ಪಶ್ಚಿಮಘಟ್ಟ ವಾಯ್ಸ್ ) ಶಿವಮೊಗ್ಗ: ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಬಿಜೆಪಿ ನಾಯಕ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲು ಮಾಡಲಾಗಿದೆ.
ರಾಗಿಗುಡ್ಡದ ಗಲಭೆ ಖಂಡಿಸಿ ಇಂದು ಜಿಲ್ಲಾ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ರೀತಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಎಫ್ಐಆರ್ ದಾಖಲಿಸಲಾಗಿದೆ.
ಹಸಿರು ಬಣ್ಣ ಕಿತ್ತಾಕಿ ಕೇಸರಿ ಬಣ್ಣ ಬರುವವರೆಗೆ ಬಿಜೆಪಿ ಹೋರಾಟ ಮಾಡುತ್ತದೆ, ಪಾಕಿಸ್ತಾನ ಸೇರಿದಂತೆ ಅಖಂಡ ಭಾರತದ ಕನಸು ಇತ್ತು. ಆದರೆ ದೇಶದ್ರೋಹಿ ಮುಸ್ಲಿಮರು ಇದ್ದಾರೆ ಎನ್ನುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಹಿಂದೂ ಸಮಾಜ ಇವತ್ತಿನ ತನಕ ಕಾನೂನನ್ನು ಕೈಗೆ ತೆಗೆದುಕೊಂಡಿಲ್ಲ. ಹರ್ಷನ ಕೊಲೆಯಾದಾಗ ನಾವು ಲಾಂಗು, ಮಚ್ಚುಗಳನ್ನು ಹಿಡಿದುಕೊಂಡು ಮುಸಲ್ಮಾನರ ಬೀದಿಗಳಿಗೆ ಹೋಗಿದ್ದರೆ, ಮಾರಿ ಜಾತ್ರೆಯಲ್ಲಿ ಕುರಿ ಕಡಿದು ಹಾಕಿದಂಗೆ ಕಡಿದು ಹಾಕಿ ಬಿಡುತ್ತಿದ್ದೇವು. ಆ ಬದುಕು ನಾವು ಮಾಡಲಿಲ್ಲ. ಈ ದೇಶದಲ್ಲಿರುವ ಹಿಂದುಗಳು ಮುಸಲ್ಮಾನರು ಒಟ್ಟಾಗಿ ಇರಬೇಕೆಂಬ ಆಸೆ ಇದೆ ಆದರೆ ಒಟ್ಟಾಗಿರಲು ಇವರು ಮಾಡಲಿಲ್ಲ. ಇಲ್ಲಿರುವ ಹೆಣ್ಣು ಮಕ್ಕಳು ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ರಕ್ತವನ್ನು ಹಂಚಿಕೊಂಡು ಹುಟ್ಟಿದ್ದಾರೆ. ಅವರ ಸುದ್ದಿಗೆ ಬಂದರೆ ಆ ಹೆಣ್ಣು ಮಕ್ಕಳು ಸುಮ್ಮನೆ ಬಿಡಲ್ಲ ನಿಮ್ಮನ್ನು ಕೊಚ್ಚಿ ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ ಪ್ರಚೋದನಕಾರಿ ಭಾಷಣದ ಮೂಲಕ ಕೋಮು ಭಾವನೆ ಕೆರಳಿಸಿದ್ದಾರೆ ಎಂಬ ಆರೋಪ ಹಿನ್ನಲೆ ಈಶ್ವರಪ್ಪ ವಿರುದ್ಧ ಐಪಿಸಿ ಸೆಕ್ಷನ್ 153 ಎ ಮತ್ತು 504 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.