PGK NEWS (ಪಶ್ಚಿಮ ಘಟ್ಟ ವಾಯ್ಸ್ ) ಜೋಗ್‌ಫಾಲ್ಸ್ /ಶಿವಮೊಗ್ಗಅಂತೂ ಇಂತೂ ಜೋಗ ಜಲಪಾತ ಜಗಮಗಿಸುವ ದಿನಗಳು ಹತ್ತಿರ ಬಂದಿವೆ. ಸ್ಥಳೀಯರ, ಪ್ರವಾಸಿಗರ ಬಹುದಿನದ ಕನಸು ನನಸಾಗುವ ಕಾಲ ಹತ್ತಿರವಾಗಿದೆ.
ಸುಮಾರು 185 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಬಹುತೇಕ ಮುಗಿಯುವ ಹಂತದಲ್ಲಿದ್ದು, ಡಿಸೆಂಬರ್ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಉದ್ಘಾಟನೆಗೆ ಸಜ್ಜುಗೊಳ್ಳಲಿದೆ.
ಜೋಗ್ ಫಾಲ್ಸ್ ಎಲ್ಲ ಕೋನಗಳಿಂದ ವೀಕ್ಷಿಸಲು ಅನುಕೂಲವಾಗುವಂತೆ ವ್ಯೂ ಡಕ್‌ಗಳನ್ನು ನಿರ್ಮಿಸಲಾಗಿದೆ. ಇವು ಮೂರು ಹಂತ ಒಳಗೊಂಡಿದ್ದು, ಏಕಕಾಲಕ್ಕೆ 5000 ಜನರು ದಟ್ಟಣೆ ಇಲ್ಲದಂತೆ ನಿಂತು ಜಲಪಾತ ವೀಕ್ಷಿಸಬಹುದಾಗಿದೆ. ವ್ಯೂ ಡಕ್ ವಿನ್ಯಾಸ ಅತ್ಯಾಕರ್ಷಕವಾಗಿದ್ದು ಅಲ್ಲಿ ನಿಂತು ಜಲಪಾತ ವೀಕ್ಷಿಸುವುದೇ ಒಂದು ರೋಮಾಂಚನದ ಅನುಭವವಾಗಲಿದೆ.
ಫಾಲ್ಸ್ ಆವರಣಕ್ಕೆ ಪ್ರವೇಶ ನೀಡುವ ದ್ವಾರ ಅತ್ಯಂತ ಆಕರ್ಷಕವಾಗಿದೆ. ಜಲಪಾತದ ಸನಿಹಕ್ಕೆ ಯಾವುದೇ ವಾಹನಗಳನ್ನು ಬಿಡುವುದಿಲ್ಲ. ಇದರಿಂದ ವಾಹನಗಳ ಸಂಚಾರದ ಅಬ್ಬರವಿಲ್ಲದೆ ಪ್ರವಾಸಿಗರು ಸ್ವಚ್ಛಂದವಾಗಿ ಜಲಪಾತದ ಆವರಣದಲ್ಲಿ ವಿಹರಿಸಬಹುದಾಗಿದೆ.
ಹೊಸ ಯೋಜನೆಗಳೊಂದಿಗೆ
ಲೈನ್, ಹೊಸ ವ್ಯೂ ಡಕ್ ಸೇರಿದಂತೆ ಹಲವು ಹೊಸತುಗಳಿಂದ ಶಿವಮೊಗ್ಗದ ಜೋಗ ಜಲಪಾತ ಕಂಗೊಳಿಸುತ್ತಿದೆ. ಈ ವರ್ಷಾಂತ್ಯ ಎಲ್ಲಾ ಕಾಮಗಾರಿಗಳು ಸಂಪೂರ್ಣವಾಗಿ ಮುಗಿಯಲಿದ್ದು, ಪ್ರವಾಸಿಗರಿಗೆ ಹೊಸ ಅನುಭವ ಸಿಗಲಿದೆ. ಜಿಪ್ ಲೈನ್ ಅಂತೂ 1200 ಅಡಿ ಎತ್ತರದಿಂದ ಹಾರಿ ಬರುವ ಹೊಸ ಅನುಭವ ಕೊಡಲಿದೆ
ಉತ್ತಮವಾದ ಪಾರ್ಕಿಂಗ್ ವ್ಯವಸ್ಥೆ
ಜಲಪಾತ ಆವರಣದ ಸುಮಾರು ಅರ್ಧ ಕಿ.ಮೀ. ಅಂತರದಲ್ಲಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಪ್ರವಾಸಿಗರು ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸಿ ಹೋಗುವುದು ತಪ್ಪಲಿದೆ. ಶರಾವತಿ ಪ್ರತಿಮೆ, ಮಕ್ಕಳ ಉದ್ಯಾನವನ, ಆಕರ್ಷಕ ಕಟ್ಟಡ ವಿನ್ಯಾಸ, ಕರಕುಶಲ ವಸ್ತುಗಳ ಮಾರಾಟ ಮಳಿಗೆ, ಲೇಸರ್ ಕಾರಂಜಿ ಮುಂತಾದ ಆಕರ್ಷಣೆಯ ತಾಣಗಳನ್ನು ನಿರ್ಮಿಸಲಾಗುತ್ತಿದೆ. ಜೋಗ ಅಭಿವೃದ್ಧಿ ಕಾಮಗಾರಿಯನ್ನು ದೇಶಾದ್ಯಂತ ಬೃಹತ್ ಕಾಮಗಾರಿ ನಿರ್ವಹಿಸಿರುವ ಶಂಕರನಾರಾಯಣ ಕನ್‌ಸ್ಟ್ರಕ್ಷನ್ ಕಂಪನಿ ಕೈಗೆತ್ತುಕೊಂಡಿದೆ.
