(ಪಶ್ಚಿಮಘಟ್ಟ ವಾಯ್ಸ್ ) ಶಿರಸಿ: ಸಾಗರಮಾಲಾ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ- ಕುಮಟಾ ಭಾಗದ ರಾಷ್ಟ್ರೀಯ ಹೆದ್ದಾರಿ 766(E) ಅಗಲೀಕರಣ ಕಾಮಗಾರಿಯನ್ನು ಶೀಘ್ರ ಮುಗಿಸುವ ಹಿನ್ನಲೆಯಲ್ಲಿ ನವೆಂಬರ್ 1 ರಿಂದ ಮೇ 31ವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗುವುದು ಎಂದು ಶಿರಸಿಯ ಸಹಾಯಕ ಆಯುಕ್ತ ಆರ್.ದೇವರಾಜ ಹೇಳಿದರು.
ಮಾಧ್ಯಮಗಳೊಂದಿಗೆ ಶಿರಸಿಯಲ್ಲಿ ಮಾತನಾಡಿದ ಅವರು ಹೆದ್ದಾರಿ ಅಗಲೀಕರಣಕ್ಕೆ ಆರ್.ಎನ್.ಎಸ್.ಕಂಪನಿಗೆ ಗುತ್ತಿಗೆ ನೀಡಲಾಗಿದೆ.
ಸಂಚಾರಕ್ಕೆ ಬ್ರೇಕ್
ಶಿರಸಿ ಕುಮಟಾ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಶಿರಸಿ ವಿಭಾಗ 33 ಕಿಲೋಮೀಟರ್ ರಸ್ತೆಯಲ್ಲಿ 25 ಕಿಲೋಮೀಟರ್ ಅಷ್ಟು ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಬಾಕಿ 6.18 ಕಿಲೋ ಮೀಟರ್ ರಸ್ತೆ ಕಾಮಗಾರಿ ಆಗಬೇಕಿದೆ. ಹಾಗೆಯೇ ದೇವಿಮನೆ ಘಾಟ್ ದಾರಿಯ ರಸ್ತೆಯ ವಿಸ್ತರಣೆಯೂ ಆಗಲಿದೆ. 9 ಸೇತುವೆಗಳ ನಿರ್ಮಾಣ ಆಗಬೇಕಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಆರ್.ಎನ್.ಎಸ್ ಸಂಸ್ಥೆಯ ಮನವಿ ಮೇರೆಗೆ ಈ ಮಾರ್ಗದಲ್ಲಿ ಸಂಚಾರ ಸ್ಥಗಿತವಾಗಲಿದೆ.
2020 ರಲ್ಲೇ ಕಾಮಗಾರಿ ನಡೆಯುವ ಸ್ಥಳದಲ್ಲಿ ವಾಹನ ನಿರ್ಬಂಧಕ್ಕೆ ಅಂದಿನ ಜಿಲ್ಲಾಧಿಕಾರಿ ಆದೇಶ ನೀಡಿದ್ದರು.ಇದೀಗ ಹೆದ್ದಾರಿ ಪ್ರಾಧಿಕಾರವು ಸಹ ಸಂಚಾರ ದಟ್ಟಣೆ ಕಡಿಮೆ ಮಾಡಿ ಕಾಮಗಾರಿ ಮುಗಿಸಲು ವಾಹನ ಸಂಚಾರ ನಿರ್ಬಂಧಿಸುವಂತೆ ಕೋರಿದೆ.ಈಗಾಗಲೇ ಅಗಲೀಕರಣದ 33ಕಿಲೋಮೀಟರ್ ವ್ಯಾಪ್ತಿಯಲ್ಲಿ 26 ಕಿಲೋಮೀಟರ್ ವರೆಗೂ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ವಾಹನಗಳಿಗೆ ನಿರ್ಬಂಧಿಸುತಿದ್ದೇವೆ ಎಂದಿದ್ದಾರೆ.
ಸಂಚಾರದ ಪ್ರಾರಂಭ ಯಾವಾಗ?
