ಪಶ್ಚಿಮಘಟ್ಟ ವಾಯ್ಸ್)ಬೆಂಗಳೂರು: ಯುವ ಶಾಸಕ ಬಿ.ವೈ.ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಹಲವರು ಸಂಭ್ರಮಿಸುತ್ತಿದ್ದರೆ, ಪಕ್ಷದ ಅನೇಕ ಹಿರಿಯ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಮೌನಕ್ಕೆ ಶರಣಾಗಿದ್ದಾರೆ.
ಮೊದಲ ಬಾರಿಗೆ ಶಾಸಕರಾಗಿರುವ ವಿಜಯೇಂದ್ರ ಅವರಿಗೆ ಪಕ್ಷದ ಚುಕ್ಕಾಣಿ ನೀಡಿರುವುದು ಬಿಜೆಪಿ ಹಿರಿಯ ನಾಯಕರು ಹಾಗೂ ಪಕ್ಷಕ್ಕಾಗಿ ದುಡಿದವರನ್ನು‘ರಾಜಕೀಯದಲ್ಲಿ ಇದ್ದರೂ ಇಲ್ಲದಂತೆ ಮಾಡುತ್ತದೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಹುದ್ದೆ ರೇಸ್ ನಿಂದಲೂ ಹೊರಗಿಡುವ ಸಾಧ್ಯತೆಯೂ ಹೆಚ್ಚಾಗುತ್ತದೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ ಮತ್ತು ವಿ.ಸೋಮಣ್ಣ, ಮಾಜಿ ಕೇಂದ್ರ ಸಚಿವ ಬಸನಗೌಡ ಯತ್ನಾಳ್, ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತ್ತು ಇನ್ನೂ ಅನೇಕ ನಾಯಕರು - ವಿಜಯೇಂದ್ರ (47) ಅವರಿಗಿಂತ ವಯಸ್ಸಿನಲ್ಲಿ ಹಾಗೂ ರಾಜಕೀಯದಲ್ಲಿ ಹಿರಿಯರು, ಅನುಭವಿಗಳು. ಈಗ ಮೊದಲ ಬಾರಿಗೆ ಶಾಸಕರಾದವರಿಂದ ನಿರ್ದೇಶನಗಳನ್ನು ಪಡೆಯಬೇಕಾಗುತ್ತದೆ. ಅಲ್ಲದೆ, ವಿಜಯೇಂದ್ರ 2028ರಲ್ಲಿ ಸಿಎಂ ಹುದ್ದೆ ರೇಸ್ ನಲ್ಲಿ ಮುಂಚೂಣಿಯಲ್ಲಿರುತ್ತಾರೆ.
ಹಿರಿಯ ನಾಯಕರು ತಮ್ಮ ರಾಜಕೀಯ ಭವಿಷ್ಯಕ್ಕೆ ಧಕ್ಕೆ ತರುವಂತಹ ಯಾವುದೇ ಹೇಳಿಕೆ ನೀಡದೆ ಮೌನವಾಗಿದ್ದಾರೆ. ಪಕ್ಷದ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ವಿಜಯೇಂದ್ರ ಅವರಿಗೆ ನೀಡಿರುವುದು ಅಧಿಕಾರವಲ್ಲ, ಜವಾಬ್ದಾರಿ ಎಂದು ಹೇಳಿದರು.
ವಿಜಯೇಂದ್ರ ಅವರನ್ನು ಪಕ್ಷದ ಉನ್ನತ ಸ್ಥಾನಕ್ಕೆ ಆಯ್ಕೆ ಮಾಡಿರುವುದರ ಹಿಂದಿನ ಉದ್ದೇಶ ಲೋಕಸಭೆ ಚುನಾವಣೆ ನಂತರ ತಿಳಿಯಲಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ. ಹಿರಿಯ ಲಿಂಗಾಯತ ಮುಖಂಡರಾದ ಬಸವರಾಜ ಬೊಮ್ಮಾಯಿ, ಯತ್ನಾಳ್, ವಿ ಸೋಮಣ್ಣ ಮೌನ ವಹಿಸಿದ್ದಾರೆ. ಅನೇಕ ಹಿರಿಯ ನಾಯಕರು ವಿಜಯೇಂದ್ರ ಅವರಿಗೆ ನೀಡಿರುವ ಹುದ್ದೆ ಬಗ್ಗೆ ಕೋಪವನ್ನು ವ್ಯಕ್ತಪಡಿಸಿದ್ದು, ಪಕ್ಷವು ಮಾಡಿದ ತಪ್ಪಿಗೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದಿದ್ದಾರೆ.
