PGK NEWS ಉಡುಪಿ: ನೇಜಾರು ಸಮೀಪ ತಾಯಿ ಮತ್ತು ಮೂವರು ಮಕ್ಕಳ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಪೊಲೀಸರು ಕೇರಳ ಸೇರಿದಂತೆ ಹಲವು ಕಡೆ ಸಂಶಯಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನ.12ರಂದು ದುಷ್ಕರ್ಮಿ ನಾಲ್ವರನ್ನು ಕೊಲೆ ಮಾಡಿದ ಬಳಿಕ ರಿಕ್ಷಾ ಮತ್ತು ಬೈಕ್ ಗಳಲ್ಲಿ ಸಂತೆಕಟ್ಟೆಯಿಂದ ಉಡುಪಿ, ಉಡುಪಿಯಿಂದ ಅಂಬಲಪಾಡಿ ಅಲ್ಲಿಂದ ಉದ್ಯಾವರ ನಂತರ ಕಟಪಾಡಿ ಮೂಲಕವಾಗಿ ಕೇರಳಕ್ಕೆ ಪರಾರಿಯಾಗಿದ್ದಾನೆ ಎಂಬ ಮಾಹಿತಿಯಂತೆ ಒಂದು ಪೊಲೀಸ್ ತಂಡ ಕೇರಳಕ್ಕೆ ತೆರಳಿತ್ತು.
ಅದರಂತೆ ಕೇರಳದ ಕೊಟ್ಟಾಯಂ ಎಂಬಲ್ಲಿ ಓರ್ವ ಶಂಕಿತ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಆದರೆ ಇದನ್ನು ಉಡುಪಿಯ ಉನ್ನತ ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದು ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಐದಾರು ಮಂದಿಯನ್ನು ಸಂಶಯದ ಮೇಲೆ ವಶಕ್ಕೆ ಪಡೆದುಕೊಂಡು ವಿಚಾರ ನಡೆಸಲಾಗುತ್ತಿದೆ. ಇದರಲ್ಲಿ ಕೊಲೆ ಆರೋಪಿ ಯಾರು ಎಂಬುದು ಈಗಲೇ ದೃಢಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಟ್ಟು ಏಳು ತಂಡಗಳನ್ನು ರಚನೆ ಮಾಡಲಾಗಿದ್ದು, ಈ ತಂಡಗಳು ಶಿವಮೊಗ್ಗ, ಬೆಂಗಳೂರು, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ತೆರಳಿ ಶೋಧ ಕಾರ್ಯ ನಡೆಸಿತ್ತು. ಅಲ್ಲಿ ಕೆಲವು ಸಂಶಯಾಸ್ಪದ ವ್ಯಕ್ತಿಗಳನ್ನು ಈ ತಂಡ ವಶಕ್ಕೆ ಪಡೆದು ವಿಚಾರ ನಡೆಸುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಕೊಲೆ ಆರೋಪಿ ಯಾರು ಎಂಬುದು ಇನ್ನು ದೃಢಪಟ್ಟಿಲ್ಲ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.