ಪಶ್ಚಿಮಘಟ್ಟ ವಾಯ್ಸ್) ಮಡಿಕೇರಿ,ಅಕ್ಟೋಬರ್:-ತಿಂಗಳಬೀಸಿ ಬರುವ ತಂಗಾಳಿ ನಡುವೆ ಸಿಂಚನಗೈಯ್ಯುವ ಮಂಜು, ಮೈಮನ ಮುದಗೊಳಿಸುವ ಚಳಿ, ಕಣ್ಣು ಹಾಯಿಸಿದುದ್ದಕ್ಕೂ ಹಸಿರಿನಿಂದ ಆವೃತವಾದ ಬೆಟ್ಟಗಳು ಅದರ ನಡುವಿನ ಕಂದಕ, ಹೀಗೆ ಒಂದೇ ಎರಡೇ, ವರ್ಣಿಸುತ್ತಾ ಹೋದರೆ ಮುಗಿಯುವುದೇ ಇಲ್ಲ. ಇದು ಕಾವೇರಿ ನದಿ ಸೃಷ್ಟಿಯ ತಾಣ ಕೊಡಗಿನ ತಲಕಾವೇರಿಯ ಸುಂದರ ದೃಶ್ಯಗಳು.
ಕಾವೇರಿ ಉಗಮ ಸ್ಥಾನ ತಲಕಾವೇರಿ ಒಂದು ದೈವಿಕ ತಾಣವಾಗಿದ್ದು, ಕವೇರ ಮುನಿಯ ಮಗಳು ಕಾವೇರಿ ಲೋಕ ಕಲ್ಯಾಣಕ್ಕೆ ನದಿಯಾಗಿ ಇಲ್ಲಿಂದಲೇ ಹರಿದಳು ಎಂಬುದು ಗೊತ್ತಿರುವ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಅಷ್ಟೇ ಅಲ್ಲದೆ ಪ್ರತಿ ವರ್ಷ ಈಕೆ ಜಲರೂಪದಲ್ಲಿ ಜನರಿಗೆ ದರ್ಶನ ನೀಡುತ್ತಾಳೆ ಎಂಬ ನಂಬಿಕೆಯಿದ್ದು ಅದರಂತೆ ಪ್ರತಿ ವರ್ಷವೂ ತುಲಾಸಂಕ್ರಮಣದಂದು ಇಲ್ಲಿನ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಹರಿದು ನೆರೆದ ಭಕ್ತರನ್ನು ಪಾವನಗೊಳಿಸುತ್ತಾಳೆ.
ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆದರೆ ಕಾವೇರಿ ಸೃಷ್ಟಿಯ ತಲಕಾವೇರಿ ನಿಸರ್ಗ ಸುಂದರ ತಾಣ ಎನ್ನುವುದು ಇಲ್ಲಿಗೆ ತೆರಳುವ ಪ್ರತಿಯೊಬ್ಬರ ಅರಿವಿಗೆ ಬಂದೇ ಬರುತ್ತದೆ. ನಿಜ ಹೇಳಬೇಕೆಂದರೆ ಕೊಡಗು ಎನ್ನುವುದೇ ನಿಸರ್ಗ ಸುಂದರವಾಗಿದ್ದು, ಕಾಫಿ, ಕರಿಮೆಣಸು, ಏಲಕ್ಕಿ ತೋಟಗಳ ಭತ್ತದ ಬಯಲಿನಿಂದ ಆವೃತವಾಗಿದ್ದು, ದಟ್ಟಕಾಡಿನ ಬೆಟ್ಟಗುಡ್ಡಗಳನ್ನು ಹೊಂದಿ ನೋಡುಗರ ಕಣ್ಣನ್ನು ಹಸಿರಾಗಿಸಿ ಮೈಮನವನ್ನು ಅರಳಿಸುತ್ತದೆ. ಇಂತಹ ಸುಂದರ ಜಿಲ್ಲೆಗೆ ತಲಕಾವೇರಿ ಕಳಸದಂತೆ ಗೋಚರಿಸುತ್ತದೆ.
