ಪಶ್ಚಿಮ ಘಟ್ಟ ವಾಯ್ಸ್
ಭುವನೇಶ್ವರ: ಒಡಿಶಾ ಮೂಲದ ಬೌಧ್ ಮದ್ಯ ತಯಾರಿಕಾ ಕಂಪನಿ ಮತ್ತು ಅದರ ಸಹ ಘಟಕಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ದಾಖಲೆಗಳಿಲ್ಲದ ಬರೋಬ್ಬರಿ 290 ಕೋಟಿ ರೂಪಾಯಿ ಪತ್ತೆಯಾಗಿದ್ದು, ಸಂಸ್ಥೆಯ ಒಂದೇ ಕಾರ್ಯಾಚರಣೆಯಲ್ಲಿ ಸಿಕ್ಕಿದ ದಾಖಲೆಯ ಮೊತ್ತ ಇದಾಗಿದೆ. ಡಿ. 6ರಂದು ಆರಂಭವಾದ ನೋಟು ಎಣಿಕೆ ಕಾರ್ಯ ಇನ್ನೂ ಮುಂದುವರಿದಿರುವುದು ದೇಶದ ಜತೆಯ ಕಣ್ಣು ಕೆಂಪಾಗಿಸಿದೆ.
ಸುಮಾರು 40 ದೊಡ್ಡ ಮತ್ತು ಚಿಕ್ಕದಾದ ನೋಟು ಎಣಿಕೆ ಯಂತ್ರಗಳನ್ನು ಬಳಸಲಾಗಿದೆ. ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಅನೇಕ ಇಲಾಖೆಗಳ ಸಿಬ್ಬಂದಿ ನೋಟು ಎಣಿಸಲು ನಿಯೋಜಿಸಲಾಗಿದ್ದು, ಡಿ.6ರಂದು ಆರಂಭವಾದ ನೋಟು ಎಣಿಕೆ ಮೂರು ದಿನವಾದರೂ ಮುಂದುವರಿದಿದೆ. ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರು ಮದ್ಯ ತಯಾರಿಕಾ ಕಂಪನಿ ಬಲದೇವ್ ಸಾಹು ಆಂಡ್ ಗ್ರೂಪ್ ಕಂಪನಿಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ಆದಾಯ ತೆರಿಗೆ ಇಲಾಖೆಯು 10 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಅದರಲ್ಲಿ ಬಲದೇವ್ ಸಾಹು ಕಂಪನಿಯ ಬೋಲಂಗಿರ್ ಕಚೇರಿಯಿಂದ 30 ಕಿ.ಮೀ ದೂರದಲ್ಲಿರುವ ಸಾತ್ಪುರ ಕಚೇರಿಯಲ್ಲಿ 230 ಕೋಟಿ ರೂಪಾಯಿ ಪತ್ತೆಯಾಗಿದೆ. ಕಚೇರಿಯ ಒಂಬತ್ತು ಕಪಾಟುಗಳಲ್ಲಿ 500, 200 ಮತ್ತು 100 ರೂಪಾಯಿ ನೋಟುಗಳ ಬಂಡಲ್ಗಳನ್ನು ಇರಿಸಲಾಗಿತ್ತು. ವಶಪಡಿಸಿಕೊಂಡ ಹಣವನ್ನು ರಾಜ್ಯದ ಸರ್ಕಾರಿ ಬ್ಯಾಂಕ್‌ಗಳಿಗೆ ಸಾಗಿಸಲು ಹೆಚ್ಚಿನ ವಾಹನಗಳನ್ನು ಇಲಾಖೆಯಿಂದ ಕೋರಲಾಗಿದೆ. ಒಂದೇ ಒಂದು ಗುಂಪು ಮತ್ತು ಅದರ ಸಂಬಂಧಿತ ಘಟಕಗಳ ವಿರುದ್ಧದ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಅತಿ ಹೆಚ್ಚು ನಗದು ವಶವಾದ ಮೊದಲ ಪ್ರಕರಣ ಎನ್ನಲಾಗಿದೆ.
ಬಲದೇವ್ ಸಾಹು ಕಂಪನಿಯ ಬೋಲಂಗಿರ್ ಕಚೇರಿಯಿಂದ 30 ಕಿ.ಮೀ ದೂರದಲ್ಲಿರುವ ಸಾತ್ಪುರ ಕಚೇರಿಯಲ್ಲಿ 230 ಕೋಟಿ ರೂಪಾಯಿ ಪತ್ತೆಯಾದರೆ, ಉಳಿದ ಹಣವನ್ನು ತಿತ್ಲಗಢ, ಸಂಬಲ್ಪುರ್ ಮತ್ತು ರಾಂಚಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಬೌಧ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್ನಲ್ಲಿ ತೆರಿಗೆ ವಂಚನೆ ನಡೆದಿದೆ ಎಂಬ ಶಂಕೆಯ ಮೇರೆಗೆ ಆರಂಭವಾದ ಆದಾಯ ತೆರಿಗೆ ಇಲಾಖೆ ದಾಳಿಯಲ್ಲಿ ಭಾರೀ ಹಗರಣವೇ ಬಯಲಾಗಿದೆ.
