PGK NEWS( ಪಶ್ಚಿಮ ಘಟ್ಟ ವಾಯ್ಸ್).ಶಿವಮೊಗ್ಗ: ನಮ್ಮಂತವರು ಕೆಲವೊಮ್ಮೆ ಮಾತನಾಡುವಾಗ ಹುಷಾರಾಗಿ ಇರಬೇಕಾಗುತ್ತದೆ. ಅದನ್ನು ಯಾವ ರೀತಿಯಲ್ಲಿ ಹೇಳಿದ್ದರೆಂದು ಅವರೇ ಉತ್ತರ ಕೊಡಬೇಕಾಗುತ್ತದೆ. ನಾನು ಹೇಳುವುದಕ್ಕೆ ಹೋಗಲ್ಲ. ಆದರೆ ಹುಷಾರಾಗಿರಬೇಕಾಗುತ್ತದೆ. ಜಮೀರ್ ಅವರು ಸಮಜಾಯಿಶಿ ನೀಡುವುದು ಒಳ್ಳೆಯದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಜಾತ್ಯತೀತವಾಗಿ, ಧರ್ಮಾತೀತವಾಗಿ ಒಳ್ಳೆಯ ಉದ್ದೇಶಕ್ಕೆ ಕೆಲಸ ಮಾಡುತ್ತಿದೆ. ಒಳ್ಳೆಯ ಮನೋಭಾವನೆ ಇಟ್ಟುಕೊಂಡು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಅದನ್ನು ಮಾತ್ರ ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದಿಲ್ಲ ಎಂದರು.
ಇಂತಹ ಹೇಳಿಕೆಗಳಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ. ಜಮೀರ್ ಯಾವುದೋ ಉದ್ದೇಶದಿಂದ ಹೇಳಿಲ್ಲ. ಜಾತ್ಯಾತೀತವಾಗಿ ಮಾಡಿದ್ದೇವೆ ಎನ್ನೋದನ್ನು ಹೇಳಲು ಹೋಗಿ ಹೀಗೆ ಹೇಳಿದ್ದಾರೆ. ಧರ್ಮದ ಹೆಸರಲ್ಲಿ ಹೇಳಿರುವುದಕ್ಕೆ ಹುಷಾರಾಗಿ ಹೇಳಬೇಕು. ಆ ರೀತಿ ಅವರ ಮನಸ್ಸಲ್ಲಿನಿಲ್ಲ. ಹೇಳಿಕೆಯು ಬಂದಾಯ್ತು ಮಾಧ್ಯಮದವರು ತೋರಿಸಿಯಾಯ್ತು. ಅದನ್ನು ಬೇರೆ ಬೇರೆ ರೀತಿಯಲ್ಲಿ ವಿಶ್ಲೇಷಣೆ ಆಗಿರುವುದರಿಂದ ಅದಕ್ಕೆ ನಾವು ಉತ್ತರ ಕೊಡಬೇಕಾಗುತ್ತದೆ. ಜವಾಬ್ದಾರಿಯಿಂದ ಇರಬೇಕಾಗುತ್ತದೆ ಎಂದು ಮಧು ಬಂಗಾರಪ್ಪ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲೂ ಗೆಲ್ಲುತ್ತೇವೆ. ತೆಲಂಗಾಣದಲ್ಲೂ ಗೆಲ್ಲುತ್ತೇವೆ. ನಾನು ತೆಲಂಗಾಣಕ್ಕೆ ಹೋಗಿ ಬಂದಿದ್ದೇನೆ. ತೆಲಂಗಾಣದಲ್ಲಿ ಎರಡುವರೆ ದಿನ ಇದ್ದೆ. ಅಲ್ಲೂ ಕೂಡ ಒಳ್ಳೆಯ ವಾತಾವರಣವಿದೆ. ಅಲ್ಲೂ ಕೂಡ ಒಳ್ಳೆಯ ಕಾರ್ಯಕ್ರಮಗಳನ್ನು ಬಡವರ ಪರ ಕೊಟ್ಟಿದ್ದಾರೆ. ಹಾಗಾಗಿ ಅಲ್ಲಿಯು ನಾವು ಗೆಲ್ಲುತ್ತೇವೆ. ಪಂಚರಾಜ್ಯದಲ್ಲೂ ಉತ್ತಮ ವಾತಾವರಣವಿದೆ. ಒಟ್ಟಾರೆ ಬಿಜೆಪಿ ವಿರುದ್ಧವಾಗಿ ಅಲೆಯಿದೆ. ಕಾಂಗ್ರೆಸ್ ಪರವಾಗಿ ಜನರಲ್ಲಿ ವಿಶ್ವಾಸವಿದೆ. ವಿಶ್ವಾಸವಿದ್ದಾಗ ಸ್ವಾಭಾವಿಕವಾಗಿ ಮತಗಳು ಪಡೆದುಕೊಳ್ಳಲು ಸುಲಭವಾಗುತ್ತದೆ ಎಂದರು.
ರಾಜ್ಯದ ವಸತಿ ಸಚಿವ ಜಮೀರ್ ತೆಲಂಗಾಣದ ಚುನಾವಣಾ ಪ್ರಚಾರ ಸಭೆಯಲ್ಲಿ ಸಾಂವಿಧಾನಿಕ ಸ್ಪೀಕರ್ ಹುದ್ದೆಗೆ ಧರ್ಮದ ಲೇಪನ ಹಚ್ಚಿ ತಮ್ಮ ಸಾಂವಿಧಾನಿಕ ಹುದ್ದೆಯನ್ನು ದುರ್ಬಳಕೆ ಮಾಡಿಕೊಳ್ಳುವ ಜೊತೆಗೆ ರಾಜ್ಯದ ಜನರಿಗೆ ಅಪಮಾನ ಮಾಡಿದ್ದಾರೆ. ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿದ್ದು ಜಮೀರ್ ಅಹ್ಮದ್ ನೀಡಿರುವ ಇಂತಹ ಹೇಳಿಕೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗುವ ಎಲ್ಲಾ ಸಾಧ್ಯತೆ ಇದೆ. ರಾಜ್ಯದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಹೇಳಿಕೆ ನೀಡಿರುವ ಅವರನ್ನು ತಕ್ಷಣ ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಇಲ್ಲವಾದಲ್ಲಿ ಬಿಜೆಪಿ ವತಿಯಿಂದ ಇನ್ನಷ್ಟು ಉಗ್ರವಾದ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.