ವನ್ಯಜೀವಿಗಳ ಆಸರೆಯ ತಾಣ
ತಲಕಾವೇರಿ ವನ್ಯಜೀವಿ ಅಭಯಾರಣ್ಯವಾಗಿದೆ. ಇದು ಪಟ್ಟಿಕಾಡ್ ಮತ್ತು ಪಡಿನಾಲ್ಕುನಾಡು ಎಂಬ ಮೀಸಲು ಅರಣ್ಯವನ್ನು ಹೊಂದಿದೆ. ಅಷ್ಟೇ ಅಲ್ಲದೆ ಮೈಸೂರು ಆನೆ ಯೋಜನಾ ಪರಿವ್ಯಾಪ್ತಿಗೂ ಸೇರಿರುವುದು ವಿಶೇಷವಾಗಿದೆ. ಈ ಅರಣ್ಯವು ಆನೆ, ಪುನುಗುಬೆಕ್ಕು, ಕಾಡೆಮ್ಮೆ, ಕಡವೆ, ಜಿಂಕೆ, ಹೆಬ್ಬಾವು ಸೇರಿದಂತೆ ಹಲವು ಪ್ರಾಣಿ ಪಕ್ಷಿಗಳಿಗೆ ಆಸರೆಯ ತಾಣವಾಗಿದೆ. ಈ ಪೈಕಿ ಸುಮಾರು ಹದಿನಾರು ಬಗೆಯ ಪಕ್ಷಿಗಳು ಇಲ್ಲಿರುವುದು ಗಮನಾರ್ಹವಾಗಿದೆ.
ತಲಕಾವೇರಿ ಅಭಯಾರಣ್ಯದ ಬಗ್ಗೆ ಹೇಳಬೇಕೆಂದರೆ ನಾಗರಹೊಳೆ ಅರಭಯಾರಣ್ಯ, ಕೇರಳದ ವಯನಾಡು, ಅರಾಲಂ ವನ್ಯಜೀವಿ ಅಭಯಾರಣ್ಯಗಳ ನಡುವಿನ ಸಂಪರ್ಕ ಸೇತುವಾಗಿದ್ದು, ಈ ಅರಣ್ಯಗಳ ನಡುವೆ ಆನೆಗಳ ಸಂಚಾರಕ್ಕೆ ಇದು ಸಹಕಾರಿಯಾಗಿದೆ. ಬೇರೆ ಅರಣ್ಯಗಳಲ್ಲಿ ನೀರು ಆಹಾರ ಸಮಸ್ಯೆಯಾದಾಗ ವನ್ಯಪ್ರಾಣಿಗಳು ಇಲ್ಲಿಗೆ ಬರುತ್ತವೆ ಕಾರಣ ಇದು ಜಲಾನಯನ ಪ್ರದೇಶವಾಗಿದ್ದು, ಈ ಅರಣ್ಯದಲ್ಲಿ ದೊಡ್ಡಹೊಳೆ,ನಿಡ್ಯಮಲೆ ಹೊಳೆ, ಬೇಟೆ ಮಲೆ ಹೊಳೆ, ಕೊಮ್ಮೆಕೊಲ್ಲಿ ಹೊಳೆ, ಮುಂದ್ರ ಹೊಳೆಗಳು ಹರಿಯುತ್ತಿದ್ದು, ಇದೆಲ್ಲವೂ ಪ್ರಾಣಿ ಪಕ್ಷಿಗಳಿಗೆ ಆಸರೆಯಾಗಿವೆ.
ಸೂಕ್ಷ್ಮ ಪರಿಸರ ತಾಣ ತಲಕಾವೇರಿ
ತಲಕಾವೇರಿ ಅಭಯಾರಣ್ಯವು ಹಲವು ಜೀವವೈವಿಧ್ಯವನ್ನು ಹೊಂದಿದ್ದು, ಈ ಸುಂದರ ಭೌಗೋಳಿಕ ಪ್ರದೇಶವನ್ನು ರಕ್ಷಿಸುವ ಸಲುವಾಗಿ ಮತ್ತು ವನ್ಯ ಜೀವಿಗಳ ಉಳಿವಿಗಾಗಿ ಸೂಕ್ಷ್ಮ ಪರಿಸರ ತಾಣವನ್ನಾಗಿ ಘೋಷಿಸಲಾಗಿದ್ದು, 1986ರ ಪರಿಸರ ಸಂರಕ್ಷಣಾ ಕಾಯಿದೆ ಅನ್ವಯ ಸುತ್ತಮುತ್ತಲ ಒಂದು ಕಿ.ಮೀ ನಿಂದ ಹದಿನಾರು ಕಿ.ಮೀ ವರೆಗಿನ ಪ್ರದೇಶದಲ್ಲಿ ಕೈಗಾರಿಕೆಗಳಿಗೆ ನಿಷೇಧ ಹೇರಲಾಗಿದೆ. ಆದರೆ ಇದು ಕರ್ನಾಟಕಕ್ಕೆ ಮಾತ್ರ ಅನ್ವಯವಾಗಿದ್ದು, ಕೇರಳಕ್ಕೆ ಅನ್ವಯಿಸುವುದಿಲ್ಲ.
