ಪಶ್ಚಿಮಘಟ್ಟ ವಾಯ್ಸ್) ಶಿವಮೊಗ್ಗ: ನಾಡಿನ ಬೆಳಕಿಗಾಗಿ ಅಮೂಲ್ಯವಾದ ಹೊಲ, ಗದ್ದೆ, ಮನೆ ಎಲ್ಲವನ್ನೂ ತ್ಯಾಗ ಮಾಡಿದ ಶರಾವತಿ ಹಿನ್ನೀರ ಜನರ ಬದುಕಿಗೆ ಸಂಪರ್ಕದ ಬೆಳ್ಮುಗಿಲಾದ ಕಳಸವಳ್ಳಿ- ಅಂಬಾರಗೋಡ್ಲು ಸೇತುವೆ ಕಾಮಗಾರಿ ಮುಕ್ತಾಯದ ಹಂತ ತಲುಪಿದೆ.
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಕಾಲದಿಂದಲೂ ಈ ಸೇತುವೆ ನಿರ್ಮಾಣದ ಬಗ್ಗೆ ಸಾಕಷ್ಟು ಚರ್ಚೆಯಾಗಿದ್ದರೂ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ನನೆಗುದಿಗೆ ಬಿದ್ದಿತ್ತು. ಹಿನ್ನೀರಲ್ಲಿ ಸೇತುವೆ ನಿರ್ಮಾಣಕ್ಕಾಗಿ ಈ ಭಾಗದ ಜನರಿಂದ ಹಕ್ಕೊತ್ತಾಯ ನಡೆದಿತ್ತು. ಜಿಲ್ಲೆಯ ರಾಜಕೀಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಇಚ್ಛಾಶಕ್ತಿ ಮತ್ತು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪ್ರಯತ್ನದ ಫಲವಾಗಿ 2019ರಲ್ಲಿ ಬೃಹತ್ ಸೇತುವೆ ಕಾಮಗಾರಿ ಪ್ರಾರಂಭವಾಗಿತ್ತು. ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು 464.23 ಕೋಟಿ ರೂ. ವೆಚ್ಚದ ಕಾಮಗಾರಿಯ ಉದ್ಘಾಟನೆ ನೆರವೇರಿಸಿದ್ದರು.
ಕಾಮಗಾರಿ ತ್ವರಿತವಾಗಿ ಆರಂಭವಾಗಿತ್ತಾದರೂ ಬಳಿಕ ಎದುರಾದ ಕೊರೊನಾ ಸಂಕಷ್ಟ ಕಾಲದಲ್ಲಿ ಕೆಲಸಗಾರರ ಕೊರತೆಯಿಂದಾಗಿ ಮಂದಗತಿ ಅನುಭವಿಸಿತ್ತು. ಸೇತುವೆ ಕಾಮಗಾರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಚುರುಕು ಮೂಡಿಸಿದ್ದು, ಕಾಮಗಾರಿಯು ವೇಗ ಪಡೆದುಕೊಂಡಿದೆ. ಸಂಸದ ಬಿ.ವೈ.ರಾಘವೇಂದ್ರ, ಸಾಗರ ಕ್ಷೇತ್ರ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರ ವಿಶೇಷ ಆಸಕ್ತಿಯಲ್ಲಿ ಸೇತುವೆ ಕಾಮಗಾರಿ ಮುಕ್ತಾಯದ ಹಂತ ತಲುಪಿದೆ. ಒಟ್ಟು 2.16 ಕಿಲೋ ಮೀಟರ್ ಉದ್ದ ಮತ್ತು 16 ಮೀಟರ್ ಅಗಲದ 5 ಸ್ಪಾನ್ ಕೇಬಲ್ ಆಧಾರಿತ ಈ ಸೇತುವೆ ರಾಜ್ಯದ ಎರಡನೇಯ ಅತಿ ದೊಡ್ಡ ಸೇತುವೆಯಾಗಿದೆ.
