ಕರಾವಳಿಯ ನೆಲದ ಭಾಷೆ ತುಳುವಿನಲ್ಲಿ ಲಗಾಡಿ ಎಂದರೆ ಇನ್ನು ಸುಧಾರಣೆಯಾಗದ ಸ್ಥಿತಿ ತಲುಪುತ್ತಿದೆ ಎಂದರ್ಥ. ಈ ಪದಬಳಕೆ ಮಂಗಳೂರು ಬೆಂಗಳೂರು ಸಾಗುವ ವೇಳೆ ಶಿರಾಡಿ ಘಾಟಿಯಲ್ಲಿ ಸಂಚರಿಸುವ ಸಂದರ್ಭ ವಾಹನ ಚಾಲಕರಿಂದ ಯಥೇಚ್ಛವಾಗಿ ಬಳಕೆಯಾಗುತ್ತದೆ. ತುಳು ಭಾಷಿಕರು ಹೇಳುವುದು ಹೀಗೆ "ಎಂಚಿನ ಮಾರ್ರೆ ರೋಡು ಪೂರ್ತಿ ಲಗಾಡಿ" ಅಂದರೆ, ‘’ಏನಿದು? ರಸ್ತೆ ಪೂರ್ತಿ ಹಾಳಾಗಿ ಹೋಗಿದೆ.’’
ಮಂಗಳೂರು-ಹಾಸನ ರಸ್ತೆ ಪ್ರಯಾಣ ಸಂಕಷ್ಟ
ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಹಾಸನವರೆಗಿನ ಪ್ರಯಾಣದಲ್ಲಿ ಬಿ.ಸಿ.ರೋಡ್ ನಿಂದ ಅಡ್ಡಹೊಳೆಯವರೆಗೆ ರಸ್ತೆ ಚತುಷ್ಪಥ ಕಾಮಗಾರಿ ನಡೆಯುತ್ತಿದೆ. ಇನ್ನೊಂದೆಡೆ ಈಗಾಗಲೇ ತಿಂಗಳುಗಟ್ಟಲೆ ರಸ್ತೆ ಬಂದ್ ಮಾಡಿ ಕಾಂಕ್ರೀಟ್ ಕಾಮಗಾರಿ ನಿರ್ವಹಿಸಿ ಭರ್ಜರಿಯಾಗಿಯೇ ಉದ್ಘಾಟನೆಗೊಂಡಿದ್ದ ಶಿರಾಡಿ ಘಾಟಿಯ ಕಾಂಕ್ರೀಟ್ ರಸ್ತೆಯನ್ನು ಯಾರೋ ಹಾರೆ ಪಿಕ್ಕಾಸಿನಿಂದ ಅಗೆದು ಗುಂಡಿ ಮಾಡಿದರೆ ಹೇಗಿರುತ್ತದೋ ಹಾಗೆ ಕಿತ್ತು ಹೋಗಿದೆ. ಹೀಗಾಗಿ ಸಕಲೇಶಪುರದಿಂದ ಬಿ.ಸಿ.ರೋಡ್ ವರೆಗೆ ರಸ್ತೆ ಪ್ರಯಾಣ ಅತ್ಯಂತ ತ್ರಾಸದಾಯಕವಾಗಿದ್ದು, ಪ್ರಯಾಣಿಕರ ಮೈಕೈ ನೋಯುವುದಷ್ಟೇ ಅಲ್ಲ, ವಾಹನಗಳ ಮೇಲ್ಮೈ ಹಾಗೂ ಕ್ಷಮತೆಗೆ ಏಟು ಕೊಟ್ಟಂತಾಗುತ್ತದೆ.
ಶಿರಾಡಿ ಘಾಟ್ ನಲ್ಲಿ ಏನಾಗಿದೆ
ಮಂಗಳೂರಿನಿಂದ ಬೆಂಗಳೂರಿಗೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಇವರಲ್ಲಿ ವಾರಕ್ಕೊಮ್ಮೆ, ವಾರಕ್ಕೆರಡು ಬಾರಿ ಹೋಗಿ ಬರುವವರು ಹಲವರಿದ್ದಾರೆ. ವರ್ಕ್ ಫ್ರಂ ಹೋಂ ಪದ್ಧತಿ ಬಂದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಗಳು ಬೆಂಗಳೂರಿಗೆ ವಾರಕ್ಕೆರಡು ಬಾರಿ ಬಸ್ಸಿನಲ್ಲೋ ಅಥವಾ ತಿಂಗಳಿಗೆರಡು ಬಾರಿ ಕಾರಿನಲ್ಲೋ ಹೋಗಿ ಬರುವವರಿದ್ದಾರೆ. ಕೆಲವರು ವೀಕೆಂಡ್ ನಲ್ಲಿ ಊರಿಗೆ ಬಂದು ಮತ್ತೆ ಬೆಂಗಳೂರಿಗೆ ಹೋಗುವವರೂ ಇದ್ದಾರೆ. ಅಂಥವರೊಬ್ಬರು ಶಿರಾಡಿ ಘಾಟ್ ನಲ್ಲಿನ ನೈಜ ಚಿತ್ರಣವನ್ನು ಸೆರೆಹಿಡಿದು, ಟ್ವೀಟ್ ಮಾಡಿದ್ದಾರೆ. ಹಿಂದೆಯೂ ಶಿರಾಡಿ ಘಾಟ್ ಸಂಪೂರ್ಣ ಹದಗೆಟ್ಟು ಹೋಗಿದ್ದಾಗ ಹ್ಯಾಷ್ ಟ್ಯಾಗ್ ಸೇವ್ ಎನ್.ಎಚ್. 75 (#saveNH75) ಅಭಿಯಾನವನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಬಲ ಮಾಧ್ಯಮವಾದ ಆಗಿನ ಟ್ವಿಟ್ಟರ್ ನಲ್ಲಿ ಮಾಡಿ ಗಮನ ಸೆಳೆದಿದ್ದರು. ಇದು ಕೇಂದ್ರ ಸಚಿವರು ಈ ಕುರಿತು ಗಮನಹರಿಸುವಂತೆ ಮಾಡಿತ್ತು. ಮಾಧ್ಯಮಗಳಲ್ಲಿ ಈ ಕುರಿತು ವರದಿಗಳೂ ಆಗಿದ್ದವು. ಇವರ ಹೆಸರು ಗೋಪಾಲ ಪೈ.