ಪಶ್ಚಿಮಘಟ್ಟ ವಾಯ್ಸ್) ಕಾರವಾರ: ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳು, ದೇವಾಲಯಗಳು ಹಾಗೂ ಬೀಚ್‌ಗಳಿದ್ದು ಇವುಗಳೆಲ್ಲವನ್ನೂ ಪ್ರವಾಸೋದ್ಯಮ ದೃಷ್ಠಿಯಿಂದ ಇನ್ನಷ್ಟು ಅಭಿವೃಧ್ದಿಪಡಿಸಲು ಅತೀ ಹೆಚ್ಚಿನ ಅವಕಾಶಗಳಿದ್ದು,ಈ ಅವಕಾಶಗಳನ್ನು ಬಳಸಿಕೊಂಡು ಜಿಲ್ಲೆಯನ್ನು ರಾಜ್ಯದಲ್ಲಿಯೇ ಅತ್ಯುತ್ತಮ ಪ್ರವಾಸಿ ಜಿಲ್ಲೆಯನ್ನಾಗಿ ರೂಪಿಸಲು ವಿವಿಧ ಅಭಿವೃದ್ದಿ ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗುವಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನೀಡಿದರು.
ಜಿಲ್ಲೆಯ ಪ್ರವಾಸಿ ತಾಣಗಳನ್ನು ಮತ್ತಷ್ಟು ಅಭಿವೃದ್ದಿಪಡಿಸಿ, ಉದ್ಯೋಗವಕಾಶಗಳ ಸೃಷ್ಠಿಯ ಜೊತೆಗೆ ಪ್ರವಾಸೋದ್ಯಮ ಚಟುವಟಿಕೆಗಳ ಅಭಿವೃದ್ದಿಗೆ ಆದಾಯ ಕ್ರೂಡೀಕರಿಸಲು ಸಹ ಸಾಧ್ಯವಿದೆ. ಗೋವಾ ರಾಜ್ಯಕ್ಕಿಂತಲೂ ಉತ್ತಮವಾದ ಬೀಚ್‌ಗಳು ಜಿಲ್ಲೆಯಲ್ಲಿದ್ದು ಅವುಗಳನ್ನು ಗುರುತಿಸಿ, ಅಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿ, ಪ್ರವಾಸಿಗರಿಗೆ ಆಕರ್ಷಣಿಯವನ್ನಾಗಿ ಮಾಡಬೇಕು ಎಂದರು.
ಕಾರವಾರದ ರವೀಂದ್ರನಾಥ ಕಡಲತೀರವನ್ನು ಇನ್ನಷ್ಟು ಸ್ವಚ್ಛಗೊಳಿಸಿ, ಬೀಚ್ ನಲ್ಲಿ ಹಸಿ ಮತ್ತು ಒಣ ಕಸ ಹಾಕಲು ಪ್ರತ್ಯೆಕ ಕಸದ ಡಬ್ಬಿಗಳನ್ನು ಅಳವಡಿಸಬೇಕು. ಪ್ರವಾಸಿಮಿತ್ರರನ್ನು ನಿಯೋಜಿಸಿ, ಬೀಚ್ ಗೆ ಆಗಮಿಸುವ ಪ್ರವಾಸಿಗರಿಗೆ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳ ಕುರಿತು ಮಾಹಿತಿ ನೀಡಿ, ಜಿಲ್ಲೆಯ ಇತರೆ ಪ್ರವಾಸಿ ಕೇಂದ್ರಗಳ ಕುರಿತು ಕಿರು ಮಾಹಿತಿ ಪುಸ್ತಕಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ಬೀಚ್ ನಲ್ಲಿ ರಾತ್ರಿಯ ವೇಳೆ ಬೆಳಕಿನ ಕೊರತೆಯಾಗದಂತೆ ಹೆಚ್ಚುವರಿಯಾಗಿ ಲೈಟ್‌ಗಳನ್ನು ಅಳವಡಿಸಬೇಕು. ಪ್ರವಾಸಿಗರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಅಳವಡಿಸಬೇಕು, ಮಯೂರ ವರ್ಮ ವೇದಿಕೆಯನ್ನು ವ್ಯವಸ್ಥಿತ ರೀತಿಯಲ್ಲಿ ಅಭಿವೃಧ್ದಿಗೊಳಿಸಲು ಮುಂದಾಗಬೇಕು ಎಂದರು.