ದಿಲೀಪ್ ಬಿಲ್ಡ್ ಕಂಪನಿಯು ಸೇತುವೆ ಕಾಮಗಾರಿಯ ನಿರ್ವಹಣೆಯ ಹೊಣೆ ಹೊತ್ತಿದೆ. ಹಗಲು ರಾತ್ರಿ ಎನ್ನದೆ ಕೆಲಸ ಭರದಿಂದ ಸಾಗುತ್ತಿದೆ. ಶೇ. 75ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, 2024ರ ವೇಳೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಗಂದೂರು- ಕೊಲ್ಲೂರಿಗೆ ಸಂಪರ್ಕಕೊಂಡಿ
ಲಕ್ಷಾಂತರ ಭಕ್ತರನ್ನು ತನ್ನೆಡೆಗೆ ಸೆಳೆಯುತ್ತಿರುವ ನಿಸರ್ಗರಮಣೀಯ ಸಿಗಂದೂರು ಶ್ರೀ ಚೌಡೇಶ್ವರಿ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬರುವ ಯಾತ್ರಾತ್ರಿಗಳಿಗೆ ಹಿನ್ನೀರ ಈ ಸೇತುವೆ ಅತೀ ಸಮೀಪದ ಸಂಪರ್ಕ ಕೊಂಡಿಯಾಗಿದೆ. ಇದರ ಮಾರ್ಗವನ್ನು 369 ಇ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಮಾಡಲಾಗಿದೆ. ನಿಸರ್ಗದ ಮಡಿಲಲ್ಲಿ ಹಾದುಹೋಗುವ ಈ ಹೆದ್ದಾರಿ ಮಧ್ಯದ ತುಮರಿ, ಬ್ಯಾಕೋಡು, ಸಸಿಗೊಳ್ಳಿ, ಮಳೂರಿನಂತಹ ಗ್ರಾಮೀಣ ಪ್ರದೇಶಗಳು ಕೂಡ ಅಭಿವೃದ್ಧಿಯ ಕನಸುಕಾಣುತ್ತಿವೆ. ಈ ಭಾಗದ ಸುಮಾರು ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಅಲ್ಲದೆ ಪ್ರಸಿದ್ಧ ಯಾತ್ರ ಸ್ಥಳಗಳಿಂದಾಗಿ ಪ್ರವಾಸೋದ್ಯಮವೂ ಗರಿಗೆದರಿಕೊಳ್ಳುತ್ತಿವೆ.
2019 ರಿಂದಲೂ ನೆನೆಗುದಿಗೆ ಬಿದ್ದಿರುವ ಸಿಗಂದೂರು ಸೇತುವೆ ಕಾಮಗಾರಿ ಎಲ್ಲಾ ಅಂದುಕೊಂಡಂತಾದರೆ 2024 ಕ್ಕೆ ಉದ್ಘಾಟನೆಗೊಳ್ಳಲಿದೆ. ಕಾಮಗಾರಿಗಾಗಿ 500 ಕೋಟಿ ರೂ ಮಂಜೂರಾಗಿದ್ದು, ಕೆಲಸ ಚುರುಕು ಪಡೆಯಲಿದೆ. ಶರಾವತಿ ಹಿನ್ನೀರಿನ ಜನರ ಸಂಪರ್ಕ ಕೊಂಡಿಯಾಗಿರುವ ಕಳಸವಳ್ಳಿ-ಅಂಬಾರಗೋಡ್ಲು ಸೇತುವೆ ಮುಕ್ತಾಯದ ಹಂತ ತಲುಪಿದೆ. ರಾಜ್ಯದ ಎರಡನೇ ಅತಿದೊಡ್ಡ ಸೇತುವೆ ಇದಾಗಲಿದೆ. ಸೇತುವೆಯಿಂದಾಗಿ ಸಿಗಂದೂರು-ಕೊಲ್ಲೂರು ಭಾಗದ ಪ್ರವಾಸೋದ್ಯಮವೂ ಅಭಿವೃದ್ಧಿಯಾಗಲಿದೆ.
