(ಪಶ್ಚಿಮಘಟ್ಟ ವಾಯ್ಸ್ )PGK NEWS ಉಡುಪಿ(ಡಿ.): ವಿಪಕ್ಷ ನಾಯಕನಾಗಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ಹೇಳಬೇಕಾಗುತ್ತದೆ, ವರ್ಗಾವಣೆ ದಂಧೆ ಅನಾಹುತ, ಪರಿಶಿಷ್ಟ ಜಾತಿಗೆ ಮೀಸಲಿಟ್ಟ ಹಣ ದುರ್ಬಳಕೆ, ಬರ ನಿರ್ವಹಣೆಯ ವಿಫಲತೆಯ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಗಮನ ಸೆಳೆಯುತ್ತೇನೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕರಾಗಿ ಆಯ್ಕೆಯಾಗಿರುವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಿವುಡಾಗಿದೆ, ಭಾವನೆಗಳೇ ಇಲ್ಲ, ರೈತರು ಬರದಿಂದ ನಷ್ಟದಲ್ಲಿದ್ದಾರೆ. ಆದರೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ, ಕೇಂದ್ರದಿಂದ ಅನುದಾನ ಪಾಲು ಬರಬೇಕು ಎನ್ನುತ್ತದ್ದಾರೆ. ಹಿಂದೆ ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯಿಂದ ರಾಜ್ಯದ 54 ಲಕ್ಷ ಕುಟುಂಬಗಳಿಗೆ ಅನುಕೂಲವಾಗಿತ್ತು. ಕೇಂದ್ರ ಸರ್ಕಾರ ನೀಡುವ 6 ಸಾವಿರಕ್ಕೆ ಬಿಜೆಪಿ ಸರ್ಕಾರ 4 ಸಾವಿರ ರೂಪಾಯಿ ಸೇರಿಸಿ ಕೊಡುತ್ತಿತ್ತು. ಸಿದ್ದರಾಮಯ್ಯ ಪ್ರಮಾಣವಚನ ತೆಗೆದುಕೊಂಡ ತಕ್ಷಣ ರದ್ದು ಮಾಡಿದ್ದಾರೆ ಎಂದು ಹರಿಹಾಯ್ದ ಕೋಟ, ಸರ್ಕಾರಕ್ಕೆ ಸಡ್ಡು ಹೊಡೆಯುತ್ತೇವೆ, ಸದನದ ಒಳಗೆ ಹೊರಗೆ ಹೋರಾಟ ಮಾಡುತ್ತೇವೆ ಎಂದರು.
ಯಾವುದೇ ಗೊಂದಲಗಳಿಲ್ಲದೆ ಪಕ್ಷದ ಸಂಘಟನೆಯ ಕಾರಣಗಳಿಗೆ ನನ್ನ ಆಯ್ಕೆ ಮಾಡಿದ್ದಾರೆ. ಬಹುದೊಡ್ಡ ರಾಜಕೀಯ ಪಕ್ಷವಾಗಿ ಬಿಜೆಪಿ ಸರ್ವರನ್ನು ಒಳಗೊಂಡು ಎಲ್ಲರಿಗೂ ಪ್ರಾತಿನಿಧ್ಯ ಕೊಡಬೇಕಾಗುತ್ತದೆ. ಸಾಮಾಜಿಕ ನ್ಯಾಯದಡಿ ಎಲ್ಲಾ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ, ಅದರಂತೆ ಆಯ್ಕೆಗಳು ನಡೆಯುತ್ತಿವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತಂಡ ರಚಿಸಲಾಗುತ್ತಿದೆ. ಇದು ಪಕ್ಷ ಮಾಡಿದ ಆಯ್ಕೆ, ಇಲ್ಲಿ ನನ್ನ ಪ್ರಯತ್ನ ಮುಖ್ಯ ಆಗುವುದಿಲ್ಲ ಎಂದವರು ಪ್ರತಿಕ್ರಿಯಿಸಿದ್ದಾರೆ.
ಚುನಾವಣೆಗಾಗಿ ಸಿದ್ದರಾಮಯ್ಯ ಹಿಜಾಬ್ ಹೇಳಿಕೆ
ಸಿದ್ದರಾಮಯ್ಯ ಸರ್ಕಾರ ಗೊಂದಲದ ಗೂಡಾಗಿದೆ ಎಂಬುದಕ್ಕೆ ಅವರ ಹೇಳಿಕೆಗಳೇ ಸಾಕ್ಷಿ. ಹಿಂದಿನ ಸರ್ಕಾರದ ಹಿಜಾಬ್ ನಿಷೇಧ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಸುಪ್ರೀಂ ಕೋರ್ಟ್ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿಲ್ಲ, ಇಂತಹ ಸಂದರ್ಭದಲ್ಲಿ ಮತ್ತೆ ಹಿಜಾಬ್ ಮತ್ತೇ ತರುತ್ತೇವೆ ಎನ್ನುತ್ತಿದ್ದಾರೆ. ಈಗ ಹೇಳಿಕೆ ಬದಲಿಸುತ್ತಿದ್ದಾರೆ ಎಂದು ಕೋಟ ಟೀಕಿಸಿದರು.
ಸಿದ್ದರಾಮಯ್ಯ ಚುನಾವಣೆಯ ದೃಷ್ಟಿಯಲ್ಲಿ ಹೇಳಿಕೆ ಕೊಡುತ್ತಿದ್ದಾರೆ. ಕಾನೂನು, ಕೋರ್ಟ್ ಮೀರಿ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ಓಲೈಸಿ ಬಹುಸಂಖ್ಯಾತರಿಗೆ ಸಡ್ಡು ಹೊಡೆಯುತ್ತಿದ್ದಾರೆ. ಈ ನಡವಳಿಕೆ ರಾಜಕಾರಣಕ್ಕೆ ಭೂಷಣವಲ್ಲ ಎಂದು ಕೋಟ ಎಚ್ಚರಿಕೆ ನೀಡಿದರು.