PGK NEWS( ಪಶ್ಚಿಮ ಘಟ್ಟ ವಾಯ್ಸ್
( ಪಶ್ಚಿಮ ಘಟ್ಟ ವಾಯ್ಸ್:- ಕಾರವಾರ: ರಾಜ್ಯದಲ್ಲಿ ಈ ವರ್ಷ 12 ಜಿಲ್ಲೆಗಳಲ್ಲಿ ಸುಮಾರು 15 ಕೋಟಿ ವೆಚ್ಚದಲ್ಲಿ 100 ಕಾಲುಸಂಕ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ 400 ಕಾಲುಸಂಕಗಳ ನಿರ್ಮಾಣ ಮಾಡುವ ಮೂಲಕ ರಾಜ್ಯದ ಗ್ರಾಮಂತರ ಪ್ರದೇಶದಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಅಪಾಯಕಾರಿ ಸ್ಥಳಗಳಲ್ಲಿ ಸುರಕ್ಷಿತವಾಗಿ ಸಂಚರಿಸಲು ಅನುಕೂಲ ಮಾಡಿಕೊಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಅವರು ಶನಿವಾರ ಶಿರಸಿ ತಾಲ್ಲೂಕಿನ ಶಿವಳ್ಳಿ ಗ್ರಾಮ ಪಂಚಾಯತನ ಹೆಗ್ಗಾರ ಗ್ರಾಮದಲ್ಲಿ ಗ್ರಾಮಬಂಧು ಸೇತುವೆ ನಿರ್ಮಾಣ ಅಡಿಯಲ್ಲಿ ನಿರ್ಮಾಣಗೊಂಡ ಕಾಲುಸಂಕ ಉದ್ಘಾಟನೆ ಮತ್ತು ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ವಿದ್ಯಾರ್ಥಿಗಳ ಸುರಕ್ಷಿತ ಸಂಚಾರಕ್ಕಾಗಿ ಕಾಲುಸಂಕಗಳ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಇಂದು ರಾಜ್ಯದಲ್ಲಿ ಏಕಕಾಲದಲ್ಲಿ ಚಾಮರಾಜನಗರದಿಂದ ಬೆಳಗಾವಿವರೆಗೂ 100 ಕಾಲುಸಂಕಗಳನ್ನು ಉದ್ಘಾಟನೆ ಮಾಡಲಾಗುತ್ತಿದ್ದು, ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಸಾರ್ವಜನಿಕರು ಮಳೆಗಾಲದಲ್ಲಿ ರಭಸದಿಂಧ ಹರಿಯುವ ಹಳ್ಳ ಮತ್ತು ತೊರೆಗಳನ್ನು ಸುರಕ್ಷಿತವಾಗಿ ದಾಟಲು ಅನುಕೂಲವಾವಂತೆ ಕಾಲುಸಂಕಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು ಈ ಮೂಲಕ ಶಾಲಾ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಗೆ ವಿಶೇಷ 28 ಕಾಲು ಸಂಕ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಪ್ರಸ್ತುತ ರಾಜ್ಯದ್ಯಂತ ಕಾಲುಸಂಕ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿರುವ ಕಾಮಗಾರಿಗಳನ್ನು ಮುಂದಿನ ಮಳೆಗಾಲದೊಳಗೆ ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉತ್ತರ ಕನ್ನಡ ಜಿಲ್ಲೆ ಮಲೆನಾಡು, ಪಶ್ಚಿಮ ಘಟ್ಟ ಹಾಗೂ ಕರಾವಳಿ ಪ್ರದೇಶಗಳಿಂದ ಕೂಡಿದ್ದು, ಮಳೆಗಾಲದಲ್ಲಿ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಹಳ್ಳ ಮತ್ತು ತೊರೆಗಳನ್ನು ದಾಟಲು ಮರದ ತುಂಡು, ಹಗ್ಗ ಬಳಸಿಕೊಂಡು ದಾಟುತ್ತಿದ್ದು ದುರ್ಘಟನೆಗಳು ನಡೆಯುವ ಸಂಭವ ಹೆಚ್ಚಾಗಿವೆ. ಈ ನಿಟ್ಟಿನಲ್ಲಿ ಶಾಲೆಗಳು ಇರುವ ಕಡೆ ಪ್ರಥಮ ಆದ್ಯತೆ ಮೇಲೆ ಕಾಲು ಸಂಕಗಳನ್ನು ನಿರ್ಮಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸಚಿವರು, ಶಿವಳ್ಳಿ ಗ್ರಾಮ ಪಂಚಾಯತಿಯ ಹೆಗ್ಗಾರ ಗ್ರಾಮದಲ್ಲಿ ಕಾಲು ಸಂಕ ನಿರ್ಮಾಣದಿಂದ ಹೆಗ್ಗಾರ, ಬೈಲಕೊಪ್ಪ, ಕಂಚಿಮನೆ, ಕಲ್ಮನೆ, ಚಿಂಚಳಿಕೆ ಸೇರಿದಂತೆ ಸುಮಾರು 560 ಗ್ರಾಮಸ್ಥರಿಗೆ ಹಾಗೂ 60 ವಿದ್ಯಾರ್ಥಿಗಳಿಗೆ ಸುರಕ್ಷಿತ ಸಂಚಾರಕ್ಕೆ ಅನುಕೂಲ ಹಾಗೂ ಈ ಗ್ರಾಮಗಳ ದೈನಂದಿನ ಸಂಚಾರದಲ್ಲಿ 2.5 ಕಿ.ಮೀ ನಷ್ಟು ದೂರ ಕಡಿಮೆಯಾಗಿದೆ ಎಂದರು.