ಪಶ್ಚಿಮಘಟ್ಟ ವಾಯ್ಸ್) ಶಿವಮೊಗ್ಗ, ಅಕ್ಟೋಬರ್ ಮಲೆನಾಡು ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುವ ಮಹತ್ವದ ರೈಲು ಯೋಜನೆ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲು ಮಾರ್ಗವಾಗಿದೆ. ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ಮಾಡಿದ ಈ ರೈಲು ಯೋಜನೆಯ ಕಾಮಗಾರಿ ನಡೆಯುತ್ತಿದೆ. ನೈಋತ್ಯ ರೈಲ್ವೆ ಈ ಕುರಿತು ಅಪ್‌ಡೇಟ್ ಹಂಚಿಕೊಂಡಿದೆ.
ಶಿಕಾರಿಪುರ-ರಾಣೆಬೆನ್ನೂರು (ಹಾವೇರಿ) ನೂತನ ರೈಲು ಮಾರ್ಗದ ಕಾಮಗಾರಿಯನ್ನು ಒಟ್ಟು ಎರಡು ಹಂತಗಳಲ್ಲಿ ಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ ಶಿವಮೊಗ್ಗ-ಶಿಕಾರಿಪುರ ನಡುವೆ ಕಾಮಗಾರಿ ಆರಂಭವಾಗಿದೆ. ನೈಋತ್ಯ ರೈಲ್ವೆ ಸಾಮಾಜಿಕ ಜಾಲತಾಣದಲ್ಲಿ ಕಾಮಗಾರಿಯ ಚಿತ್ರಗಳನ್ನು ಹಂಚಿಕೊಂಡು, ಅಪ್‌ಡೇಟ್ ನೀಡಿದೆ.
ಶಿವಮೊಗ್ಗ-ಶಿಕಾರಿಪುರ ನೂತನ ರೈಲ್ವೆ ಮಾರ್ಗ ಯೋಜನೆ
ಯ ಭಾಗವಾಗಿ ಚಿನ್ನಿಕಟ್ಟೆ ಗ್ರಾಮದಲ್ಲಿ ಸಮತಟ್ಟು ಮತ್ತು ರೋಲಿಂಗ್ ಚಟುವಟಿಕೆಗಳು ಮತ್ತು ನಾರಾಯಣ ಪುರ ಗ್ರಾಮದಲ್ಲಿ ಹಳಿ ನಿರ್ಮಾಣಕ್ಕೆ ಸಂಬಂಧಿಸಿದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದೆ. ಈ ವರ್ಷದ ಫೆಬ್ರವರಿಯಲ್ಲಿ ನರೇಂದ್ರ ಮೋದಿ ಯೋಜನೆಗೆ ಚಾಲನೆ ನೀಡಿದ್ದರು.
ಈ ರೈಲು ಯೋಜನೆಯ ವೆಚ್ಚ ಸುಮಾರು ರೂ. 530.59 ಕೋಟಿಯಾಗಿದೆ. ಈ ಹೊಸ ರೈಲು ಮಾರ್ಗ ಶಿವಮೊಗ್ಗದಿಂದ ಬೆಂಗಳೂರು-ಮುಂಬೈ ನಡುವೆ ನೇರ ಸಂಪರ್ಕವನ್ನು ಒದಗಿಸುತ್ತದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. ಸುಮಾರು 2 ವರ್ಷಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಎರಡು ಹಂತದಲ್ಲಿ ಕಾಮಗಾರಿ; ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಯೋಜನೆಯನ್ನು ಒಟ್ಟು ಎರಡು ಹಂತವಾಗಿ ವಿಭಾಗ ಮಾಡಲಾಗಿದೆ. ಮೊದಲ ಹಂತದಲ್ಲಿ ಶಿವಮೊಗ್ಗ-ಶಿಕಾರಿಪುರ ನಡುವೆ ಹೊಸ ಬ್ರಾಡ್ ಗೇಜ್ ರೈಲು ಮಾರ್ಗ ನಿರ್ಮಾಣವಾಗುತ್ತದೆ. ಮೊದಲ ಹಂತದ ಕಾಮಗಾರಿಗೆ ಚಾಲನೆ ಸಿಕ್ಕಿದೆ.
ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಗೆ ಇದ್ದ ಅಡೆತಡೆ ನಿವಾರಣೆ ಮಾಡಿ, ರೈಲ್ವೆ ಇಲಾಖೆಯೊಂದಿಗೆ ಸಭೆ ನಡೆಸಿ, ಕಾಮಗಾರಿ ಆರಂಭಿಸಲು ಉದ್ದೇಶಿಸಿದ್ದರು. 2023-24ನೇ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ 103 ಕಿ. ಮೀ. ಉದ್ದದ ರೈಲು ಮಾರ್ಗಕ್ಕೆ 150 ಕೋಟಿ ರೂ. ಅನುದಾನ ಘೋಷಣೆ ಮಾಡಿದೆ. ಯೋಜನೆಗಾಗಿ 1,141.29 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶೇ 50:50ರ ಅನುಪಾತದಲ್ಲಿ ಅನುದಾನವನ್ನು ಹಂಚಿಕೆ ಮಾಡಿಕೊಂಡು ಯೋಜನೆಯನ್ನು ಕಾರ್ಯಗತಗೊಳಿಸಲಿವೆ. ಶಿವಮೊಗ್ಗದಿಂದ ಹೊರಡುವ ರೈಲು ಕೋಟೆಗಂಗೂರು ಮೂಲಕ ಕೊನಗವಳ್ಳಿ ಮೂಲಕ ಶಿಕಾರಿಪುರ ಕಡೆಗೆ ಸಂಚಾರ ನಡೆಸಲಿದೆ. ಮಲ್ಲಾಪುರ, ಕೊರಲಹಟ್ಟಿ ಮೂಲಕ ಶಿಕಾರಿಪುರ ತಲುಪುತ್ತದೆ. ಹೊಸ ರೈಲು ಮಾರ್ಗದ ಜೊತೆ ಹೊಸದಾಗಿ ರೈಲು ನಿಲ್ದಾಣವನ್ನು ಸಹ ನಿರ್ಮಾಣ ಮಾಡಲಾಗುತ್ತದೆ.
ಯೋಜನೆಯ 2ನೇ ಹಂತವಾಗಿ ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲು ಮಾರ್ಗ ರಚನೆ ಮಾಡಲಾಗುತ್ತದೆ.
ಈ ಯೋಜನೆಯ ಭೂ ಸ್ವಾಧೀನಕ್ಕಾಗಿ ಶಿಕಾರಿಪುರದಲ್ಲಿ ಕಚೇರಿಯನ್ನು ಸಹ ಸ್ಥಾಪನೆ ಮಾಡಲಾಗಿದೆ. ಈ ಹೊಸ ರೈಲು ಮಾರ್ಗದ ಯೋಜನೆಯಡಿ 100 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗದ ಕೋಟೆಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಡಿಪೋ ಸಹ ನಿರ್ಮಾಣವಾಗುತ್ತಿದೆ. ಶಿಕಾರಿಪುರದಿಂದ ಹೊರಡುವ ರೈಲು ಕಿಟ್ಟದಹಳ್ಳಿ, ಮಾಸೂರು, ತುಮ್ಮಿನಕಟ್ಟೆ, ರಟ್ಟೆಹಳ್ಳಿ, ದಂದ್ಗಿಹಳ್ಳಿ, ಹಲಗೇರಿ ಮೂಲಕ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಲುಪಲಿದೆ. 2ನೇ ಹಂತದ ಕಾಮಗಾರಿಗೆ ಸಹ ಭೂ ಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದೆ. ಕೆಲವು ಕಡೆ ರೈತರು ಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ನಡೆಯುತ್ತಿದೆ.
ಯೋಜನೆಗೆ ಭೂಮಿ ನೀಡಲು ತರಕಾರು ತೆಗೆದ ರೈತರ ಜೊತೆ ಸರಣಿ ಸಭೆಗಳನ್ನು ನಡೆಸಿ, ಪರಿಹಾರದ ಭರವಸೆ ನೀಡಿ ಭೂ ಸ್ವಾಧೀನಕ್ಕೆ ಇದ್ದ ಅಡೆತಡೆ ನಿವಾರಣೆ ಮಾಡಲಾಗಿದೆ. ಈ ನೂತನ ರೈಲು ಮಾರ್ಗದಲ್ಲಿ 22 ಪ್ರಮುಖ ಸೇತುವೆ, 62 ಕೆಳ ಸೇತುವೆ, 20 ರಸ್ತೆ ಸೇತುವೆಗಳು ನಿರ್ಮಾಣವಾಗಬೇಕಿದೆ.