ಬಿಎಸ್ ಯಡಿಯೂರಪ್ಪ ತಮ್ಮ ನಿಷ್ಠಾವಂತ ಅನುಯಾಯಿಗಳಲ್ಲಿ ಒಬ್ಬರನ್ನು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರೆ ಪರವಾಗಿಲ್ಲ, ಆದರೆ ಅವರು ತಮ್ಮ ಮಗನನ್ನು ಆಯ್ಕೆ ಮಾಡಿರುವುದು ಕೆಟ್ಟ ನಿದರ್ಶನವನ್ನು ಸೃಷ್ಟಿಸಿದೆ ಎಂದು ವಿಜಯೇಂದ್ರ ಅವರ ವಿರುದ್ಧ ಕೋಪಗೊಂಡ ಹಿರಿಯ ನಾಯಕರೊಬ್ಬರು ಹೇಳಿದರು. 'ಬಲವಂತವಾಗಿ ಅಧಿಕಾರದಿಂದ ಕೆಳಗಿಳಿದ ನಂತರ ಬಿಜೆಪಿ ವಿರುದ್ಧ ಯಡಿಯೂರಪ್ಪನವರ ಕೋಪ 2023 ರಲ್ಲಿ ಪಕ್ಷದ ವಿನಾಶಕಾರಿ ಪ್ರದರ್ಶನಕ್ಕೆ ಕಾರಣವಾದರೆ, 2024 ರಲ್ಲಿ ಅನೇಕ ನಾಯಕರ ಸಾಮೂಹಿಕ ಕೋಪವು ಪಕ್ಷವನ್ನು ಏನು ಮಾಡುತ್ತದೆ? ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ವಿಶ್ಲೇಷಕರೊಬ್ಬರು ಅಭಿಪ್ರಾಯಪಟ್ಟರು.
ಈ ನಡುವೆ ಮಾತನಾಡಿರುವ ಪಕ್ಷದ ಮುಖ್ಯ ವಕ್ತಾರ ಮಹೇಶ್, 'ಯಾರಿಗೂ ಕೋಪವಿಲ್ಲ. ರಾಜಕೀಯವ ಲೆಕ್ಕಾಚಾರವಾಗಿದೆ. ಜೆಡಿಎಸ್ ನಮ್ಮ ಮಿತ್ರ ಪಕ್ಷವಾಗಿದೆ, ನಮ್ಮ ಕಡೆ ಮತ್ತು ಇತರ ಸಮುದಾಯಗಳಲ್ಲಿಯೂ ಒಕ್ಕಲಿಗ ಬೆಂಬಲಿಗರಿದ್ದಾರೆ. ವಿಜಯೇಂದ್ರ ಅವರಿಗಿಂತ ಚಿಕ್ಕವರಿದ್ದಾಗ ಅನಂತ್‌ಕುಮಾರ್ ಪಕ್ಷದ ಅಧ್ಯಕ್ಷರಾದರು. ಅವರು ಬಿಜೆಪಿಯನ್ನು 40 ರಿಂದ 87 ಕ್ಕೆ ತೆಗೆದುಕೊಂಡರು. ವಯಸ್ಸು ಮತ್ತು ಹಿರಿತನಕ್ಕೆ ಲೆಕ್ಕವಿಲ್ಲ. ಅನಂತ್ ಕುಮಾರ್ ಕಟ್ಟಿದ ಪಕ್ಷವೇ ಎದುರಾಳಿ ಯಡಿಯೂರಪ್ಪ ಸಿಎಂ ಆಗಲು ನೆರವಾಯಿತು. ಈಗಿನ ‘ಪವರ್ ಪಾಲಿಟಿಕ್ಸ್’ನಲ್ಲಿ ವಿಜಯೇಂದ್ರಉತ್ತಮ ಆಯ್ಕೆ ಎಂದಿದ್ದಾರೆ.