ಇನ್ನು ತಲಕಾವೇರಿ ಅರಣ್ಯ ಪ್ರದೇಶಗಳು ದಟ್ಟವಾಗಿರುವುದರಿಂದಲೇ ಇಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ವರ್ಷದ ಹೆಚ್ಚಿನ ದಿನಗಳಲ್ಲಿ ಮಳೆ ಸುರಿಯುತ್ತಿರುತ್ತದೆ. ದಟ್ಟ ಕಾಡುಗಳ, ಬೆಟ್ಟಗುಡ್ಡಗಳ ನಡುವಿನ ಗ್ರಾಮಗಳಲ್ಲಿ ಇವತ್ತಿಗೂ ನೆಲೆ ನಿಂತಿದ್ದು, ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ಜೀವನ ಸಾಗಿಸುವುದು ಅಷ್ಟು ಸುಲಭವಲ್ಲ. ಆದರೂ ಆಗಿನಿಂದಲೂ ನೆಲೆ ನಿಂತ ಕುಟುಂಬಗಳು ಜೇನು ಕೃಷಿ, ಏಲಕ್ಕಿ, ಕಾಫಿ, ಕರಿಮೆಣಸು ಬೆಳೆಯುತ್ತಾರೆ. ಆದರೆ ಮಳೆ ಹೆಚ್ಚಾದಷ್ಟೂ ಕೆಲವೊಮ್ಮೆ ಕೃಷಿಯೂ ಕೈಹಿಡಿಯುವುದಿಲ್ಲ. ಹೀಗಾಗಿ ಸಂಕಷ್ಟದ ಜೀವನ ಇಲ್ಲಿನವರದ್ದಾಗಿದೆ.
ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆಯಾಗದಿರಲಿ
ಕೊಡಗಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತಿದ್ದಂತೆಯೇ ತಲಕಾವೇರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಇದೊಂದು ಧಾರ್ಮಿಕ ಕ್ಷೇತ್ರ ಮಾತ್ರವಲ್ಲದೆ ಸುಂದರ ಪ್ರಕೃತಿಯ ತಾಣವಾಗಿರುವುದರಿಂದ ಕೆಲವರು ಮೋಜು ಮಸ್ತಿಗಾಗಿ ಇತ್ತ ಬರುತ್ತಾರೆ. ಇದರಿಂದ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಆದ್ದರಿಂದ ಇಲ್ಲಿಗೆ ಬರುವ ಪ್ರವಾಸಿಗರು ಇಲ್ಲಿನ ನಿಯಮಗಳನ್ನು ಪಾಲಿಸಿದರೆ ಕ್ಷೇತ್ರದ ಶುಚಿತ್ವ ಮತ್ತು ಪಾವಿತ್ರ್ಯತೆ ಕಾಪಾಡಲು ಸಾಧ್ಯವಾಗಲಿದೆ.
ಇನ್ನು ತಲಕಾವೇರಿಯಲ್ಲಿ ಪವಿತ್ರ ಕುಂಡಿಕೆಯಲ್ಲದೆ, ಗಣಪತಿ, ಅಗಸ್ತ್ಯೇಶ್ವರ ದೇವಾಲಯ ಹಾಗೂ ಜ್ಯೋತಿ ಮಂಟಪವಿದೆ. ಬ್ರಹ್ಮಕುಂಡಿಕೆ ಮುಂದಿನ ಕೊಳದಲ್ಲಿ ಮುಳುಗಿ ಕಾವೇರಿ ತೀರ್ಥನ್ನು ಮೈಮೇಲೆ ಹಾಕಿಸಿಕೊಂಡರೆ ಜೀವನ ಪಾವನವಾಗುತ್ತದೆ ಎಂಬ ನಂಬಿಕೆಯೂ ಇದೆ. ತಲಕಾವೇರಿಗೆ ಭಾಗಮಂಡಲದಿಂದ ರಸ್ತೆ ಮಾರ್ಗವಲ್ಲದೆ, ಕಾಲು ನಡಿಗೆಯ ಹಾದಿಯೂ ಇದ್ದು ಇದರ ಮೂಲಕ ತೆರಳಿದರೆ ಹತ್ತಾರು ಸುಂದರ ದೃಶ್ಯಗಳು ನೋಡಲು ಸಿಗಲಿವೆ. ತಲಕಾವೇರಿಯಲ್ಲಿ ಹಲವು ವ್ಯೂ ಪಾಯಿಂಟ್ ಗಳಲ್ಲದೆ ಭೀಮನಕಲ್ಲು, ಸಲಾಂಕಟ್ಟೆ ಎಂಬ ವಿಶೇಷ ತಾಣಗಳು ಇಲ್ಲಿದ್ದು ಎಲ್ಲವೂ ಗಮನಸೆಳೆಯುತ್ತವೆ. ಹೀಗಾಗಿ ಈ ಬಾರಿ ಕಾವೇರಿ ತೀರ್ಥೋದ್ಭವಕ್ಕೆ ತೆರಳಿದವರು ತಲಕಾವೇರಿ ಸೌಂದರ್ಯವನ್ನು ಸವಿಯಲು ಮರೆಯದಿರಿ.