ಪಶ್ಚಿಮ ಘಟ್ಟ ವಾಯ್ಸ್: ಉಡುಪಿ: ನಗರಾಭಿವೃದ್ಧಿಗೆ ಪೂರಕವಾದ ಅಂಶಗಳನ್ನು ಒಳಗೊಂಡ “ವಿಷನ್ ಫಾರ್ ಉಡುಪಿ’ ಹೊಸದಾಗಿ ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ) ಸಿದ್ಧಪಡಿಸಲು ಜಿಲ್ಲಾಧಿಕಾರಿಯವರಿಗೆ ಕ್ರೆಡಾೖ ಉಡುಪಿ ವತಿಯಿಂದ ಅಧ್ಯಕ್ಷ ಮನೋಹರ ಎಸ್. ಶೆಟ್ಟಿ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ನಗರಾಭಿವೃದ್ಧಿಗೆ ಪ್ರತೀ 5 ವರ್ಷಕ್ಕೊಮ್ಮೆ ಟೌನ್ ಪ್ಲ್ರಾನರ್ ಒಗ್ಗೂಡಿ ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ) ತಯಾರಿಸಲಾಗುತ್ತದೆ. ನಗರದಲ್ಲಿ ಮುಂದಾಗಬೇಕಾದ ಸಮಗ್ರ ಅಭಿವೃದ್ಧಿ ಮತ್ತು ಮಹತ್ವಾಕಾಂಕ್ಷೆಯ ಯೋಜನೆಗಳ ಬಗ್ಗೆ ಚರ್ಚಿಸಲಾಗುತ್ತದೆ. ಸಿಡಿಪಿಯನ್ನು 2008ರಲ್ಲಿ ಪರಿಷ್ಕರಿಸಲಾಗಿತ್ತು. ನಗರದ ಬೆಳವಣಿಗೆಗೆ ಬಹಳ ಮುಖ್ಯವಾಗಿರುವ ಸಿಡಿಪಿಯನ್ನು 15 ವರ್ಷಗಳಿಂದ ಮರುಪರಿಶೀಲಿಸದೇ ಇರುವುದು ಅಭಿವೃದ್ಧಿಗೆ ತೊಡಕಾಗಿದೆ.
ಇದು ಉದ್ಯಾನವನ, ರಸ್ತೆ ವಿಸ್ತರಣೆ, ಸಭಾಂಗಣಗಳು, ಎಕ್ಸಿಬಿಷನ್ ಹಾಲ್ ಗಳು, ಬೀಚ್ ಅಭಿವೃದ್ಧಿ, ಪ್ರವಾಸೋ ದ್ಯಮ, ಐಟಿ ಪಾರ್ಕ್‌ಗಳ ಅಭಿವೃದ್ಧಿ ಯನ್ನು ಒಳಗೊಂಡಿದೆ. ಪ್ರಸ್ತುತ ವಾರಕ್ಕೆ ಎರಡು ಬಾರಿ ಕಾರ್ಯನಿರ್ವಹಿಸುತ್ತಿದ್ದ ಟಿಪಿಎಂ (ಟೌನ್ ಪ್ಲಾನಿಂಗ್ ಮೆಂಬರ್) ವಾರವಿಡೀ ಕಾರ್ಯನಿರ್ವಹಿಸಲು ಹೊಸದಾಗಿ ಶಾಶ್ವತ ಟಿಪಿಎಂ ಅವರನ್ನು ನೇಮಕಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅವರು ಸಿಡಿಪಿ ತಯಾರಿ ಬಗ್ಗೆ ಸ್ವತಃ ಮುತುವರ್ಜಿ ವಹಿಸಿಕೊಂಡಿರುವುದು ನಾಗರಿಕರಲ್ಲಿ ಹೊಸ ಭರವಸೆ ಮೂಡಿಸಿದೆ. ಅಧಿಕಾರಿಗಳ ಬೆಂಬಲದೊಂದಿಗೆ ಸಮಯಕ್ಕೆ ಸರಿಯಾಗಿ ನೂತನ ಸಿಡಿಪಿ ಕಾರ್ಯವಿಧಾನ ಪೂರ್ಣಗೊಳಿಸಲು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಹೇಶ್‌ಚಂದ್ರ ಮತ್ತು ನಗರಸಭೆ ಪೌರಾಯುಕ್ತ ರಾಯಪ್ಪ, ಶಾಸಕರಾದ ಯಶಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ ಅವರೊಂದಿಗೆ ಕ್ರೆಡಾೖ ಈಗಾಗಲೇ ಚರ್ಚೆ ನಡೆಸಿದೆ. ನಗರಾಭಿವೃದ್ಧಿ ಮತ್ತು ಜನರಿಗೆ ಅನುಕೂಲವಾಗುವ ಹೊಸ ಸಿಡಿಪಿಯನ್ನು ಶೀಘ್ರವಾಗಿ ಜಾರಿಗೆ ತರಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ನಿಯೋಗದಲ್ಲಿ ಪ್ರಧಾನ ಕಾರ್ಯ ದರ್ಶಿ ಸುಧೀರ್ ಶೆಟ್ಟಿ, ಕೋಶಾಧಿಕಾರಿ ಅಮಿತ್ ಅರವಿಂದ್ ಉಪಸ್ಥಿತರಿದ್ದರು.