ಪಶ್ಚಿಮ ಘಟ್ಟ ವಾಯ್ಸ್:-- ಬೆಳಗಾವಿ: ಬಿಜೆಪಿ ದಲಿತ ಮತ್ತು ದಮನಿತ ವರ್ಗಗಳ ವಿರೋಧಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದರು.
ಮೇಲ್ಮನೆಯಲ್ಲಿ ಗುರುವಾರ ಪೂರಕ ಅಂದಾಜಿನ ಮೇಲಿನ ಚರ್ಚೆ ವೇಳೆ ವಿಪಕ್ಷಗಳಿಗೆ ತಿರುಗೇಟು ನೀಡಿದ ಅವರು, ಶೋಷಿತ ವರ್ಗಗಳ ಬಗ್ಗೆ ಬಿಜೆಪಿಗೆ ನಿಜವಾಗಿಯೂ ಕಾಳಜಿ ಇದ್ದರೆ, ಮಹತ್ವಾ ಕಾಂಕ್ಷಿ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಕಾಯ್ದೆ (ಎಸ್‌ಸಿಎಸ್‌ಪಿ-ಟಿಎಸ್‌ಪಿ) ಜಾರಿಗೊಳಿಸಲು ಕೇಂದ್ರದ ಮೇಲೆ ಒತ್ತಡ ಹಾಕಲಿ ಎಂದು ಸವಾಲು ಹಾಕಿದರು.
ದೇಶದಲ್ಲಿ ತಮಿಳುನಾಡು ಹೊರತುಪಡಿಸಿದರೆ ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆ ತಂದ ಏಕೈಕ ರಾಜ್ಯ ಕರ್ನಾಟಕ. ಈ ಕಾಯ್ದೆ ತಂದಿದ್ದು 2013ರ ಇದೇ ಬೆಳಗಾವಿ ಅಧಿವೇಶನದಲ್ಲಿ, ಇದೇ ಕಾಂಗ್ರೆಸ್ ಮತ್ತು ಇದೇ ಸಿದ್ದರಾಮಯ್ಯ. ಇದರಿಂದ ದಲಿತರ ಅಭಿವೃದ್ಧಿಗೆ ನೀಡುವ ಅನುದಾನ ಪ್ರಮಾಣ ನಾಲ್ಕೂವರೆ ಪಟ್ಟು ಹೆಚ್ಚಳ ಆಗಿದೆ. ಇದು ಅವಕಾಶ ವಂಚಿತ ಸಮುದಾಯಗಳ ಬಗ್ಗೆ ನಮ್ಮ ಬದ್ಧತೆಗೆ ಸಾಕ್ಷಿ. ನಿಮಗೂ (ಬಿಜೆಪಿಗೆ) ಬದ್ಧತೆ ಇದ್ದರೆ, ಉದ್ದೇಶಿತ ಕಾಯ್ದೆ ಜಾರಿಗೆ ಕೇಂದ್ರದ ಮೇಲೆ ಒತ್ತಡ ಹಾಕಿ ನೋಡೋಣ ಎಂದು ಸವಾಲು ಹಾಕಿದರು
ದಲಿತ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಲಾಗಿದೆ ಎಂದು ಆರೋಪಿಸುತ್ತಿರುವ ಬಿಜೆಪಿ, ಕಳೆದ 9 ವರ್ಷಗಳಿಂದ ಯಾಕೆ ಮೌನವಾಗಿದೆ? ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆ ತರುವಂತೆ ಕೇಂದ್ರದ ಮೇಲೆ ಯಾಕೆ ಒತ್ತಡ ಹಾಕುತ್ತಿಲ್ಲ? 2008-2013ರ ವರೆಗೆ ಪ. ಜಾತಿ, ಪಂಗಡಕ್ಕೆ ನೀಡಿದ ಅನುದಾನ 22 ಸಾವಿರ ಕೋಟಿ ರೂ. 2013-2018ರ ವರೆಗೆ ಅದೇ ಸಮುದಾಯಕ್ಕೆ 82 ಸಾವಿರ ಕೋಟಿ ರೂ. ನೀಡಲಾಯಿತು. 2018ರ ಬಳಿಕ ಬಂದ ಸರಕಾರವು ಆ ಅನುದಾನವನ್ನು 30 ಸಾವಿರ ಕೋ. ರೂ.ಗೆ ಇಳಿಸಿದ್ದು ಯಾಕೆ ಎಂದು ತರಾಟೆಗೆ ತೆಗೆದುಕೊಂಡರು.
ಬಿಜೆಪಿ ದಲಿತ ಮತ್ತು ಶೋಷಿತ ವಿರೋಧಿ ಎಂದು ಆರೋಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ದಲಿತರು ಹಾಗೂ ಬುಡುಕಟ್ಟ ಸಮುದಾಯದ ಶ್ರೇಯೋಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಗಳನ್ನು (ಎಸ್‌ಸಿಪಿ/ಟಿಎಸ್‌ಪಿ) ಕಾಯ್ದೆಯಾಗಿ ಜಾರಿಗೆ ತರಲಿ ಎಂದು ಬಿಜೆಪಿ ಮುಖಂಡರು ಹಾಗೂ ಅವರ ಚುನಾಯಿತ ಪ್ರತಿನಿಧಿಗಳಿಗೆ ಸವಾಲು ಹಾಕಿದರು.
