ಪಶ್ಚಿಮ ಘಟ್ಟ ವಾಯ್ಸ್:
- ಬೆಂಗಳೂರು: ಹಿರಿಯ ಶಾಸಕರೊಬ್ಬರು ಸೇರಿದಂತೆ ಒಟ್ಟು 50 ಮಂದಿ ಬೆಂಗಳೂರು ಉತ್ತರ ತಾಲೂಕಿನಲ್ಲಿ 11,000 ಕೋಟಿ ಮೌಲ್ಯದ ಮೀಸಲು ಅರಣ್ಯ ಭೂಮಿ ಒತ್ತುವರಿ ಮಾಡಿರುವ ವಿಷಯ ಆರ್ ಟಿ ಇ ಮೂಲಕ ಬೆಳಕಿಗೆ ಬಂದಿದೆ. |
ಶಾಸಕರೊಬ್ಬರೇ 324 ಕೋಟಿ ರೂ. ಮೌಲ್ಯದ ಸುಮಾರು 5.5 ಎಕರೆ ಅರಣ್ಯ ಭೂಮಿ ಕಬಳಿಸಿದ್ದು, 60,000 ಚದರ ಅಡಿಯ ಹುಲ್ಲುಹಾಸು, ಹೆಲಿಪ್ಯಾಡ್ ಮತ್ತು ಇತರ ಅದ್ದೂರಿ ಸೌಲಭ್ಯಗಳನ್ನು ನಿರ್ಮಿಸಿಕೊಂಡಿದ್ದಾರೆ.
ಹೊಸ ಏರ್‌ಪೋರ್ಟ್ ರಸ್ತೆಯಲ್ಲಿರುವ ಶಾಸಕರ ಆಸ್ತಿಯು ಈಗಲೂ ದಾಖಲೆಗಳಲ್ಲಿ ಮೀಸಲು ಅರಣ್ಯದ ಮೂಲ ಹೆಸರಾದ "ಜಕ್ಕೂರ್ ಪ್ಲಾಂಟೇಶನ್" ಎಂಬ ಹೆಸರನ್ನು ಹೊಂದಿದೆ ಎಂದು ದಿ ನ್ಯೂ ಎಂಡಿಯನ್ ಎಕ್ಸ್ ಪ್ರೆಸ್ ಗೆ ಸಿಕ್ಕಿರುವ ಅಧಿಕೃತ ದಾಖಲೆಗಳು ಬಹಿರಂಗಪಡಿಸಿವೆ.
ಸೆಪ್ಟೆಂಬರ್ 26, 1940 ರ ಮೈಸೂರು ಗೆಜೆಟ್ ಆದೇಶದಲ್ಲಿ ಬೆಂಗಳೂರು ಉತ್ತರ ತಾಲೂಕಿನ ಜಕ್ಕೂರು ಅಲ್ಲಾಳಸಂದ್ರದಲ್ಲಿ ಸರ್ವೆ ನಂಬರ್ 1, 2, 3, 4 ಮತ್ತು 5 ರಲ್ಲಿ 177 ಎಕರೆ 28 ಗುಂಟೆಗಳನ್ನು ಮೀಸಲು ಅರಣ್ಯ ಭೂಮಿ ಎಂದು ತೋರಿಸುತ್ತದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕರು ಇದೆಲ್ಲವೂ ಕ್ಲೀನ್ ಮತ್ತು ಅಚ್ಚುಕಟ್ಟಾಗಿದೆ. ಇದು ಅರಣ್ಯ ಭೂಮಿ ಅಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲಾಗಿದೆ ಮತ್ತು ಪ್ರಮುಖ ವ್ಯಕ್ತಿಗಳು ಅಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಅರಣ್ಯ ಇಲಾಖೆ ಕಂದಾಯ ಅಧಿಕಾರಿಗಳಿಂದ ದಾಖಲೆ ಕೇಳಿದಾಗ ಬಹುತೇಕ ಕಡೆ ನಾಶವಾಗಿವೆ ಎಂದು ವಿಶೇಷ ತಹಶೀಲ್ದಾರ್ ಗಮನಕ್ಕೆ ತಂದಿದ್ದಾರೆ. ಈ ಪ್ರಕರಣದ ಬೆನ್ನತ್ತಿದ ಎಸಿಎಫ್‌ಗೆ ನೋಟಿಸ್ ಜಾರಿ ಮಾಡಲಾಗಿತ್ತು. ಸಹೋದರರಾದ ಇಬ್ಬರು ಉದ್ಯಮಿಗಳು ಸಹ ಈ ಭೂಮಿಯ ಒಂದು ಭಾಗವನ್ನು ಅತಿಕ್ರಮಿಸಿದ್ದಾರೆ. 19,57,50,00,000 ಮೌಲ್ಯದ 13,05,000 ಚದರ ಅಡಿ ಭೂಮಿಯನ್ನು ಕಬಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಅತಿಕ್ರಮಣ ಕುರಿತು ಪರಿಶೀಲನೆ: ಈಶ್ವರ ಖಂಡ್ರೆ ಭರವಸೆ
ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಸಚಿವ ಈಶ್ವರ ಖಂಡ್ರೆ ಹರಿಹಾಯ್ದಿದ್ದಾರೆ, ಅತಿಕ್ರಮಣಕಾರರಲ್ಲಿ ಹಲವರು ಪ್ರಮುಖ ರಾಜಕಾರಣಿಗಳು ಸೇರಿದ್ದಾರೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭೆಯ ಅಧಿವೇಶನದಲ್ಲಿ ಕೆಲವು ಶಾಸಕರು ಡಿಸಿಎಫ್ ಸೇರಿದಂತೆ ಕೆಲವು ಅರಣ್ಯಾಧಿಕಾರಿಗಳ ವಿರುದ್ಧ ದಂಡದ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಸುಮಾರು 20 ಲಕ್ಷ ಕೋಟಿ ರೂ. ಮೌಲ್ಯದ ಅರಣ್ಯ ಭೂಮಿ ಒತ್ತುವರಿಯಾಗಿದೆ, ಈ ಒತ್ತುವರಿಯಲ್ಲಿ ರಾಜಕಾರಣಿಗಳ ಪಾತ್ರವಿದೆ, ಅವರು ಬೇನಾಮಿ ಹೆಸರಲ್ಲಿ ಕಬಳಿಸಿದ್ದಾರೆ ಎನ್ನಲಾಗಿದೆ, ಅತಿಕ್ರಮಣ ತೆರವುಗೊಳಿಸಿ ಅರಣ್ಯ ಭೂಮಿ ವಶಪಡಿಸಿಕೊಳ್ಳಲು ರಾಜ್ಯ ಸರಕಾರ ಗಂಭೀರವಾಗಿದೆ. ಈ ಸಮಸ್ಯೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.