PGK NEWS( ಪಶ್ಚಿಮಘಟ್ಟ ವಾಯ್ಸ್
ಚಿಕ್ಕಮಗಳೂರು, ಅಕ್ಟೋಬರ್ 26: ಕುತ್ತಿಗೆಯಲ್ಲಿ ಅಸಲಿ ಹುಲಿಯ ಉಗುರು ಇರುವ ಲಾಕೆಟ್ ಧರಿಸಿದ ಆರೋಪದ ಮೇಲೆ ಕನ್ನಡ ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧವಾಗುತ್ತಿದ್ದಂತೆ, ಅರಣ್ಯ ಇಲಾಖೆಗೆ ಸಾಲು ಸಾಲು ದೂರುಗಳು ದಾಖಲಾಗುತ್ತಿದೆ. ಕನ್ನಡ ಚಿತ್ರರಂಗದ ನಟರು, ಗಣ್ಯರು ಸೇರಿದಂತೆ ಅನೇಕರ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ಆರಂಭವಾಗಿದೆ.
ಇದೀಗ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಈ ಪ್ರಕರಣಗಳು ಒಂದೊಂದಾಗಿಯೇ ಹೊರಬರುತ್ತಿದ್ದು, ಹುಲಿ ಉಗುರಿನ ಲಾಕೆಟ್ ಹೊಂದಿದ್ದ ಇಬ್ಬರು ಅರ್ಚಕರನ್ನು ಬಾಳೆಹೊನ್ನೂರು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಗ್ರಾಮದ ಮಾರ್ಕಂಡೇಶ್ವರ ದೇವಾಲಯದ ಅರ್ಚಕರಾದ ಕೃಷ್ಣಾನಂದ ಹೊಳ್ಳ ಹಾಗೂ ನಾಗೇಂದ್ರ ಜೋಯಿಸ್ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು, ಹುಲಿ ಉಗುರಿನ ಮೂರು ಲಾಕೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಅರ್ಚಕರ ಬಳಿ ಹುಲಿ ಉಗುರು ಇರುವ ಬಗ್ಗೆ ಇ-ಮೇಲ್ ಮೂಲಕ ಅರಣ್ಯ ಇಲಾಖೆಗೆ ವ್ಯಕ್ತಿಯೊಬ್ಬರು ದೂರು ಸಲ್ಲಿಸಿದ್ದು, ಇಬ್ಬರು ಅರ್ಚಕರ ಬಳಿ ಹುಲಿ ಉಗುರಿನ ಲಾಕೆಟ್ ಇರುವುದಾಗಿ ವಿವರವಾಗಿ ತಿಳಿಸಿದ್ದರು. ದೂರಿನ ಆಧಾರದ ಮೇಲೆ ಪ್ರಕರಣ ಕೈಗೆತ್ತಿಕೊಂಡ ಅಧಿಕಾರಿಗಳು ಇಬ್ಬರ ಮನೆಗೂ ಭೇಟಿ ನೀಡಿ ತಪಾಸಣೆ ನಡೆಸಿದಾಗ ಹುಲಿ ಉಗುರಿರುವ ಮೂರು ಲಾಕೆಟ್‌ಗಳು ಪತ್ತೆಯಾಗಿದೆ. ಸದ್ಯ ಅರ್ಚಕರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.