ಅಭಿವೃದ್ಧಿಯಿಂದ ಉತ್ತಮವಾದ ಉದ್ಯೋಗಾವಕಾಶ
ಜೋಗ ಜಲಪಾತದ ಅಭಿವೃದ್ಧಿಯಾದರೆ ಸಹಜವಾಗಿ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ಇದರಿಂದ ಇಲ್ಲಿನ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಾಕಷ್ಟು ಉದ್ಯೋಗಾವಕಾಶಗಳು ಲಭಿಸಿ ಆರ್ಥಿಕ ಚೇತರಿಕೆ ಉತ್ತಮಗೊಳ್ಳುವ ನಿರೀಕ್ಷೆ ಇದೆ.ಮೊದಲ ಹಂತದ ಬಹಳಷ್ಟು ಕಾಮಗಾರಿಗಳು ಅಂತಿಮವಾಗುತ್ತಿದ್ದು, ಎರಡನೇ ಹಂತದ ಕಾಮಗಾರಿಗಳು ಆರಂಭವಾಗಲಿವೆ. ಇದರಲ್ಲಿಪ್ರವಾಸಿಗರಿಗೆ ವಸತಿ, ಮೈಸೂರು ಬಂಗಲೆಯಿಂದ ಬ್ರಿಟಿಷ್ ಬಂಗಲೆ ವರೆಗಿನ ಕೇಬಲ್ ಕಾರ್ ಮುಂತಾದ ವ್ಯವಸ್ಥೆಗಳನ್ನು ಕಲ್ಪಿಸಬೇಕಿದೆ. ಅಭಿವೃದ್ಧಿ ಕಾಮಗಾರಿಗಳು ಇಲ್ಲಿನ ಜನರಲ್ಲಿಸಾಕಷ್ಟು ನಿರೀಕ್ಷೆ ಮೂಡಿಸಿವೆ.
ಕಾಗೋಡು ತಿಮ್ಮಪ್ಪನವರ ಪ್ರಯತ್ನಬಿ.ಎಸ್.ಯಡಿಯೂರಪ್ಪ
ಅವರು ಅಧಿಕಾರದಲ್ಲಿದ್ದಾಗಲೆಲ್ಲ ಜೋಗ್ ಅಭಿವೃದ್ಧಿಗೆ ಒಂದಲ್ಲ ಒಂದು ಕೊಡುಗೆ ನೀಡುತ್ತಲೇ ಬಂದಿದ್ದಾರೆ. ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭ ಜಲಪಾತದ ಆಳದ ವರೆಗೆ ಇಳಿಯಲು ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಾಂಕ್ರಿಟ್ ಮೆಟ್ಟಿಲುಗಳ ನಿರ್ಮಾಣಕ್ಕೆ ಅನುದಾನ ನೀಡಿದ್ದರು. ನಂತರ ಮುಖ್ಯಮಂತ್ರಿ ಆಗಿದ್ದಾಗ 185 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ವಿಶ್ವ ದರ್ಜೆಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಿದ್ದರು. ಕಾಗೋಡು ತಿಮ್ಮಪ್ಪ ಅವರು ಸಚಿವರಾಗಿದ್ದಗ ಜೋಗ ನಿರ್ವಹಣಾ ಪ್ರಾಧಿಕಾರ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಜೋಗದ ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡಿದವರಾಗಿದ್ದಾರೆ.
ರಾಣಿ ಫಾಲ್ಸ್ ಮೇಲೆ ಸ್ಥಾಪಿಸಿರುವ ಸುಮಾರು 35 ಅಡಿ ಎತ್ತರದ ಗೋಪುರದಿಂದ ಮೈಸೂರು ಬಂಗ್ಲೆ ಕೆಳಭಾಗದಲ್ಲಿ ನಿರ್ಮಿಸಿರುವ ಮತ್ತೊಂದು ಗೋಪುರಕ್ಕೆ ತಂತಿಗಳ ಮೂಲಕ ಜಿಪ್ ಲೈನ್ ನಿರ್ಮಿಸಲಾಗಿದೆ. ಇದರ ಮೂಲಕ ಸುಮಾರು 1200 ಅಡಿ ಎತ್ತರದಿಂದ ಜಾರಿ ಬರುವ ರೋಮಾಂಚನಕಾರಿ ಅನುಭವ ಕೆಲವೇ ದಿನಗಳಲ್ಲಿ ಪ್ರವಾಸಿಗರಿಗೆ ಸಿಗಲಿದೆ. ರಾಜ್ಯದ ಮೊಟ್ಟಮೊದಲ ಅತಿ ಎತ್ತರದ ಜಿಪ್‌ಲೈನ್ ಇದಾಗಿದ್ದು, ಯುವ ಪ್ರವಾಸಿಗರನ್ನು ಸೆಳೆಯುವುದರಲ್ಲಿ ಸಂಶಯವಿಲ್ಲ.