ವಿಧಾನ ಪರಿಷತ್ತಿನಲ್ಲಿ ಗುರುವಾರ ಪೂರಕ ಅಂದಾಜು ಮಂಡನೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕಾಯ್ದೆಯನ್ನು ಜಾರಿಗೆ ತರುವಂತೆ ಬಿಜೆಪಿ ನಾಯಕರನ್ನು ಕೇಳಿದರು. ಬಿಜೆಪಿ ಎಂಎಲ್ಸಿಗಳು ಮತ್ತು ಸಂಸದರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿ, ದೇಶದಲ್ಲಿ ಇದೇ ರೀತಿಯ ಕಾಯ್ದೆಯನ್ನು ಜಾರಿಗೆ ತರುವಂತೆ ಸವಾಲು ಹಾಕುತ್ತೇನೆ ಎಂದರು.
ಕಾಯ್ದೆ ಕುರಿತು ವಿವರಿಸಿದ ಸಿದ್ದರಾಮಯ್ಯ, ರಾಜ್ಯದಲ್ಲಿನ ಎಸ್‌ಸಿ/ಎಸ್‌ಟಿಗಳ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ಮೀಸಲಿಡಲು ಕಾಂಗ್ರೆಸ್ ಸರ್ಕಾರ 2013ರಲ್ಲಿ ಕಾಯ್ದೆ ತಂದಿತ್ತು.''ಅಲ್ಲಿಯವರೆಗೆ ಸರಕಾರ ಎಸ್‌ಸಿ ಮತ್ತು ಎಸ್‌ಟಿಗಳ ಕಲ್ಯಾಣಕ್ಕಾಗಿ ಸುಮಾರು ರೂ. 6,000 ರಿಂದ 7,000 ಕೋಟಿ ರೂ. ಅನುದಾನ ಮಾತ್ರ ಮಾತ್ರ ನೀಡಲಾಗುತಿತ್ತು. ಆದರೆ ಕಾಯ್ದೆ ಜಾರಿ ನಂತರ ಆಂಧ್ರಪ್ರದೇಶದ ನಂತರ ದೇಶದಲ್ಲಿಯೇ ಕರ್ನಾಟಕ ಎರಡನೇ ರಾಜ್ಯ ಎನಿಸಿಕೊಂಡಿತು. ಈ ಸಮುದಾಯಕ್ಕೆ ವಾರ್ಷಿಕವಾಗಿ ರೂ. 30,000 ಕೋಟಿ ಅನುದಾನ ಒದಗಿಸುತ್ತಿದೆ ಎಂದರು.
ಈ ಮಧ್ಯೆ ಪಿಎಂ ಮೋದಿ ಹೆಸರನ್ನು ಪ್ರಸ್ತಾಪಿಸಿದ ಬಿಜೆಪಿ ಎಂಎಲ್‌ಸಿಗಳು ಆಕ್ಷೇಪ ವ್ಯಕ್ತಪಡಿಸಿ ಕಾಂಗ್ರೆಸ್ ವಿರುದ್ಧ ಕೂಗಲು ಪ್ರಾರಂಭಿಸಿದರು, ಪಕ್ಷವನ್ನು ದಲಿತ ವಿರೋಧಿ ಎಂದು ಕರೆದರು. ಗ್ಯಾರಂಟಿ ಯೋಜನೆಗಳಾಗಿ ರೂ. 11,000 ಕೋಟಿ ಎಸ್‌ಸಿಪಿ/ಟಿಎಸ್‌ಪಿ ನಿಧಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಎಂಎಲ್ಸಿಗಳಾದ ರವಿಕುಮಾರ್ ಮತ್ತು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು. ಕೋಟಾ ಶ್ರೀನಿವಾಸ್ ಪೂಜಾರ್ ಮತ್ತು ವೈ ಎ ನಾರಾಯಣಸ್ವಾಮಿ ಮತ್ತಿತರರು ಇದಕ್ಕೆ ಧ್ವನಿಗೂಡಿಸಿದರು.
ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿಪಡಿಸಿದ ಬಿಜೆಪಿ ಸದಸ್ಯರನ್ನು ನೋಡಿ ಕಾಂಗ್ರೆಸ್ ಸದಸ್ಯರು, ಸಚಿವರು ಬಿಜೆಪಿ ಎಂಎಲ್‌ಸಿಗಳ ವಿರುದ್ಧ ಕಿಡಿಕಾರಿದರು. ಈ ನಡುವೆಯೇ ಭಾಷಣ ಮುಂದುವರಿಸಿದ ಸಿದ್ದರಾಮಯ್ಯ, ಸಂವಿಧಾನ ಬದಲಿಸಲು ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಅವರದೇ ಪಕ್ಷದ ಅನಂತಕುಮಾರ್ ಹೆಗಡೆ ಹೇಳಿದ್ದರು. ಬಿಜೆಪಿಯವರು ಸಂವಿಧಾನ ವಿರೋಧಿಗಳು.“ಇದು ನಿಮ್ಮ ನಿಜವಾದ ಉದ್ದೇಶ. ಹೀಗಾಗಿ ದಲಿತರು ಮತ್ತು ಸಾಮಾಜಿಕ ಸಮಾನತೆಯ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಿಮಗಿಲ್ಲ' ಎಂದು ತಿರುಗೇಟು ನೀಡಿದರು.