ಹಾಸನ: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಕಾವೇರಿ ಬಿಕ್ಕಟ್ಟು ಬಗೆಹರಿಸಲು ರಾಜ್ಯಗಳ ನಡುವೆ ಒಮ್ಮತ ಮೂಡಬೇಕು ಎಂದು ಮಂಗಳವಾರ ಹೇಳಿದ್ದಾರೆ.
ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾಯಕರು ಮತ್ತು ರಾಜಕೀಯ ಪಕ್ಷಗಳ ಒಗ್ಗಟ್ಟಿನ ಕೊರತೆಯಿಂದ ಕರ್ನಾಟಕಕ್ಕೆ ನ್ಯಾಯ ಸಿಗುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಕಾವೇರಿ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿಗೆ ಪತ್ರ ಬರೆದಿರುವುದನ್ನು ಸ್ವಾಗತಿಸಿದ್ದಾರೆ.
ಎರಡೂ ರಾಜ್ಯಗಳ ಹಿರಿಯ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ತಜ್ಞರ ತಂಡ ಜಲಾಶಯಗಳು ಮತ್ತು ಜಲಾನಯನ ಪ್ರದೇಶಗಳಿಗೆ ಭೇಟಿ ನೀಡಿ ನೆಲದ ಪರಿಸ್ಥಿತಿಯನ್ನು ಅಧ್ಯಯನ ಮಾಡಿದರೆ ಉತ್ತಮ. ಸರ್ಕಾರ ನಿರ್ಧಾರಕ್ಕೆ ಬಂದ ನಂತರ ನಾವು ಮುಂದಿನ ಹೆಜ್ಜೆಯ ಬಗ್ಗೆ ಚಿಂತಿಸಬಹುದು ಎಂದು ಅವರು ಹೇಳಿದರು.
ಇಬ್ಬರೂ ಮುಖ್ಯಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾವೇರಿ ಸಮಸ್ಯೆಯನ್ನು ಬಗೆಹರಿಸುವಂತೆ ಅಂದಿನ ಪ್ರಧಾನಿಗಳಾದ ಮನಮೋಹನ್ ಸಿಂಗ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಪತ್ರ ಬರೆದಿದ್ದೆ ಆದರೆ ವ್ಯರ್ಥವಾಯಿತು.
ಬಿಜೆಪಿ ಜೊತೆಗಿನ ಮೈತ್ರಿಯ ಬಗ್ಗೆ ಕೇಳಿದ ಪ್ರಶ್ನೆಗೆ, ಮುಚ್ಚಿಡಲು ಏನೂ ಇಲ್ಲ. 2024 ರ ಲೋಕಸಭೆ ಚುನಾವಣೆಗೆ ಬಿಜೆಪಿ ಜೊತೆಗಿನ ಮೈತ್ರಿಯ ವಿವರಗಳನ್ನು ಬೆಂಗಳೂರಿನಲ್ಲಿ ಬಹಿರಂಗಪಡಿಸಲಾಗುವುದು ಎಂದು ಅವರು ಹೇಳಿದರು.