PGK NEWS( ಪಶ್ಚಿಮ ಘಟ್ಟ ವಾಯ್ಸ್)
ಉಡುಪಿ: ಕೋಟಿ-ಕೋಟಿ ರೂ. ಹಣ ಪಡೆದು ಉದ್ಯಮಿಗೆ ವಂಚಿಸಿದ್ದ ಚೈತ್ರಾ ಕುಂದಾಪುರ ತನ್ನ ಗೆಳೆಯನ ಹೆಸರಿನಲ್ಲಿ ಮನೆ ಕಟ್ಟಿಸುತ್ತಿರುವ ಅಂಶ ಈಗ ಸಿಸಿಬಿ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಗೆಳೆಯ ಶ್ರೀಕಾಂತ್ ನಾಯಕ್ ಹೆಸರಿನಲ್ಲಿ ಉಡುಪಿಯ ಹಿರಿಯಡಕದ ಬಳಿ ವರ್ಷಕ್ಕೂ ಹಿಂದೆ ಖರೀದಿಸಿರುವ 20ರಿಂದ 25 ಸೆಂಟ್ಸ್ ಜಾಗದಲ್ಲಿ ಮನೆ ನಿರ್ಮಾಣವಾಗುತ್ತಿದೆ. ಎರಡು ಅಂತಸ್ತಿನ ಮನೆ ನಿರ್ಮಾಣದ ಕಾಮಗಾರಿ ಇದಾಗಿದೆ. ಈ ಪೈಕಿ ಒಂದನೇ ಅಂತಸ್ತಿನ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಮನೆ ನಿರ್ಮಾಣಕ್ಕೆ ಬೇಕಾದ ಜಲ್ಲಿ, ಕಲ್ಲು, ಮರಳನ್ನು ಸ್ಥಳದಲ್ಲಿ ದಾಸ್ತಾನು ಇರಿಸಲಾಗಿದೆ. ನೀರಿನ ಸಂಪರ್ಕಕ್ಕೆ ಮನೆಯ ಎದುರು ಭಾಗದಲ್ಲಿ ಎರಡು ಬೋರುವೆಲ್ ಕೊರೆಯಲಾಗಿದೆ. ಸದ್ಯ ಚೈತ್ರಾ ಹಾಗೂ ಶ್ರೀಕಾಂತ್ ನಾಯಕ್ ಬಂಧನವಾಗುತ್ತಿದ್ದಂತೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ.
ಉಡುಪಿಯಲ್ಲಿಯೇ ಬೀಡುಬಿಟ್ಟಿರುವ ಸಿಸಿಬಿಯ ಒಂದು ತಂಡ.
ಶನಿವಾರ ಉಪ್ಪೂರಿನಲ್ಲಿರುವ ಕೋ-ಆಪರೇಟಿವ್ ಸೊಸೈಟಿಗೆ ಭೇಟಿ ನೀಡಿ ಹಣ ವರ್ಗಾವಣೆ ಹಾಗೂ ಆರೋಪಿಗಳು ಠೇವಣೆ ಇರಿಸಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಬೈಂದೂರು, ಕುಂದಾಪುರ ಹಾಗೂ ಉಡುಪಿ ತಾಲೂಕಿನ ವಿವಿಧೆಡೆ ಕಾರ್ಯಾಚರಣೆ ನಡೆಸಿದ್ದಾರೆ.
ಉಪ್ಪೂರಿನ ಬ್ಯಾಂಕ್‌ನಲ್ಲಿ ಆರೋಪಿ ಶ್ರೀಕಾಂತ್ ನಾಯಕ್ ಹೆಸರಿನಲ್ಲಿ ಈಕೆ ಅಪಾರ ಪ್ರಮಾಣದ ನಗದು, ನಿವೇಶನ ಪತ್ರ ಹಾಗೂ ಚಿನ್ನಾಭರಣಗಳನ್ನು ಇಟ್ಟಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. ಕೆಲವು ದಿನಗಳ ಕಾಲ ಸಿಸಿಬಿ ಪೊಲೀಸರು ಉಡುಪಿಯಲ್ಲಿಯೇ ಇದ್ದು ಮತ್ತಷ್ಟು ಮಾಹಿತಿಗಳು ಕಲೆ ಹಾಕಲಿದ್ದಾರೆ.