ಶರಾವತಿ ಹಿನ್ನೀರ ಜನರ ಬಹುದಿನದ ಬೇಡಿಕೆಯಾದ ಸಿಗಂದೂರು ಸೇತುವೆ ಕಾಮಗಾರಿ ಭರದಿಂದ ಸಾಗುತ್ತಿದೆ. ಅಂತಿಮ ಹಂತಕ್ಕೆ ಸಾಗುತ್ತಿರುವ ಕಾಮಗಾರಿ 2024 ನವೆಂಬರ್ ಮುಕ್ತಾಯಗೊಂಡು ಸೇತುವೆ ಲೋಕಾರ್ಪಣೆಗೊಳ್ಳಲಿದೆ. ಎನ್ ಎಚ್ 206 ಬೈಂದೂರು ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ವಿಸ್ತರಣೆಗೆ 500 ಕೋಟಿ ರೂ. ಮಂಜೂರಾಗಿದೆ. ಸಾಗರ, ಸಿಗಂದೂರು, ಕೊಲ್ಲೂರು ಮಧ್ಯೆ ಟೂರಿಸಂ ಗರಿಗೆದರಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಕಳಸವಳ್ಳಿ ಸೇತುವೆಯು ಈ ಭಾಗದ ಜನರಿಕೆ ಬರೀ ಸೇತುವೆಯಲ್ಲ, ಅದೊಂದು ಭಾವನಾತ್ಮಕ ಸಂಪರ್ಕಕೊಂಡಿ. ಹಿನ್ನೀರ ಜನರ ಬಹು ದಿನದ ಬೇಡಿಯಾದ ಈ ಸೇತುವೆ ಮಂಜುರು ಮಾಡಿರುವ ಕೇಂದ್ರ ಸರಕಾರವನ್ನು ಅಭಿನಂದಿಸುತ್ತೇನೆ. ಈಗಾಗಲೆ ಸೇತುವೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ರಾಜ್ಯ ಸರಕಾರದ ಲೋಕೋಪಯೋಗಿ ಸಚಿವರೊಂದಿಗೆ ಚರ್ಚಿಸಿದ್ದು, ಎಲ್ಲಅಧಿಕಾರಿಗಳೊಂದಿಗೆ ಸಮಾಲೋಚಿಸಲಾಗಿದೆ. ಸಿಗಂದೂರು ಸೇತುವೆ ಕಾಮಗಾರಿಗೆ ರಾಜ್ಯ ಸರಕಾರದಿಂದ ಅನುದಾನ ಸೇರಿದಂತೆ ಎಲ್ಲರೀತಿಯ ನೆರವು ನೀಡಲು ಸಿದ್ಧರಿದ್ದೇವೆ ಎಂದು ಗೋಪಾಲಕೃಷ್ಣ ಬೇಳೂರು, ಶಾಸಕರು ತಿಳಿಸಿದ್ದಾರೆ.
ಮೀಟರ್ ಉದ್ದದ 16 ಮೀಟರ್ ಅಗಲದ 5 ಸ್ಪಾನ್ ಹೊಂದಿರುವ ಕೇಬಲ್ ಆಧಾರಿತ ಅತೀ ಉದ್ದವಾದ ಸೇತುವೆಯು ಇದಾಗಿದೆ. ಅಪ್ರೋಚ್ ಮೆಂಟ್ ಸೇರಿ 2.45 ಕಿಲೋ ಮೀಟರ್ ಉದ್ದದ ಸೇತುವೆಯು 2024ರ ನವೆಂಬರ್ ಹೊತ್ತಿಗೆ ಪೂರ್ಣಗೊಳ್ಳಲಿದೆ. ಹಿನ್ನೀರಿನ ಜನರ ಕನಸು ನನಸಾಗುವತ್ತ ಸಾಗಿದ್ದು, ಈ ಸೇತುವೆಯು ಪ್ರವಾಸೋದ್ಯಮ ಬೆಳವಣಿಗೆಯಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ ಎಂದು ಪೀರ್ ಪಾಷಾ, ಸಿಗಂದೂರು ಸೇತುವೆ ಉಸ್ತುವಾರಿ ಎಂಜಿನಿಯರ್ ಹೇಳಿದ್ದಾರೆ.