ ರೇಖೆಗಿಂತ ಕೆಳಗಿನ ಜನರಿದ್ದಾರೆ ಯುಪಿಎ ಇದ್ದಾಗ ಆಹಾರ ಭದ್ರತಾ ಕಾಯ್ದೆ ತಂದೆವು, ಯಾರೂ ಕೂಡ ಕೆಲಸ ಇಲ್ಲದೆ ಮಲಗಬಾರದು ಅಂತ ನರೇಗಾ ಯೋಜನೆ ತಂದೆವು. ಈ ಆಹಾರ ಭದ್ರತಾ ಕಾಯಿದೆಯಿಂದ ಜನರಿಗೆ ಅನುಕೂಲ ಆಗ್ತಿದೆ ಎಂದು ಹೇಳಿದರು.
Advertisement