ಕಾರು ಮುಧೋಳದಲ್ಲಿ ಪತ್ತೆ; ಸಿಸಿಬಿ ವಶಕ್ಕೆ.
ಬಿಜೆಪಿ ಟಿಕೆಟ್ ಕೊಡಿಸಲು ಹಣದ ಪಡೆದ ಆರೋಪದಡಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾದ ಚೈತ್ರಾ ಕುಂದಾಪುರ ಕಾರು ಮುಧೋಳದಲ್ಲಿ ಪತ್ತೆಯಾಗಿದ್ದು, ಅದನ್ನು ಜಪ್ತಿ ಮಾಡಲಾಗಿದೆ. ಮುಧೋಳದ ಹಿಂದೂ ಸಂಘಟನೆ ಮುಖಂಡ ಕಿರಣ ಗ್ಯಾನಪ್ಪಗೋಳ ಎಂಬವರ ವಶದಲ್ಲಿದ್ದ ಕೆಎ-20, ಎಂಇ-7253 ಸಂಖ್ಯೆಯ ಕಾರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜತೆಗೆ ಕಿರಣ ಅವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮೂಲಗಳ ಪ್ರಕಾರ, ಈ ಕಾರು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿತ್ತು. ಚೈತ್ರಾ ಅವರ ಆಪ್ತರೊಬ್ಬರು ತಿಳಿಸಿದ ಹಿನ್ನೆಲೆಯಲ್ಲಿ ಕಿರಣ ಅಲ್ಲಿಂದ ಈ ಕಾರನ್ನು ಮುಧೋಳಕ್ಕೆ ತಂದಿದ್ದರು ಎನ್ನಲಾಗಿದೆ. ಸಿಸಿಬಿ ಪೊಲೀಸರು ಎಲ್ಲವನ್ನೂ ಸಮಗ್ರವಾಗಿ ತನಿಖೆ ನಡೆಸುತ್ತಿದ್ದಾರೆ.
ಗೋವಿಂದಬಾಬುಗೆ ನೋಟಿಸ್..
ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ದೂರುದಾರ ಗೋವಿಂದಬಾಬು ಪೂಜಾರಿಗೆ ಮತ್ತೇ ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. 5 ಕೋಟಿ ರೂ. ಮೂಲದ ಬಗ್ಗೆ ಮಾಹಿತಿ ಕೇಳಿ ನೋಟಿಸ್ ನೀಡಲಾಗಿದೆ. ಯಾವ ರೂಪದಲ್ಲಿ ಆರೋಪಿಗಳಿಗೆ ಹಣ ನೀಡಲಾಗಿದೆ ಮುಂತಾದ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಮತ್ತೆ 2 ಕೋ. ರೂ.ನಗದು, ಚಿನ್ನಾಭರಣ ಪತ್ತೆ..
ಶನಿವಾರವಷ್ಟೇ ಚೈತ್ರಾ ಕುಂದಾಪುರ ಮನೆ, ಬ್ಯಾಂಕ್ ಖಾತೆಗಳು ಮತ್ತು ಆಕೆಯ ಸಂಬಂಧಿಕರ ಬ್ಯಾಂಕ್ ಖಾತೆಗಳಲ್ಲಿದ್ದ 1.08 ಕೋಟಿ ರೂ. ಮೌಲ್ಯದ ಆಸ್ತಿ, 65 ಲಕ್ಷ ರೂ. ಚಿನ್ನಾಭರಣ, 40 ಲಕ್ಷ ರೂ. ಜಪ್ತಿ ಮಾಡಲಾಗಿತ್ತು. ಈಗ ಕುಂದಾಪುರ, ಬಾಗಲಕೋಟೆ ಮತ್ತಿತರ ಕಡೆ ತಪಾಸಣೆ ನಡೆಸಿ ಹೆಚ್ಚುವರಿಯಾಗಿ ಚಿನ್ನಾಭರಣ, ನಗದು, ಬ್ಯಾಂಕ್ ಠೇವಣಿ ಸೇರಿ 1 ಕೋ. ರೂ. ಮೊತ್ತವನ್ನು ಪತ್ತೆ ಹಚ್ಚಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.