ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್) ಅಧಿಕಾರಿಗಳು ಮಾನದಂಡಗಳನ್ನು ಸೂಕ್ಷ್ಮವಾಗಿ ಪರಿಗಣಿಸದೆ ನಿರ್ಲಕ್ಷ್ಯ ವಹಿಸಿದ್ದರಿಂದ ಭೂಸ್ವಾಧೀನ ಪ್ರಕ್ರಿಯೆ ವಿಫಲವಾಗಿದೆ. ಮಾಧವಾಚಾರ್ ವೃತ್ತ ಬಳಿಯ ನದಿ ತೀರದಿಂದ ಆರಂಭಗೊಂಡ ಸೇತುವೆ ಕಾಮಗಾರಿ ಶೇ. 90 ಮುಗಿದಿದೆ. ಆದರೆ, ಬಿ.ಎಚ್.ರಸ್ತೆ ಮಾರುಕಟ್ಟೆ ಭಾಗದ ನದಿ ತೀರದ ಕಡೆ ಅಂಚಿನಲ್ಲಿ ಶೇ. 10 ಕಾಮಗಾರಿ ಬಾಕಿ ಉಳಿದಿದೆ. ಸೇತುವೆ ನಿರ್ಮಾಣಕ್ಕಾಗಿ ಬೇಕಾದ ಭೂಸ್ವಾಧೀನ ಪ್ರಕ್ರಿಯೆಯಲ್ಲಿಕೆಲವು ವಾಣಿಜ್ಯ ಕಟ್ಟಡಗಳ ಮಾಲೀಕರು ಪರಿಹಾರ ಪಡೆದರೆ, ಕೆಲವರಿಗೆ ಅಲ್ಪಸ್ವಲ್ಪ ಪರಿಹಾರ ನೀಡಿದ್ದಾರೆ. ಮತ್ತೆ ಕೆಲವರು ಹೆಚ್ಚು ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆದರೂ, ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ ಪರಿಹಾರದ ಮೊತ್ತವನ್ನು ನ್ಯಾಯಾಲಯಕ್ಕೆ ಪಾವತಿಸಿ ಕಟ್ಟಡಗಳ ತೆರವು ಮಾಡುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ, ಅಧಿಕಾರಿಗಳು ಕೆಲ ಕಟ್ಟಡ ಮಾಲೀಕರಿಗೆ ಮಣೆ ಹಾಕಲು ಮುಂದಾಗಿ ಕಟ್ಟಡ ತೆರವಿಲ್ಲದೆಯೇ ನೀಲ ನಕ್ಷೆಯನ್ನೇ ಬದಲಾಯಿಸಿ ಸೇತುವೆಯನ್ನೇ ಡೊಂಕಾಗಿ ನಿರ್ಮಿಸಲು ಮುಂದಾದ ಘಟನೆಗಳು ಸಹ ನಡೆದಿದೆ.
ಕಟ್ಟಡಗಳಿಗೆ ತೆರವಿಗೆ ಮೀನಾಮೇಷ
ಅಧಿಕಾರಿಗಳು ಭೂಸ್ವಾಧೀನ ಪ್ರಕ್ರಿಯೆಯಲ್ಲಿಆರೇಳು ವಾಣಿಜ್ಯ ಕಟ್ಟಡಗಳನ್ನು ಅಳತೆ ಮಾಡಿ ಬೇಕಾದ ಜಾಗ ವಶಪಡಿಸಿಕೊಳ್ಳಲು ಮಾರ್ಕಿಂಗ್ ಮಾಡಿ ಪರಿಹಾರ ನಿಗದಿ ಮಾಡಿದ್ದಾರೆ. ಅದರಂತೆ ಚಂದ್ರು ಎಂಬ ಟಿನ್ ಮೇಕರ್ 28 ಲಕ್ಷ ರೂ. ಪರಿಹಾರ ಪಡೆದು ಜಾಗ ಖುಲ್ಲಾಮಾಡಿಕೊಟ್ಟಿದ್ದಾರೆ. ಪಕ್ಕದ ದತ್ತಾರಾಂ ಕಾಂಪ್ಲೆಕ್ಸ್ ಮಾಲೀಕರು ಹೆಚ್ಚು ಪರಿಹಾರಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.ಮಿತ್ರ ಸಮಾಜ ಕಟ್ಟಡ ಮಾಲೀಕರಿಗೆ 58 ಲಕ್ಷ ರೂ. ಪರಿಹಾರದಲ್ಲಿ20 ಲಕ್ಷ ರೂ. ನೀಡಿ ಉಳಿದ ಬಾಕಿ ನೀಡದೆ ಸತಾಯಿಸಿದ್ದಲ್ಲದೇ, ನೀಡಿದ ಹಣವನ್ನೇ ಅಧಿಕಾರಿಗಳು ವಾಪಸ್ ಕೇಳುತ್ತಿದ್ದಾರೆ. ಇನ್ನೂ ಸ್ವಸ್ತಿಕ್ ಸ್ಟೀಲ್ಸ್, ಗಾಯತ್ರಿ ಹಾರ್ಡ್‌ವೇರ್, ಕರ್ನಾಟಕ ಬ್ಯಾಂಕ್ ಇನ್ನಿತರೆ ಕಟ್ಟಡ ಮಾಲೀಕರು ಮೌನ ವಹಿಸಿದ್ದಾರೆ. ಇಷ್ಟೆಲ್ಲಾಅವಾಂತರಗಳ ನಡುವೆಯೇ ಆತುರದಲ್ಲಿ ಸೇತುವೆ ಕಾಮಗಾರಿಯನ್ನು ಡೊಂಕಾಗಿ ಮಾಡಿ ಮುಗಿಸಿ ಕಿಷ್ಕಿಂಧೆಯಂತಿರುವ ಬಿ.ಎಚ್.ರಸ್ತೆಗೆ ಸಂಪರ್ಕಿಸುವ ಕರಾಮತ್ತು ನಡೆಸಲಾಗಿತ್ತು. ಇದನ್ನು ಖಂಡಿಸಿ ನಗರಸಭೆ ಸದಸ್ಯರಾದ ಮೋಹನ್‌ಕುಮಾರ್ ಮತ್ತು ಜಾಜ್‌ರ್ ನೇತೃತ್ವದಲ್ಲಿಅನೇಕ ಸಂಘ ಸಂಸ್ಥೆಗಳು ಪ್ರತಿಭಟಿಸಿದ್ದರಿಂದ ಕಾಮಗಾರಿ ಸ್ಥಗಿತವಾಗಿದೆ. ಮತ್ತೀಗ ಅದೇ ಅಂಕುಡೊಂಕಿನ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಮುಂದಾಗಲಾಗಿದೆ ಎನ್ನಲಾಗಿದೆ. ಆದ್ದರಿಂದ ಶಾಸಕರು, ಸಂಸದರು ಸೇರಿದಂತೆ ಜನಪ್ರತಿನಿಧಿಗಳು ಮಧ್ಯಪ್ರವೇಶ ಮಾಡಿ ಮಾರ್ಕಿಂಗ್ ಮಾಡಿರುವಂತೆ ಕಟ್ಟಡಗಳ ತೆರವು ಮಾಡಿ ಸಂಚಾರ ಯೋಗ್ಯ ಸೇತುವೆ ನಿರ್ಮಿಸಬೇಕೆಂಬುದು ಜನತೆಯ ಆಗ್ರಹವಾಗಿದೆ.