ಪಶ್ಚಿಮ ಘಟ್ಟ ವಾಯ್ಸ್:
ಹಾವೇರಿ/ : ಶ್ರೀರಾಮನನ್ನು ಪರಿಚಯಿಸಿದವರೇ ಶ್ರೀ ವಾಲ್ಮೀಕಿ ಮಹರ್ಷಿಗಳು. ಹಾಗಾಗಿ, ರಾಮನ ಮಂದಿರ ಪಕ್ಕದಲ್ಲಿ ವಾಲ್ಮೀಕಿ ಮಂದಿರ ಆಗಬೇಕು ಎಂದು ಹಲವು ಬಾರಿ ನಮ್ಮ ಸಮಾಜದ ಸಂಘದಲ್ಲಿ ಒತ್ತಾಯಿಸಿದ್ದೇವೆ. ಸದ್ಯಕ್ಕೆ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ವಾಲ್ಮೀಕಿ ಅವರ ಹೆಸರು ಇಡಲಾಗಿದೆ. ದೇವಸ್ಥಾನ ನಿರ್ಮಾಣಕ್ಕೂ ಬೇಡಿಕೆ ಇಡುತ್ತೇವೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ರಾಣೆಬೆನ್ನೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ದಿನಗಳಿಂದ ಈ ದೇಶದ ಜನರ ನಿರೀಕ್ಷೆ ಇತ್ತು. ನನೆಗುದಿಗೆ ಬಿದ್ದಿದ್ದ ಅಯೋಧ್ಯೆ ರಾಮಮಂದಿರ ಈಗ ನಿರ್ಮಾಣವಾಗಿದೆ. ದೇಶದಲ್ಲಿ ಸೋಮನಾಥ ಮಂದಿರ ಸೇರಿದಂತೆ ಅನೇಕ ಮಂದಿರಗಳಿವೆ. ಇದೀಗ ರಾಮಮಂದಿರವೂ ಸೇರಿದೆ. ಆಧುನಿಕ ವಾಸ್ತುಶಿಲ್ಪದಿಂದ ಕೂಡಿದೆ ಎನ್ನಬಹುದು ಎಂದರು.ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ರಾಜಕೀಯ ಲಾಭ ಪಡೆಯುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ದೇಶದಲ್ಲಿ ಎಲ್ಲದಕ್ಕೂ ರಾಜಕೀಯ ಇದೆ. ರಾಜಕೀಯ ಬಿಟ್ಟು ಏನು ಇಲ್ಲ. ಎಲ್ಲದಕ್ಕೂ ರಾಜಕೀಯ ಇತಿಹಾಸ ಇದೆ. ಅದು ಲಾಭ ಆಗುತ್ತದೋ ನಷ್ಟ ಆಗುತ್ತದೋ ಎಂಬುದು ಚುನಾವಣೆ ನಂತರ ತಿಳಿಯಲಿದೆ. ನಮ್ಮ ದೇಶದಲ್ಲಿ ಒಂದು ಕಡೆ ಅಭಿವೃದ್ಧಿ ರಾಜಕೀಯ ಮತ್ತೊಂದು ಕಡೆ ಧಾರ್ಮಿಕ ಇದೆ. ಏಕಾಏಕಿ ಇದನ್ನು ಬದಲಾಯಿಸಲು ಆಗುವುದಿಲ್ಲ. ಸಮಯ ಬೇಕಾಗುತ್ತದೆ ಎಂದರು.
ಹಿಜಾಬ್ ವಿಚಾರದಲ್ಲಿ ವಿದ್ಯಾರ್ಥಿಗಳಲ್ಲಿ ಗೊಂದಲ ಕುರಿತು ಮಾತನಾಡಿದ ಅವರು, ಹಿಂದೆಯೂ ಈ ಕುರಿತು ಆದೇಶ ಆಗಿರಲಿಲ್ಲ. ಅದು ಕಾನೂನಿನಲ್ಲೂ ಇಲ್ಲ. ಧರಿಸುವುದು ಬಿಡುವುದು ಅವರ ಜಾತಿ, ಕೋಮಿಗೆ ಸೇರಿದ ವಿಚಾರ. ನಡೆಕೊಂಡು ಬಂದಿದೆ. ನಡಕೊಂಡು ಹೋಗಬೇಕಷ್ಟೇ ಎಂದರು.
ಹೊಸದಾಗಿ ಮತ್ತಿಬ್ಬರು ಡಿಸಿಎಂ ವಿಚಾರ ಸದ್ಯ ಇಲ್ಲ. ಮಾಡಬೇಕೋ ಬಿಡಬೇಕೋ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ಕುರಿತು ಈಗಾಗಲೇ ಪ್ರಕರಣ ದಾಖಲಾಗಿದೆ. ಯಾವ ಸಮಯದಲ್ಲಿ ಏನು ಹೇಳಿದ್ದಾರೆ ಎಂಬ ಬಗ್ಗೆ ಕೋರ್ಟ್ ನಿರ್ಣಯ ಮಾಡುತ್ತದೆ. ಕಾದು ನೋಡಬೇಕು. ಮಧು ಬಂಗಾರಪ್ಪ ಚೆಕ್ ಬೌನ್ಸ್ ವಿಚಾರವಾಗಿ ರಾಜೀನಾಮೆ ಕೊಡುವ ಅಗತ್ಯವಿಲ್ಲ. ರಾಜಕೀಯವಾಗಿ ತಪ್ಪು ಮಾಡಿದರೆ ಬೇರೆ. ಅದು ಖಾಸಗಿ ವಿಚಾರ. ವ್ಯವಹಾರದಲ್ಲಿ ಅದೆಲ್ಲ ಸಾಮಾನ್ಯ ಎಂದರು.