ಬಿಜೆಪಿ ವಾಗ್ದಾಳಿ
ಭ್ರಷ್ಟಾಚಾರದ ವಿಷಯವಾಗಿ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ. ದೇಶವಾಸಿಗಳು ಕನಿಷ್ಠ ಈ ನೋಟುಗಳ ರಾಶಿಯನ್ನು ನೋಡಬೇಕು. ನಂತರ ತಮ್ಮ ನಾಯಕರ ಪ್ರಾಮಾಣಿಕತೆ ಬಗ್ಗೆ ಕೇಳಬೇಕು. ಸಾರ್ವಜನಿಕರಿಂದ ಲೂಟಿ ಮಾಡಿದ ಪ್ರತಿ ಪೈಸೆಯನ್ನೂ ವಸೂಲಿ ಮಾಡಲಾಗುವುದು. ಇದು ಮೋದಿಯವರ ಗ್ಯಾರಂಟಿ ಎಂದು ತಿಳಿಸಿದ್ದಾರೆ. ಅಲ್ಲದೆ, ಆಡಳಿತಾರೂಢ ಬಿಜೆಡಿ ಕೂಡ ಐಟಿ ದಾಳಿಯನ್ನು ಸ್ವಾಗತಿಸಿದೆ.
ಕಳೆದ ಮೂರು ದಿನಗಳಿಂದ ದಾಳಿ ನಡೆಯುತ್ತಿದೆ. ಧೀರಜ್ ಸಾಹು ಅವರು ಕಾಂಗ್ರೆಸ್‌ನ ಹಿರಿಯ ಸಂಸದರಾಗಿದ್ದು, ನನಗೆ ದೊರೆತ ಮಾಹಿತಿಯಂತೆ 290 ಕೋಟಿ ರೂ.ನಗದು ಎಣಿಕೆ ಮಾಡಲಾಗಿದೆ, 8 ಲಾಕರ್ಗಳು ಮತ್ತು 10 ಕೊಠಡಿಗಳನ್ನು ತೆರೆಯಬೇಕಿದೆ. ಈ ಸಂಖ್ಯೆ 500 ಕೋಟಿಗೆ ಏರಿದರೆ ನನಗೆ ಆಶ್ಚರ್ಯವಿಲ್ಲ, 500 ಕೋಟಿ ರೂಪಾಯಿ ನಗದು ಮಾತ್ರ, ಆಗ ಆಸ್ತಿ 1,000 ಕೋಟಿ ರೂಪಾಯಿ ಆಗಬಹುದು, ಕಾಂಗ್ರೆಸ್ ಈ ದೇಶದ ಆರ್ಥಿಕತೆಯನ್ನು ಟೊಳ್ಳು ಮಾಡಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪ ಮಾಡಿದ್ದಾರೆ.
ವಸೂಲಿ ಮಾಡಿದ ಹಣ ಒಬ್ಬರಿಗೆ ಮಾತ್ರ ಸೇರಿದ್ದಲ್ಲ, ಭಾರತ್ ಜೋಡೋ ಯಾತ್ರೆಯಲ್ಲಿ ಧೀರಜ್ ಸಾಹು ಹೇಗೆ ಭಾಗವಹಿಸಿದ್ದರು ಎಂಬುದನ್ನು ನೀವು ನೋಡಿರಬಹುದು. ರಾಹುಲ್ ಗಾಂಧಿ ಜೊತೆಗಿನ ಹಲವಾರು ಫೋಟೋಗಳು ವೈರಲ್ ಆಗಿವೆ. ಈ ಹಣ ಛತ್ತೀಸ್‌ಗಢದ ಮಾಜಿ ಸಿಎಂ ಭೂಪೇಶ್ ಬಘೇಲ್ ಅಥವಾ ಜಾರ್ಖಂಡ್ ಸರ್ಕಾರಕ್ಕೆ ಸೇರಿರಬಹುದು. ಆದರೆ, ಪ್ರಧಾನಿ ಮೋದಿ ಅವರು ಭಾನುವಾರ ಹೇಳಿದಂತೆ ಪ್ರತಿ ಪೈಸೆಯೂ ಎಣಿಕೆಯಾಗುತ್ತದೆ ಮತ್ತು ಕಾಂಗ್ರೆಸ್‌ನ ಎಲ್ಲಾ ಭ್ರಷ್ಟ ನಾಯಕರು ಕಂಬಿ ಹಿಂದೆ ಹೋಗುತ್ತಾರೆ ಎಂದರು.
ಜಾರ್ಖಂಡ್ನ ಲೋಹರ್ಡಗಾ ನಿವಾಸಿಯಾಗಿರುವ ಧೀರಜ್ ಸಾಹು ಕಾಂಗ್ರೆಸ್‌ನ ಹಿರಿಯ ನಾಯಕ. 1977ರಲ್ಲಿ ವಿದ್ಯಾರ್ಥಿ ನಾಯಕನಾಗಿ ರಾಜಕೀಯ ಆರಂಭಿಸಿದ ಧೀರಜ್ ಮೂರನೇ ಬಾರಿ ರಾಜ್ಯಸಭಾ ಸಂಸದರಾಗಿದ್ದಾರೆ. ಇದಕ್ಕೂ ಮುನ್ನ ಅವರು 2010-2016ರ ಅವಧಿಯಲ್ಲಿ ಕಾಂಗ್ರೆಸ್‌ನ ರಾಜ್ಯಸಭಾ ಸಂಸದರಾಗಿದ್ದರು. 2018ರಲ್ಲಿ ಅವರು ಜಾರ್ಖಂಡ್ನಲ್ಲಿ ವಿರೋಧ ಪಕ್ಷದ ಜಂಟಿ ಅಭ್ಯರ್ಥಿಯಾಗಿ ಗೆದ್ದರು. ಸಾಹು ಅವರು 2003-05ರಲ್ಲಿ ರಾಜ್ಯ ಕಾಂಗ್ರೆಸ್ ಸಮಿತಿಯ ಸದಸ್ಯರೂ ಆಗಿದ್ದರು. (ಕೃಪೆ ಭುವನೇಶ್ವರ್ ಮಿರರ್)