ರಸ್ತೆ ಕಾಮಗಾರಿಯ ಸಲುವಾಗಿ ನವೆಂಬರ್ 1 ರಿಂದ 2024 ರ ಮೇ 31ರವರೆಗೆ ಶಿರಸಿ-ಕುಮಟಾ ಮಾರ್ಗದಲ್ಲಿ ಯಾವುದೇ ವಾಹನಗಳೂ ತಿರುಗಾಡುವಂತಿಲ್ಲ. ಬರೋಬ್ಬರಿ 6 ತಿಂಗಳ ಕಾಲ ರಸ್ತೆ ಸಂಚಾರ ಬಂದ್ ಆಗಲಿದೆ. ಜೂನ್ ನಿಂದ ರಸ್ತೆ ಸಂಚಾರ ಆರಂಭವಾಗಲಿದೆ.
ಇನ್ನು ವಾಹನ ಸವಾರರಿಗೆ ಬದಲಿ ವ್ಯವಸ್ಥೆ ಕಲ್ಪಿಸಿದ್ದು ಕುಮಟಾ-ದೊಡ್ಮನೆ-ಸಿದ್ದಾಪುರ-ಶಿರಸಿ ಮಾರ್ಗದಲ್ಲಿ ಲಘು ಗಾತ್ರದ ವಾಹನಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಹೊನ್ನಾವರ-ಮಾವಿನಗುಂಡಿ, ಸಿದ್ದಾಪುರ, ಶಿರಸಿ ಮಾರ್ಗದಲ್ಲಿ ಎಲ್ಲ ತರದ ವಾಹನಗಳಿಗೆ ಅವಕಾಶ ಮಾಡಿಕೊಟ್ಟಿದ್ದು ಶಿರಸಿ-ಯಾಣ-ವಡ್ಡಿ- ಕುಮಟಾ ಮಾರ್ಗದಲ್ಲಿ ಲಘು ಗಾತ್ರದ ವಾಹನಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ,ಶಿರಸಿಯಿಂದ
ಅಂಕೋಲಾ ಶಿರಸಿಯ ಸಂಪರ್ಕಕ್ಕೆ ಯಲ್ಲಾಪುರ ಮಾರ್ಗವನ್ನು, ಹೊನ್ನಾವರ ಶಿರಸಿ ಸಂಪರ್ಕಕ್ಕೆ ಮಾವಿನಗುಂಡಿ ಹಾಗೂ ಕುಮಟಾ ಶಿರಸಿ ಸಂಚಾರಕ್ಕೆ ಸಿದ್ದಾಪುರದ ಬಡಾಳ್ ಘಟ್ಟ ಬಳಸುವುದು ಅನಿವಾರ್ಯವಾಗಿದೆ. ಇನ್ನುಳಿದಂತೆ ವಡ್ಡಿ ಘಟ್ಟವನ್ನು ಲಘುವಾಹನಗಳ ಸಂಚಾರಕ್ಕೆ ಬಳಸಿಕೊಳ್ಳಬಹುದು ಎಂದು ಶಿರಸಿ ವಿಭಾಗಾಧಿಕಾರಿಗಳು ತಿಳಿಸಿದ್ದಾರೆ. ಮಾರಿಕಾಂಬಾ ಜಾತ್ರೆಯ ಸಮಯದಲ್ಲಿ ಕೂಡ ಶಿರಸಿ-ಕುಮಟಾ ಮಾರ್ಗದಲ್ಲಿ ಲಘುವಾಹನಗಳ ಸಂಚಾರ ಮಾತ್ರ ಇರಲಿದೆ.
ಯಲ್ಲಾಪುರ ಮಾರ್ಗವಾಗಿ ಅಂಕೋಲಾ ಮಾರ್ಗದಲ್ಲಿ ಎಲ್ಲ ತರದ ಭಾರಿ ವಾಹನಗಳ ಸಹಿತ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಘಟ್ಟ ಭಾಗದ ಯಾಣ ಮತ್ತು ದೊಡ್ಮನೆ ಮಾರ್ಗದಲ್ಲಿ ಲಘು ವಾಹನಕ್ಕೆ ಮಾತ್ರ ಅವಕಾಶ ನೀಡಿದೆ ಎಂದು ಶಿರಸಿಯ ಸಹಾಯಕ ಆಯುಕ್ತ ಆರ್.ದೇವರಾಜ್ ಮಾಹಿತಿ ನೀಡಿದರು
ವರದಿ :-ಪ್ರದೀಪ್ ಹೆಗಡೆ