ಬೀಚ್‌ನಲ್ಲಿ ಮತ್ತು ವಾರ್ ಶಿಪ್ ಮ್ಯೂಸಿಯಂ ಬಳಿ ಹೆಚ್ಚುವರಿಯಾಗಿ ಸ್ವಚ್ಛತಾ ಮತ್ತು ಭದ್ರತಾ ಸಿಬ್ಬಂದಿ ನಿಯೋಜಿಸಬೇಕು. ವಾರ್ ಶಿಪ್ ದುರಸ್ತಿ ಕುರಿತಂತೆ ಆದಷ್ಟು ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಟುಫಲೋವ್ ಯುದ್ದ ವಿಮಾನ ಅಳವಡಿಕೆ ಕಾರ್ಯ ಮುಕ್ತಾಯವಾದ ನಂತರ ಈ ಎರಡೂ ಸ್ಥಳಗಳ ವೀಕ್ಷಣೆಗೆ ಒಂದೇ ದರ ನಿಗಧಿಪಡಿಸಬೇಕು ಹಾಗೂ ರಾಕ್ ಗಾರ್ಡನ್ ದುರಸ್ತಿಗೆ ಆದ್ಯತೆ ನೀಡಬೇಕು ಎಂದರು.
ಜಿಲ್ಲೆಯ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಶಾಶ್ವತ ಆದಾಯ ಬರುವಂತಹ ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು ಅಗತ್ಯವಿರುವೆಡೆಗಳಲ್ಲಿ ಪೊಟೋಗ್ರಫಿ, ಸ್ಕೂಬಾ ಡೈವಿಂಗ್ ಮತ್ತಿತರ ಚಟುವಟಿಕೆಗಳಿಗೆ ದರ ನಿಗಧಿಪಡಿಸಿ ಅಗತ್ಯ ಅನುಮತಿಯನ್ನು ನೀಡುವಂತೆ ತಿಳಿಸಿದರು.
ಪ್ರವಾಸಿ ತಾಣಗಳಲ್ಲಿ ಸೂಕ್ತ ಎಚ್ಚರಿಕೆ ಬೋರ್ಡ್ಗಳನ್ನು ಅಳವಡಿಸಬೇಕು, ಅಗತ್ಯವಿರುವಡೆಗಳಲ್ಲಿ ಜೀವ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಿ ಅವರಿಗೆ ಅಗತ್ಯ ರಕ್ಷಣಾ ಉಪಕರಣಗಳನ್ನು ಒದಗಿಸಬೇಕು. ಜಿಲ್ಲೆಯಲ್ಲಿರುವ ಯಾತ್ರಿ ನಿವಾಸಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ರವೀಂದ್ರನಾಥ ಕಡಲತೀರದಲ್ಲಿ ಜನವರಿಯಲ್ಲಿ 5 ದಿನಗಳ ಕರಾವಳಿ ಉತ್ಸವ ನಡೆಸಲು ಚಿಂತಿಸಲಾಗಿದೆ. ಜಿಲ್ಲೆಯಲ್ಲಿ ವ್ಯವಸ್ಥಿತ ಮತ್ತು ಸುಸ್ಥಿರ ರೀತಿಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ದಿಗೊಳಿಸಲು ವಿಫಲವಾದ ಅವಕಾಶಗಳಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಪೂರಕವಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಾಜಪೂತ್, ಉಪ ವಿಭಾಗಾಧಿಕಾರಿ ಜಯಲಕ್ಷ್ಮ ರಾಯಕೋಡ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಬೇಬಿ ಮೊಗವೀರ ಹಾಗೂ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.